ಮದರಸಗಳಿಂದ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ : ಮಕ್ಕಳ ಹಕ್ಕುಗಳ ಸಂಸ್ಥೆಯ ಆರೋಪ

Update: 2022-12-09 15:23 GMT

ಹೊಸದಿಲ್ಲಿ, ಡಿ. 9: ಸರಕಾರದಿಂದ ನಿಧಿ ಮತ್ತು ಮಾನ್ಯತೆ ಪಡೆದಿರುವ ಮದರಸಗಳು ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಪ್ರವೇಶ ಹಾಗೂ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿವೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆರೋಪಿಸಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ (ANI news agency)ವರದಿ ಮಾಡಿದೆ.

ಮದರಸದಲ್ಲಿರುವ ಇಂಥ ವಿದ್ಯಾರ್ಥಿಗಳನ್ನು ದೈಹಿಕವಾಗಿ ತಪಾಸಣೆ ಮಾಡುವುದು ಸೇರಿದಂತೆ, ಈ ಆರೋಪಗಳ ಬಗ್ಗೆ ವಿವರವಾಗಿ ತನಿಖೆ ನಡೆಸುವಂತೆ ಮಕ್ಕಳ ಹಕ್ಕುಗಳ ಸಂಸ್ಥೆಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಮಾನ್ಯತೆ ಪಡೆಯದ ಮದರಸಗಳಲ್ಲಿ ಮುಸ್ಲಿಮೇತರ ಮಕ್ಕಳು ಕಲಿಯುತ್ತಿರುವುದನ್ನು ಪತ್ತೆಹಚ್ಚುವುದಕ್ಕಾಗಿ ಮದರಸಗಳಲ್ಲಿ ತಪಾಸಣೆ ಮಾಡುವಂತೆಯೂ ಅದು ಆದೇಶಿಸಿದೆ.

ಕೆಲವು ಮೂಲಗಳಿಂದ ದೊರೆತ ದೂರುಗಳ ಆಧಾರದಲ್ಲಿ ಮಕ್ಕಳ ಹಕ್ಕುಗಳ ಸಂಸ್ಥೆಯು ಈ ಆರೋಪಗಳನ್ನು ಮಾಡಿದೆ. ಆದರೆ, ದೂರು ನೀಡಿರುವ ಮೂಲಗಳ ಹೆಸರನ್ನು ಅದು ಬಹಿರಂಗಪಡಿಸಿಲ್ಲ.

‘‘ಅದೂ ಅಲ್ಲದೆ, ಇಂಥ ವಿದ್ಯಾರ್ಥಿಗಳಿಗೆ ಕೆಲವು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು ವಿದ್ಯಾರ್ಥಿವೇತನಗಳನ್ನೂ ನೀಡುತ್ತಿವೆ ಎನ್ನುವುದು ಆಯೋಗದ ಗಮನಕ್ಕೆ ಬಂದಿದೆ’’ ಎಂದು ಅದು ಹೇಳಿದೆ.

ಇಂಥ ಕೃತ್ಯಗಳು ಸಂವಿಧಾನದ 28(3) ವಿಧಿಯನ್ನು ಉಲ್ಲಂಘಿಸುತ್ತವೆ ಎಂದು ಅದು ತಿಳಿಸಿದೆ. ಈ ವಿಧಿಯು ಸರಕಾರಿ ಅನುದಾನಿತ ಮತ್ತು ಮಾನ್ಯತೆ ಪಡೆದಿರುವ ಸಂಸ್ಥೆಗಳು ಧಾರ್ಮಿಕ ಶಿಕ್ಷಣ ನೀಡುವುದನ್ನು ನಿಷೇಧಿಸುತ್ತದೆ.

ಮದರಸಗಳಲ್ಲಿ ಕಲಿಯುತ್ತಿರುವ ಮುಸ್ಲಿಮೇತರ ಮಕ್ಕಳು ಔಪಚಾರಿಕ ಶಿಕ್ಷಣ ಪಡೆಯಲು ಶಾಲೆಗಳಿಗೆ ದಾಖಲಾಗಲು ಸಾಧ್ಯವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚಿಸಿದೆ.

Similar News