ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಮತಾ ಬ್ಯಾನರ್ಜಿಗೆ ಮಾತನಾಡಲು ಅವಕಾಶ ಸಿಗಲಿಲ್ಲ:ಬಂಗಾಳದ ಸರಕಾರಿ ಅಧಿಕಾರಿ

Update: 2022-12-10 08:54 GMT

ಕೋಲ್ಕತ್ತಾ: ಭಾರತಕ್ಕೆ ಜಿ-20 ಅಧ್ಯಕ್ಷತೆ ವಹಿಸುವ ಅವಕಾಶ ದೊರೆತ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಲೆಫ್ಟಿನೆಂಟ್ ಗವರ್ನರ್ ಗಳೊಂದಿಗಿನ ವರ್ಚುಯಲ್ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮಾತನಾಡುವ ಅವಕಾಶ ದೊರೆಯಲಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಡಿಸೆಂಬರ್ 5ರಂದು ಹೊಸ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ವರ್ಚುಯಲ್ ಸಭೆಯ ಮುಂದುವರಿದ ಸಭೆ ಇದಾಗಿದ್ದು,ಈ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯಲ್ಲೇ ಉಪಸ್ಥಿತರಿದ್ದ ಮಮತಾ ಬ್ಯಾನರ್ಜಿ ಸಭೆಗೆ ಹಾಜರಾಗಿದ್ದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆಪ್ತ ಮೂಲಗಳ ಪ್ರಕಾರ, ಶುಕ್ರವಾರ ನಡೆದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಮಾತನಾಡುವ ಅವಕಾಶ ದೊರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಇದಕ್ಕೂ ಮುನ್ನ ಅವರ ಭಾಷಣಕ್ಕೆ ಸಿದ್ಧತೆ ಮಾಡಿ ಅದನ್ನು ನೇರಪ್ರಸಾರ ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಯೋಜನೆಯನ್ನು ತಡೆ ಹಿಡಿಯಲಾಯಿತು. ಜಿ-20 ಶೃಂಗಸಭೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಆಯೋಜನೆಗೊಂಡಿರುವ ನಗರಗಳ ಪೈಕಿ ಕೋಲ್ಕತ್ತಾ ಕೂಡಾ ಸೇರಿದೆ ಎಂದು ಹೇಳಿವೆ.

 “ರಾಜ್ಯದಲ್ಲಿ ಮುಂದಿನ ಬಾರಿ ಆಯೋಜನೆಗೊಳ್ಳಲಿರುವ ಜಿ-20 ಶೃಂಗಸಭೆ ಕಾರ್ಯಕ್ರಮಗಳಿಗೆ ಕೈಗೊಂಡಿರುವ ಸಿದ್ಧತೆಯನ್ನು ವಿವರಿಸುವ ಕೆಲವು ದಾಖಲೆಗಳನ್ನು ಮುಖ್ಯಮಂತ್ರಿ ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದರು. ಹೀಗಿದ್ದೂ ಅವರಿಗೆ ಮಾತನಾಡುವ ಅವಕಾಶ ದೊರೆಯಲಿಲ್ಲ” ಎಂದು ಹೇಳಿರುವ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, “ಸಭೆಗೆ ಹಾಜರಾಗಿದ್ದ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಎಚ್.ಕೆ. ದ್ವಿವೇದಿ ಅವರಿಗೂ ಮಾತನಾಡುವ ಅವಕಾಶ ದೊರೆಯಲಿಲ್ಲ” ಎಂದೂ ತಿಳಿಸಿದ್ದಾರೆ.

ಈ ನಡುವೆ, ಸಭೆಗೆ ಎಲ್ಲ ಮುಖ್ಯಮಂತ್ರಿಗಳೂ ಹಾಜರಾಗಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಿ-20 ಶೃಂಗಸಭೆಯನ್ನು ಆಯೋಜಿಸಲು ಅಗತ್ಯವಿರುವ ಸಾಂಘಿಕ ಪ್ರಯತ್ನವನ್ನು ಒತ್ತಿ ಹೇಳಿ, ಅದಕ್ಕಾಗಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಕಾರವನ್ನು ಕೋರಿದರು ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯವು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದೆ.

ಈ ಹಿಂದೆ ಕೂಡಾ ಪ್ರಧಾನಿ ಆಯೋಜಿಸಿದ ಸಭೆಗಳಲ್ಲಿ ತನಗೆ ಮಾತನಾಡುವ ಅವಕಾಶ ದೊರೆಯಲಿಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು.

ಮೇ 2021ರಂದು ಕೋವಿಡ್-19 ಪರಿಸ್ಥಿತಿ ಕುರಿತು ಪ್ರಧಾನಿಯ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಪರಾಮರ್ಶೆ ಸಭೆಯಲ್ಲಿ ಭಾಗವಹಿಸಿದ್ದ ಮಮತಾ ಬ್ಯಾನರ್ಜಿ, ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. ನಂತರ ಆ ಸಭೆಯನ್ನು “ವಿಫಲ’ ಎಂದು ಕರೆದಿದ್ದರು.

ಈ ಕುರಿತು ನಬನ್ನಾದಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಇದೊಂದು ಸಾಧಾರಣ ಮತ್ತು ಭಾರಿ ವಿಫಲ ಸಭೆಯಾಗಿದ್ದು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗಿದೆ. ಈ ನಡೆಯಿಂದ ನಾವು ಅಪಮಾನ ಮತ್ತು ತೇಜೋವಧೆಗೊಳಗಾಗಿದ್ದೇವೆ. ಇದು ದೇಶದ ಒಕ್ಕೂಟ ವ್ಯವಸ್ಥೆಯನ್ನು ಧ್ವಂಸಗೊಳಿಸುವ ಪ್ರಯತ್ನವಾಗಿದೆ” ಎಂದು ಸುದ್ದಿಗಾರರಿಗೆ ತಿಳಿಸಿದರು ಎಂದು indianexpress.com ವರದಿ ಮಾಡಿದೆ.

ಇದಕ್ಕೂ ಮುನ್ನ ಡಿಸೆಂಬರ್, 2021ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ “ಸ್ವಾತಂತ್ರ್ಯ ಅಮೃತ ಮಹೋತ್ಸವ” ಸಭೆಯಲ್ಲಿ ತನ್ನ ಹೆಸರು ಭಾಷಣಕಾರರ ಪಟ್ಟಿಯಲ್ಲಿದ್ದರೂ, ಮಾತನಾಡಲು ಅವಕಾಶ ನಿರಾಕರಿಸಲಾಯಿತು ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದರು. 

Similar News