ಹಿಮಾಚಲ ಪ್ರದೇಶದ ಗೆಲುವು ಕರ್ನಾಟಕಕ್ಕೆ ದಿಕ್ಸೂಚಿ: ಹರೀಶ್ ಕುಮಾರ್

Update: 2022-12-10 09:23 GMT

ಮಂಗಳೂರು, ಡಿ.10: ಚುನಾವಣೆಯಲ್ಲಿ ಗುಜರಾತ್ ರಾಜ್ಯವೊಂದರಲ್ಲಿ ಗೆದ್ದು ಮೋದಿ ಮೇನಿಯಾ, ಕರ್ನಾಟಕದ ಚುನಾವಣೆಗೆ ದಿಕ್ಸೂಚಿ ಎನ್ನುವುದು ಬಿಜೆಪಿಯ ಚುನಾವಣಾ ಭಯ. ರಾಜ್ಯಕ್ಕೆ ಹಿಮಾಚಲದ ಗೆಲುವು ದಿಕ್ಸೂಚಿಯಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆಯಲ್ಲಿ ಕಳೆದುಕೊಂಡಿಲ್ಲ. ಬದಲಾಗಿ ಹಿಮಾಚಲದಲ್ಲಿ ಗೆದ್ದುಕೊಂಡಿದೆ. ಉಪ ಚುನಾವಣೆಗಳಲ್ಲೂ ಎರಡು ಸ್ಥಾನ ಗಳಿಸಿಕೊಂಡಿದ್ದೇವೆ. ಆದರೆ ಬಿಜೆಪಿ ಅಧಿಕಾರದಲ್ಲಿದ್ದ ಹಿಮಾಚಲವನ್ನು ಮಾತ್ರವಲ್ಲದೆ, ಮೋದಿಯವರು ಆಡಳಿತ ನಡೆಸುತ್ತಿರುವ ದಿಲ್ಲಿಯಲ್ಲಿ, 15 ವರ್ಷಗಳ ಕಾಲ ಬಿಜೆಪಿ ಅಧಿಕಾರ ನಡೆಸಿದ್ದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಭಯದಿಂದ ಮಾಜಿ ಮುಖ್ಯಮಂತ್ರಿಯನ್ನು ಸಿದ್ರಾಮುಲ್ಲಾ ಖಾನ್ ಎಂದು ಟೀಕಿಸುತ್ತಾರೆ. ಇದಕ್ಕೆ ಅವರು ತಕ್ಕ ಉತ್ತರ ನೀಡಿದ್ದಾರೆ. ಅವರೊಬ್ಬ ಪ್ರಭಾವಿ ನಾಯಕ. ಅಂತಹ ನಾಯಕ ಬೇರೆ ಯಾರೂ ಇಲ್ಲ ಎಂದು ಹರೀಶ್ ಕುಮಾರ್ ಹೇಳಿದರು.

ಸಾಧನೆಗೈದ ಮಹಾನ್ ನಾಯಕರ ಹೆಸರು ಇಟ್ಟು ಸ್ಮರಣೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಅಂತಹ ಹೆಸರುಗಳನ್ನು ಬದಲಿಸುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಗುಜರಾತ್ ಸ್ಟೇಡಿಯಂಗೆ ನೆಹರೂ ಹೆಸರು ಇಡಲಾಯಿತು. ಮಹಾನ್ ನಾಯಕರ ಸ್ಮರಣೆ ಮಾಡುವುದಾದರೆ ವಲ್ಲಭಯಾಯಿ ಪಟೇಲ್ ಹೆಸರು ಇಡಬಹುದಾಗಿತ್ತು. ಇದೀಗ ಸ್ವಾತಂತ್ರ್ಯ ಹೋರಾಟಗಾರ ವೌಲಾನ ಅಬುಲ್ ಕಲಾಂ ಆಝಾದ್ ಹೆಸರಿನಲ್ಲಿ ನೀಡುತ್ತಿದ್ದ ಆಝಾದ್ ಫೆಲೋಶಿಪನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ರದ್ದು ಪಡಿಸಿದ್ದಾರೆ. ಪ್ರಧಾನಿಯವರು ಸ್ವಾತಂತ್ರ ಹೋರಾಟಗಾರರ ಬಗ್ಗೆ ಮಾತನಾಡುತ್ತಾರೆ. ಆದರೆ ಮಾತಿನಲ್ಲಿ ಕೊಡುವ ಗೌರವ ಕೃತ್ಯದಲ್ಲಿ ಇಲ್ಲ ಎಂದು ಹರೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಮುಸ್ಲಿಮರ ಹೆಸರು ಹೇಳದೆ ಬಿಜೆಪಿಗೆ ಏನೂ ಆಗುವುದಿಲ್ಲ. ಅವರ ಹೆಸರು ಹೇಳಿಕೊಂಡೇ ಇವರು ಬದುಕುತ್ತಿರುವುದು. ಓವೈಸಿಯ ಪಕ್ಷ, ಎಸ್‌ಡಿಪಿಐಯಂತಹ ಪಕ್ಷಗಳಿಗೆ ಫಂಡಿಂಗ್ ಮಾಡುವುದು ಬಿಜೆಪಿ. ಹಾಗಾಗಿ ಸಬ್‌ಕಾ ಸಾಥ್ ಸಬಕಾ ವಿಕಾಸ್ ಎಂದು ಅಧಿಕಾರಕ್ಕೆ ಬಂದಿರುವ ಬಿಜೆಪಿ ರಾಜ್ಯದಲ್ಲಿಯೂ ಸರ್ವನಾಶಕ್ಕೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಯಾವ ಮೋದಿ ಮೋನಿಯಾ ಆದರೂ ಶೇ. 40 ಭ್ರಷ್ಟಾಚಾರ, ಸ್ವಜನ ಪಕ್ಷ, ಪೊಲೀಸರ ದೌರ್ಜನ್ಯ, ಆಡಳಿತ ಯಂತ್ರದ ಕುಸಿತ, ಅಕ್ರಮ ಮರಳುಗಾರಿಕೆ, ಜನವಿರೋಧಿ ನೀತಿ ಬಗ್ಗೆ ತೀರ್ಮಾನಿಸಲಿದ್ದಾರೆ. ಎಲ್ಲಾ ಚುನಾವಣಾ ಫಲಿತಾಂಶದ ಭಯದಿಂದ ಬಿಜೆಪಿಯ ರಾಜ್ಯದ ನಾಯಕರು ಗುರಜಾತ್ ಗೆಲುವನ್ನು ಸಂಭ್ರಮಿಸುತ್ತಾ, ಮೋದಿ ಮೇನಿಯಾ ಎನ್ನುತ್ತಿದ್ದಾರೆ. ಆದರೆ ಮೋದಿಯವರನ್ನು ಬಿಟ್ಟು ಬೇರೆ ಯಾರೂ ನಾಯಕರ ಮುಖ ಇಲ್ಲದಂತಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಅಚ್ಚೇ ದಿನ್ ಅಂಬಾನಿ ಮತ್ತು ಅದಾನಿಗೆ ಮಾತ್ರ ಬಂದಿರುವುದು. ಹಿಮಾಚಲ ಪ್ರದೇಶದಲ್ಲಿ ಅದಾನಿ ಎಗ್ರಿ ಪ್ರೆಶ್ ಕಂಪನಿ ಮಾಡಿ, ಕಡಿಮೆ ಬೆಲೆಗೆ ಸೇಬು ಖರೀದಿಸಿ ಸಂಸ್ಕರಿಸಿ ಬೆಲೆ ಏರಿಕೆ ಸೃಷ್ಟಿಸುವುದನ್ನು ವಿರೋಧಿಸಿ ಅಲ್ಲಿನ ಸೇಬು ಬೆಳೆಗಾರರು ಸರಕಾರದ ವಿರುದ್ಧ ನಿಂತರು. ಅಂಬಾನಿ ಹಾಗೂ ಅದಾನಿಗಾಗಿಯೇ ದೇಶದಲ್ಲಿ ಎಲ್ಲಾ ಕಾನೂನು ನೀತಿಗಳನ್ನು ಬದಲಿಸಲಾಗುತ್ತಿದೆ. ಸರಕಾರಿ ಆಸ್ತಿಯನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹರೀಶ್ ಕುಮಾರ್ ಆರೋಪಿಸಿದರು.

ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಲೋಕಾಯುಕ್ತ ದಾಳಿ ನಡೆಸುವ ಪರಿಸ್ಥಿತಿ ಎದುರಾಗಿದೆ. ನಾಲ್ಕು ವರ್ಷಗಳಲ್ಲಿ ಅಕ್ರಮ ತಡೆಯುವಲ್ಲಿ ಗಣಿ ಇಲಾಖೆ, ಪೊಲೀಸ್, ಆರ್‌ಟಿಒ, ತಹಶೀಲ್ದಾರ್, ವಿಎ ಸೇರಿದಂತೆ ಸಂಬಂಧಪಟ್ಟವರು ತಡೆಯುವಲ್ಲಿ ವಿಫಲರಾಗಿದ್ದಾರೆ. ವಿಧಾನ ಪರಿಷತ್‌ನಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಮಲೇಶ್ಯದಿಂದ ತಂದು ಹಾಕಿರುವ ಮರಳು ವಿಲೇ ಆಗುತ್ತಿಲ್ಲ. ಬಹುಶ: ಅದರಿಂದ ಶೇ. 40 ಸಿಕ್ಕಿಲ್ಲವೇ ಎಂದು ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕವಿತಾ ಸನಿಲ್, ಅಪ್ಪಿ, ವಿಶ್ವಾಸ್ ಕುಮಾರ್ ದಾಸ್, ಶುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ಡಿ.17ರಂದು ಸಿದ್ದರಾಮಯ್ಯ ಬೆಳ್ತಂಗಡಿಗೆ:

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಾಟಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ. 17ರಂದು ನಡೆಯಲಿದೆ. ಇದಲ್ಲದೆ ಮಾಜಿ ಶಾಸಕ ವಸಂತ ಬಂಗೇರ ಅವರ ಪುಸ್ತಕ ಬಿಡುಗಡೆಯ ವೈಯಕ್ತಿಕ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಲಿದ್ದಾರೆ ಎಂದು ಹರೀಶ್ ಕುಮಾರ್ ತಿಳಿಸಿದರು.

Similar News