ರಾಜ್ಯದಲ್ಲಿ 35,000 ಶಾಸನಗಳು ಪತ್ತೆ: ಪುಂಡಿಕಾ ಗಣಪಯ್ಯ ಭಟ್
ಉಡುಪಿ, ಡಿ.10: ಇದುವರೆಗೆ ಒಟ್ಟು 35,000 ಶಾಸನಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ ಸುಮಾರು 2000 ಶಾಸನಗಳು ತುಳುನಾಡಿಗೆ ಸೇರಿದ್ದು. ಉಡುಪಿ ಜಿಲ್ಲೆಯ ಬಾರಕೂರು ಇಂದು ಹಾಳು ಹಂಪಿಯಾಗಿದೆ. ಸುಮಾರು 130 ಶಾಸನಗಳಿದ್ದ ಬಾರಕೂರಿನಲ್ಲಿ ಇಂದು ಬಹುತೇಕ ಮರೆಯಾಗಿವೆ ಎಂದು ಮೂಡಬಿದ್ರೆ ದವಳಾ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಪುಂಡಿಕೈ ಗಣಪಯ್ಯ ಭಟ್ ಹೇಳಿದ್ದಾರೆ.
ನಗರದ ಪೂರ್ಣಪ್ರಜ್ಞ ಪದವಿ ಕಾಲೇಜಿನ ಇತಿಹಾಸ ವಿಭಾಗದ ಆಶ್ರಯದಲ್ಲಿ ಇಂದು ನಡೆದ ಪರಂಪರಾ ಕೂಟದ ಉದ್ಘಾಟನಾ ಸಮಾರಂಭವನ್ನು ಉದ್ಙಾಟಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಇಂದು ಸಾಕಷ್ಟು ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿವೆ. ಅವುಗಳನ್ನು ಇದ್ದ ಹಾಗೆ ಕಟ್ಟಬೇಕು. ಅದರ ಪರಂಪರೆಗೆ ವಿರುದ್ಧವಾಗಿ ಕಟ್ಟಬಾರದು ಎಂದು ಡಾ.ಗಣಪಯ್ಯ ಭಟ್ ಹೇಳಿದರು.
ಪರಂಪರೆ ಅಂದರೆ ಹಿಂದಿನವರಿಂದ ಪಡೆದದ್ದು ಮತ್ತು ಹಿಂದಿನವರು ಬಿಟ್ಟು ಹೋದ ವಿಚಾರಗಳು. ಶಾಸನಗಳು, ದೇವಾಲಯಗಳು ಹಾಗೂ ಕೋಟೆ ಇವುಗಳ ಸಂರಕ್ಷಣೆ ಪಂರಪರೆಯ ಸಂರಕ್ಷಣೆ ಎಂದು ಕರೆಸಿಕೊಳ್ಳುತ್ತದೆ ಎಂದವರು ತಿಳಿಸಿದರು.
ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ. ಭಟ್ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಪಾರ್ಶ್ವನಾಥ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಸುಕನ್ಯಾ ಅತಿಥಿಗಳನ್ನು ಪರಿಚಯಿಸಿದರು. ಆಕಾಶ್, ಶ್ರೀರಕ್ಷಾ ಹೆಗ್ಡೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಚೇತನ ಪೈಕಾರ್ಯಕ್ರಮ ನಿರೂಪಿಸಿದರೆ, ಸುಜನ ವಂದಿಸಿದರು.