ಹಿಮಾಚಲ ಪ್ರದೇಶ: ಮುಖ್ಯಮಂತ್ರಿ ಆಯ್ಕೆ ನಿರ್ಧಾರವನ್ನು ಹೈಕಮಾಂಡ್ ಗೆ ಬಿಟ್ಟು ಕೊಟ್ಟ ಕಾಂಗ್ರೆಸ್ ಶಾಸಕರು

Update: 2022-12-09 18:29 GMT

ಶಿಮ್ಲಾ: ಹಿಮಾಚಲ ಪ್ರದೇಶದ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಗೊಂದಲಗಳ ನಡುವೆ, ಹಿಮಾಚಲ ಪ್ರದೇಶದ 40 ಕಾಂಗ್ರೆಸ್ ಶಾಸಕರು ಶುಕ್ರವಾರ ಸಂಜೆ ಪಕ್ಷದ ಹೊಸ ನಿರ್ಣಯವನ್ನು ಅಂಗೀಕರಿಸಿದ್ದು, ಸಿಎಂ ಯಾರಾಗಲಿದ್ದಾರೆ ಎಂಬ ನಿರ್ಧಾರ ತೆಗೆದುಕೊಳ್ಳಲು "ಹೈಕಮಾಂಡ್" ಗೆ ಅಧಿಕಾರ ನೀಡಿದ್ದಾರೆ.  ರವಿವಾರದೊಳಗೆ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.

 ಶಾಸಕರ ಸಭೆಯನ್ನು ಕೇಂದ್ರ ಮೇಲ್ವಿಚಾರಕರಾದ ರಾಜೀವ್ ಶುಕ್ಲಾ, ಭೂಪಿಂದರ್ ಹೂಡಾ ಮತ್ತು ಭೂಪೇಶ್ ಬಘೇಲ್ ಸಮನ್ವಯಗೊಳಿಸಲು ಉಪಸ್ಥಿತರಿದ್ದರು. 

ಯಾರಿಗೆ ಹೆಚ್ಚು ಬೆಂಬಲವಿದೆ ಎಂದು ಅಳೆಯಲು ಅವರು ಪ್ರತಿ ಶಾಸಕರೊಂದಿಗೆ ಹೈಕಮಾಂಡ್ ನಿಯೋಗ ಮಾತನಾಡಿದೆ ಎಂದು ndtv.com ವರದಿ ಮಾಡಿದೆ. 

"ನಾವು ನಾಳೆ ನಮ್ಮ ವರದಿಯನ್ನು ಕೇಂದ್ರ ನಾಯಕತ್ವಕ್ಕೆ ಸಲ್ಲಿಸುತ್ತೇವೆ. ಅವರು ಯಾರನ್ನು ಬಯಸುತ್ತಾರೋ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬಹುದು" ಎಂದು ಸಭೆಯ ನಂತರ ಶುಕ್ಲಾ ಹೇಳಿದರು. 

 ಆದಾಗ್ಯೂ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಅವರ ಬೆಂಬಲಿಗರು ಸಭೆಯ ಮುನ್ನ ಶಕ್ತಿ ಪ್ರದರ್ಶನ ನಡೆಸಿದ್ದು, ಸಭೆಗೆ ಹೈಕಮಾಂಡ್ ನಿಯೋಜಿಸಿದ ನಾಯಕರಲ್ಲೊಬ್ಬರಾದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕಾರನ್ನು ತಡೆದು ಸಿಂಗ್ ಪರ ಘೋಷಣೆ ಕೂಗಿದ್ದರು.

Similar News