‘2002ರಲ್ಲಿ ಅವರಿಗೆ ಪಾಠ ಕಲಿಸಿದ್ದೇವೆ’ ಅಮಿತ್ ಶಾ ಹೇಳಿಕೆ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ: ಚುನಾವಣಾ ಆಯೋಗ

Update: 2022-12-10 11:02 GMT

ಹೊಸದಿಲ್ಲಿ,ಡಿ.10: ಚುನಾವಣಾ ಆಯೋಗವು ಇತ್ತೀಚಿಗೆ ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ‘2002ರಲ್ಲಿ ಪಾಠ ಕಲಿಸಿದ್ದೇವೆ ’ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಯು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಆಯೋಗದಲ್ಲಿನ ಮೂಲಗಳು ತಿಳಿಸಿವೆ.

ನ.25ರಂದು ರ್ಯಾಲಿಯಲ್ಲಿ ಮಾತನಾಡಿದ್ದ ಶಾ, 2002ರಲ್ಲಿ ಬಿಜೆಪಿಯು ದಂಗೆಕೋರರಿಗೆ ಪಾಠವನ್ನು ಕಲಿಸಿದೆ ಎಂದು ಹೇಳಿದ್ದರು. ಶಾ ಭಾಷಣವು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ನಿವೃತ್ತ ಸರಕಾರಿ ಅಧಿಕಾರಿ ಇಎಎಸ್ ಶರ್ಮಾ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರನ್ನು ಪರಿಶೀಲಿಸಿದ್ದ ಆಯೋಗವು ಗುಜರಾತ್ ಮುಖ್ಯ ಚುನಾವಣಾಧಿಕಾರಿಗಳಿಂದ ವರದಿಯನ್ನು ಕೋರಿತ್ತು. ಗೃಹಸಚಿವರು ‘ದುಷ್ಕರ್ಮಿಗಳಿಗೆ’ ಪಾಠ ಕಲಿಸಿದ್ದನ್ನು ಉಲ್ಲೇಖಿಸಿದ್ದರೇ ವಿನಃ ಯಾವುದೇ ನಿರ್ದಿಷ್ಟ ಸಮುದಾಯಕ್ಕಲ್ಲ ಎನ್ನುವುದನ್ನು ಆಯೋಗವು ಕಂಡುಕೊಂಡಿದೆ ಎಂದು ಮೂಲಗಳು ತಿಳಿಸಿದವು.

ತನ್ನ ದೂರಿಗೆ ಮತ್ತು ನಂತರ ಬರೆದಿದ್ದ ಎರಡು ಪತ್ರಗಳಿಗೆ ಚುನಾವಣಾ ಆಯೋಗವು ಉತ್ತರಿಸಿಲ್ಲ ಎಂದು ಶುಕ್ರವಾರ ತಿಳಿಸಿದ್ದ ಶರ್ಮಾ, ಆರ್ಟಿಐ ಕಾಯ್ದೆಯಡಿ ಆಯೋಗವು ಸಾರ್ವಜನಿಕ ಪ್ರಾಧಿಕಾರವಾಗಿದೆ ಮತ್ತು ಸ್ವಯಂಪ್ರೇರಿತವಾಗಿ ದಾಖಲೆಗಳನ್ನು ಬಹಿರಂಗಗೊಳಿಸುವುದು ಅಗತ್ಯವಾಗಿದೆ, ಹೀಗಾಗಿ ಅದು ತನ್ನ ವೆಬ್ಸೈಟ್ ಮೂಲಕ ತನ್ನ ನಿರ್ಣಯವನ್ನು ಬಹಿರಂಗಗೊಳಿಸಬೇಕು ಎಂದು ಹೇಳಿದರು.

ತನ್ಮಧ್ಯೆ ಇತ್ತೀಚಿಗೆ ಫಲಿತಾಂಶಗಳು ಪ್ರಕಟಗೊಂಡ ಗುಜರಾತ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಆಯೋಗದ ಸಿ-ವಿಜಿಲ್ ಆ್ಯಪ್ ಮೂಲಕ ಅನುಕ್ರಮವಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ 6,000ಕ್ಕೂ ಅಧಿಕ ಮತ್ತು 1,000 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಗುಜರಾತಿನ 5,100 ಪ್ರಕರಣಗಳು ಮತ್ತು ಹಿಮಾಚಲ ಪ್ರದೇಶದ 800 ಪ್ರಕರಣಗಳಲ್ಲಿ ಹುರುಳಿದೆ ಎನ್ನುವುದು ಕಂಡುಬಂದಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

Similar News