ಒಳಗಣ್ಣಿನಿಂದ ದೇವರನ್ನು ಕಾಣವುದು ಕನಕದಾಸರ ಭಕ್ತಿ ರಹಸ್ಯ: ಡಾ. ಗೋಪಾಲಾಚಾರ್

Update: 2022-12-09 15:25 GMT

ಉಡುಪಿ: ಕನಕದಾಸರ ಚಿಂತನೆ, ಭಕ್ತಿ ಉಪಾಸನೆಯ ರಹಸ್ಯ ಎಂದರೇ ಅಂತರಂಗದ ಒಳಗಣ್ಣಿನಿಂದ ದೇವರನ್ನು ಕಾಣುವುದಾಗಿತ್ತು. ಅವರು ಕೃಷ್ಣನ ವಿಶ್ವರೂಪ ಕಂಡವರು. ಕನಕದಾಸರು ಎಂದರೆ ಕೃಷ್ಣನಿಗೆ ಅರ್ಪಣೆಯಾದ ಪುಷ್ಪ ಎಂದು ಶ್ರೀವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಬಿ. ಗೋಪಾಲಾಚಾರ್ ಹೇಳಿದ್ದಾರೆ.

ಉಡುಪಿ ಕನಕ ಅಧ್ಯಯನ ಸಂಶೋಧನಾ ಪೀಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಮಾಹೆ, ಎಂಜಿಎಂ ಕಾಲೇಜು, ಪರ್ಕಳ ಸರಿಗಮಪ ಸಂಗೀತ ವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾದ ‘೪೪ನೇ ವಾದಿರಾಜ ಕನಕದಾಸ ಸಂಗೀತೋತ್ಸವ’ ಕನಕ ಗಾಯನ ಮತ್ತು ಹರಿಕಥಾ ಕಾಲಕ್ಷೇಪವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದಾಸರ ಸಂದೇಶಗಳು ನಮ್ಮ ಜೀವನಕ್ಕೆ ಸ್ಪೂರ್ತಿಯಾಗಿದ್ದು, ಅಂತರಂಗದ ಭಕ್ತಿಯ ಚಿಂತನೆ ಆದರ್ಶ ಬದುಕಿಗೆ ದಾರಿಯಾಗಿದೆ. ತುಳುನಾಡಿಗೆ ವಿಶಿಷ್ಟ ಕೊಡುಗೆ ನೀಡಿದವರಲ್ಲಿ ವಾದಿರಾಜರು ಪ್ರಮುಖರು. ಅವರ ದೃಷ್ಟಿಕೋನ ಎಲ್ಲ ವರ್ಗದ ಭಕ್ತರ ಗುರಿಯಾಗಿಸಿ ಅವರಲ್ಲಿ ಧರ್ಮ, ಭಕ್ತಿಯ ಜಾಗೃತಿ ಮೂಡಿಸಿ ದವರು. ಕನ್ನಡ, ಸಂಸ್ಕೃತ, ತುಳು ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೊಡುಗೆ ಅನನ್ಯ. ಎಂದರು.

ಅಧ್ಯಕ್ಷತೆಯನ್ನು ಉಡುಪಿ ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಯಣ ಕಾರಂತ ವಹಿಸಿದ್ದರು. ಮಾಹೆ ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕಿ ಉಮಾ ಉದಯ ಶಂಕರ್ ಕಾರ್ಯಕ್ರಮ ನಿರೂಪಿಸಿದರು.

Similar News