ಮೂರನೇ ಏಕದಿನ: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2022-12-10 13:30 GMT

ಚಟ್ಟೋಗ್ರಾಮ್, ಡಿ.10: ಇಶಾನ್ ಕಿಶನ್ ಚೊಚ್ಚಲ ದ್ವಿಶತಕ ಹಾಗೂ ವಿರಾಟ್ ಕೊಹ್ಲಿ ಅವರ ಶತಕ, ಶಾರ್ದೂಲ್ ಠಾಕೂರ್(3-30) ನೇತೃತ್ವದಲ್ಲಿ ಬೌಲರ್‌ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 227 ರನ್‌ಗಳಿಂದ ಗೆದ್ದುಕೊಂಡಿದೆ.

ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮುಖಭಂಗದಿಂದ ಪಾರಾಗಿದೆ. ಈಗಾಗಲೇ ಮೊದಲೆರಡು ಪಂದ್ಯಗಳನ್ನು ಜಯಿಸಿರುವ ಬಾಂಗ್ಲಾದೇಶ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 409 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಬಾಂಗ್ಲಾದೇಶ 34 ಓವರ್‌ಗಳಲ್ಲಿ 182 ರನ್‌ಗೆ ಆಲೌಟಾಯಿತು. ಬಾಂಗ್ಲಾದೇಶ ಪರ ಶಾಕಿಬ್ ಅಲ್ ಹಸನ್(43 ರನ್, 50 ಎಸೆತ), ಲಿಟನ್ ದಾಸ್(29 ರನ್, 26 ಎಸೆತ)ಹಾಗೂ ಯಾಸಿರ್ ಅಲಿ(25,30 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು.

ಭಾರತದ ಪರ ಬೌಲಿಂಗ್ ವಿಭಾಗದಲ್ಲಿ ಠಾಕೂರ್(3-30)ಯಶಸ್ವಿ ಬೌಲರ್ ಎನಿಸಿಕೊಂಡರು. ಅಕ್ಷರ್ ಪಟೇಲ್(2-22), ಉಮ್ರಾನ್ ಮಲಿಕ್(2-43) ತಲಾ ಎರಡು ವಿಕೆಟ್ ಪಡೆದಿದ್ದಾರೆ.

Similar News