ಈ ವಾರ

Update: 2022-12-11 03:51 GMT

ಎಲ್ಲಿ ಹೋಯ್ತು ಘನತೆ?

ಈ ವಾರವೆಲ್ಲ ಹೆಚ್ಚು ಸುದ್ದಿಯಾದದ್ದು ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ರಾಜಕೀಯ ಟೀಕೆಗಳ ನಡುವೆ ಮುಸ್ಲಿಮ್ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದ ವಿಚಾರ. ಇದು ತೀವ್ರ ಟೀಕೆಗೆ ಗುರಿಯಾಗಿದೆ. ಬಹಳ ಸಮಯದಿಂದಲೂ ಇಂತಹ ಕೆಲಸವನ್ನು ಮಾಡಿಕೊಂಡೇ ಬಂದಿರುವ ಬಿಜೆಪಿ ಇತ್ತೀಚೆಗೆ ಮತ್ತೆ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಟೀಕಿಸಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಬೊಮ್ಮಾಯಿ ಅವರು ಮುಸ್ಲಿಮ್ ಟೋಪಿ ಧರಿಸಿರುವಂಥ ಫೋಟೊ ಹಾಕಿ, ಇವರನ್ನು ಬೊಮ್ಮಾಯುಲ್ಲಾ ಖಾನ್ ಎಂದು ಕರೆಯಬಹುದೇ ಎಂದು ಪ್ರಶ್ನಿಸಿತ್ತು. 

ಎರಡೂ ಪಕ್ಷಗಳ ಈ ನಡೆಯನ್ನು ಕಟುವಾಗಿ ಟೀಕಿಸಿದವರು ಜೆಡಿಎಸ್ ನಾಯಕ ಸಿ.ಎಂ. ಇಬ್ರಾಹೀಂ. ಬಿಜೆಪಿಗಂತೂ ಮುಸಲ್ಮಾನರೆಂದರೆ ಅಪಥ್ಯ ಮತ್ತು ಸದಾ ಕಾಲ ಮುಸಲ್ಮಾನರ ಮೇಲೆ ದ್ವೇಷ ಕಾರುವುದೇ ಜಾಯಮಾನ. ಆದರೆ ಮುಸಲ್ಮಾನರನ್ನು ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುವ ಕಾಂಗ್ರೆಸ್ ಪಕ್ಷ ಕೂಡ ಖಾನ್, ಉಲ್ಲಾ, ಶೇಖ್ ಎಂಬ ಮುಸಲ್ಮಾನರ ಹೆಸರುಗಳನ್ನು ಮತ್ತು ವೇಷಭೂಷಣಗಳನ್ನು ವ್ಯಂಗ್ಯ ಮತ್ತು ಹೀಯಾಳಿಕೆಗೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಇಬ್ರಾಹೀಂ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ. 

ರಾಜ್ಯಾದ್ಯಂತ ಎಲ್ಲ ಪ್ರಜ್ಞಾವಂತರೂ ಕಾಂಗ್ರೆಸ್‌ನ ಈ ಪ್ರತಿಕ್ರಿಯೆಯನ್ನು ಕಟುವಾಗಿ ಟೀಕಿಸಿದ್ದಾರೆ. ಬಿಜೆಪಿ ಟೀಕೆಗೆ ಅದೇ ಮಟ್ಟಕ್ಕೆ ಇಳಿದು ಕಾಂಗ್ರೆಸ್ ಪ್ರತಿಕ್ರಿಯಿಸಬೇಕಿರಲಿಲ್ಲ. ಬಿಜೆಪಿಗೆ ಸಹಿಷ್ಣುತೆ ಇಲ್ಲವೆಂದಾದರೆ ಇವರಿಗೂ ಇಲ್ಲವೇ? ಸಿದ್ದರಾಮಯ್ಯ ಅವರೇನೋ ನನ್ನನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದರೆ ಅದಕ್ಕೂ ಖುಷಿಪಡುವೆ ಎಂದರು. ಆದರೆ ಪಕ್ಷದ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಬಿಜೆಪಿ ಟೀಕೆಗೆ ಅದೇ ಧಾಟಿಯ ಟೀಕೆಯ ಬದಲು ಸಿದ್ದರಾಮಯ್ಯನವರ ಈ ಮಾತು ವ್ಯಕ್ತವಾಗಿದ್ದರೆ ಘನತೆ ಇರುತ್ತಿತ್ತು.

ಮತ್ತೆ ರಾಜಕೀಯಕ್ಕೆ ರೆಡ್ಡಿ?

ಬಹುಕೋಟಿ ಗಣಿ ಹಗರಣದಲ್ಲಿ ಆರೋಪಿಯಾಗಿ ರಾಜಕೀಯದಿಂದ ದೂರವಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತೆ ರಾಜಕೀಯ ಪ್ರವೇಶಕ್ಕೆ ಸಿದ್ಧತೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕೋರ್ಟ್ ಷರತ್ತಿನ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ವಾಸ್ತವ್ಯಕ್ಕೆ ಅವಕಾಶವಿಲ್ಲದಿರುವುದರಿಂದ ಕೊಪ್ಪಳದ ಗಂಗಾವತಿಯಲ್ಲಿ ಬಂಗಲೆ ಖರೀದಿಸಿರುವ ಅವರು, ಅಲ್ಲಿಂದಲೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬುದು ಈಗಿರುವ ಸುದ್ದಿ. ಗಂಗಾವತಿಯಿಂದಲೇ ಮುಂದಿನ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದ್ದು, ಮೊನ್ನೆ ಅಂಜನಾದ್ರಿ ಬಳಿಯ ಪಂಪಾ ಸರೋವರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹನುಮಮಾಲಾ ಧಾರಣೆ ಮಾಡಿದ್ದು ಇದಕ್ಕೆ ಪೂರ್ವಭಾವಿ ಕಾರ್ಯಕ್ರಮದಂತೆ ಕಂಡುಬಂದಿದೆ.

ಇದೆಲ್ಲದರ ಮಧ್ಯೆ, ಜೈಲಿನಿಂದ ಜಾಮೀನಿನ ಮೇಲೆ ಬಂದು 7 ವರ್ಷಗಳೇ ಆಗುತ್ತಿದ್ದರೂ ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿರುವ ಬಿಜೆಪಿ ನಾಯಕರ ವಿಚಾರದಲ್ಲಿ ಅಸಮಾಧಾನವನ್ನೂ ರೆಡ್ಡಿ ಬಹಿರಂಗವಾಗಿಯೇ ಹೊರಹಾಕಿದ್ದಾರೆ. ಹೀಗಾಗಿ ಅವರು ಬಿಜೆಪಿಯಲ್ಲಿಯೇ ಮುಂದುವರಿಯುತ್ತಾರೆಯೇ ಅಥವಾ ಹೊಸ ಪಕ್ಷ ಕಟ್ಟಿ ರಾಜಕೀಯ ಮಾಡುತ್ತಾರೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಹೊಸ ಪಕ್ಷ ಕಟ್ಟುವ ವಿಚಾರವಾಗಿಯೇ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಭಿನ್ನಾಭಿಪ್ರಾಯವೂ ಉಂಟಾಗಿದೆ ಎನ್ನಲಾಗುತ್ತಿದೆ. 

ರೆಡ್ಡಿಯವರ ಸ್ನೇಹಕ್ಕಾಗಿ ಪ್ರಾಣ ಕೊಡಲೂ ಸಿದ್ಧ ಎನ್ನುವ ಶ್ರೀರಾಮುಲು, ಬಿಜೆಪಿ ತನ್ನ ತಾಯಿಯಿದ್ದ ಹಾಗೆ ಎನ್ನುವುದೂ ಮುಂದುವರಿದಿದೆ. ಇನ್ನೊಂದೆಡೆ, ಗಣಿ ಚಟುವಟಿಕೆ ಪುನರಾರಂಭಿಸಲು ಹಲವು ತಿಂಗಳಿಂದ ಪ್ರಯತ್ನಿಸುತ್ತಿರುವ ಜನಾರ್ದನ ರೆಡ್ಡಿ, ಇದೀಗ ರಾಜಕೀಯ ಎಂಟ್ರಿಯ ವಿಚಾರದಲ್ಲೂ ಗಂಭೀರವಾಗಿ ಆಲೋಚಿಸುತ್ತಿರುವುದು ಒಂದಕ್ಕೊಂದು ಪೂರಕ ಎನ್ನಲಾಗುತ್ತಿದೆ. ಈ ಬೆಳವಣಿಗೆ ಬಿಜೆಪಿ ನಾಯಕರನ್ನು ವಿಚಲಿತಗೊಳಿಸಿದೆ ಎಂಬ ವರದಿಗಳೂ ಇವೆ.

ಜನಾದೇಶ

ಎರಡು ವಿಧಾನಸಭೆ ಚುನಾವಣೆಗಳ ಫಲಿತಾಂಶ ಪ್ರಕಟವಾಗಿ, ಗುಜರಾತ್‌ನಲ್ಲಿ ಬಿಜೆಪಿ ಪ್ರಚಂಡ ಬಹುಮತ ಪಡೆದು ದಾಖಲೆ ಗೆಲುವು ಸಾಧಿಸಿದ್ದರೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿಯಿಂದ ಅಧಿಕಾರ ಕಸಿದುಕೊಂಡಿದೆ. ಇವೆರಡರ ನಡುವೆ ಆಮ್ ಆದ್ಮಿ ಪಕ್ಷ ತನ್ನ ಆಟವನ್ನು ಸಾಕಷ್ಟು ಗಮನ ಸೆಳೆಯುವ ಮಟ್ಟದಲ್ಲಿಯೇ ಆಡಿ, ರಾಷ್ಟ್ರೀಯ ಪಕ್ಷದ ಸ್ಥಾನಕ್ಕೆ ಏರಿದೆ. ಗುಜರಾತ್‌ನಲ್ಲಿ ಇದು ಬಿಜೆಪಿಯ ಸತತ ಏಳನೇ ಗೆಲುವು. ಪ್ರತಿ ಚುನಾವಣೆಯಲ್ಲಿಯೂ ಶೇ.40ಕ್ಕೂ ಹೆಚ್ಚು ಮತಗಳನ್ನು ಗಳಿಸುತ್ತಿದ್ದ ಕಾಂಗ್ರೆಸ್‌ನದ್ದು ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ. ಇದಕ್ಕೆ ಆಪ್ ಪ್ರವೇಶ ಕೂಡ ಕಾರಣ. 

ಕಾಂಗ್ರೆಸ್ ಮತಗಳನ್ನು ಒಡೆದು ತನ್ನ ಗುರುತು ಮೂಡಿಸಿರುವ ಆಪ್, ಬಿಜೆಪಿಗೂ ಇನ್ನಷ್ಟು ನೆರವು ಮಾಡಿಕೊಟ್ಟ ಹಾಗೆಯೂ ಕಾಣಿಸುತ್ತದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ರಾಷ್ಟ್ರಮಟ್ಟದ ಚುನಾವಣಾ ವಿಚಾರಗಳನ್ನೇ ಪ್ರಸ್ತಾಪಿಸಿ ಪೆಟ್ಟು ತಿಂದಿದೆ. ಅದರ ಬಂಡಾಯ ಅಭ್ಯರ್ಥಿಗಳೂ ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಕಾಂಗ್ರೆಸ್‌ಗೆ ಪ್ರಿಯಾಂಕಾ ಗಾಂಧಿ ಪ್ರಚಾರ ವರವಾಗಿದೆ. ಆದರೂ ಪಕ್ಷದೊಳಗೇ ಇರುವ ಬಿಕ್ಕಟ್ಟನ್ನು ಸರಿಪಡಿಸಿಕೊಳ್ಳುವುದು ಅತಿ ತುರ್ತಿನ ವಿಚಾರ. ಇಲ್ಲದೆ ಹೋದರೆ ಕೈಗೆ ಬಂದದ್ದೂ ಬಾಯಿಗೆ ಬರದೇ ಹೋಗುವಂತಾಗುವ ಅಪಾಯವೂ ತಪ್ಪಿದ್ದಲ್ಲ. ಇಂತಹ ಕಹಿಯನ್ನು ಈಗಾಗಲೇ ಉಂಡಿರುವ ಅದು ಎಚ್ಚರ ವಹಿಸಲೇಬೇಕು.

   

ಈ ಮಧ್ಯೆ, ಆಪ್ ಮಾಡಿರುವ ಮತ್ತೊಂದು ಸಾಧನೆ, 15 ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿದ್ದ ಪ್ರತಿಷ್ಠಿತ ದಿಲ್ಲಿ ನಗರಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು. ಕೇಂದ್ರ ಮಂತ್ರಿಗಳೇ ಬಂದು ಪಾಲಿಕೆ ಚುನಾವಣೆಗಾಗಿ ಪ್ರಚಾರ ಮಾಡಿದರೂ ದಿಲ್ಲಿ ಜನರು ಆಪ್ ಕಡೆ ವಾಲಿದ್ದು ಬಿಜೆಪಿಗೆ ನಾಟುವಂಥ ಸಂದೇಶ. ಇದರ ಜೊತೆಗೇ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಬಿಜೆಪಿ ಸಮಬಲ ಪ್ರದರ್ಶನ ತೋರಿವೆ. ಐದು ರಾಜ್ಯಗಳ ಆರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಎರಡೂ ಪಕ್ಷಗಳು ತಲಾ ಎರಡು ಸ್ಥಾನ ಗೆದ್ದಿವೆ.

ದಮನ ನೀತಿ?

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ರದ್ದು ಮಾಡಿದ ಬೆನ್ನಲ್ಲೇ, ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಮೌಲಾನಾ ಆಝಾದ್ ಫೆಲೋಶಿಪ್ ಅನ್ನು ಕೂಡ ಕೇಂದ್ರ ಸರಕಾರ ಇದೇ ಶೈಕ್ಷಣಿಕ ವರ್ಷದಿಂದ ಸ್ಥಗಿತಗೊಳಿಸಿದೆ. ಈ ದೇಶದ ಶಿಕ್ಷಣ ವ್ಯವಸ್ಥೆಗೆ ಅಡಿಗಲ್ಲು ಹಾಕಿಕೊಟ್ಟ ಮಹನೀಯರ ಹೆಸರಿನಲ್ಲಿದ್ದ ನೆರವಿನ ಯೋಜನೆಗೆ ಕಲ್ಲು ಬಿದ್ದಿದೆ. ಸಾಚಾರ್ ಸಮಿತಿ ಶಿಫಾರಸುಗಳ ಅನುಷ್ಠಾನದ ಭಾಗವಾಗಿ ಯುಪಿಎ ಸರಕಾರ ಜಾರಿಗೆ ತಂದಿದ್ದ ಈ ಯೋಜನೆ ಉನ್ನತ ಮಟ್ಟದ ಅಧ್ಯಯನದಲ್ಲಿ ತೊಡಗುವ ಅಲ್ಪಸಂಖ್ಯಾತ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಭರವಸೆಯಂತಿತ್ತು. ಇತರ ಹಿಂದುಳಿದ ವರ್ಗಕ್ಕೂ ಒಳಪಡದ ಸಾವಿರಾರು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಾಲಿಗೆ ಇದು ಆಘಾತ ತಂದಿದೆ. ಆದರೆ, ಈಗಾಗಲೇ ವಿವಿಧ ಯೋಜನೆಗಳಡಿಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನೆರವು ಪಡೆಯಲು ಅವಕಾಶವಿದೆ ಎಂಬ ಕಾರಣವನ್ನು ಕೇಂದ್ರ ಕೊಟ್ಟಿದೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನೂ ಹೀಗೆಯೇ ಸಮರ್ಥಿಸಿಕೊಳ್ಳಲಾಗಿತ್ತು. ಆ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿರುವಂತೆ, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ತುಳಿದು ಆಳಬೇಕೆಂಬ ಬಿಜೆಪಿ ಅಜೆಂಡಾ ನಿಧಾನಕ್ಕೆ ಕಾರ್ಯಗತವಾಗುತ್ತಿದೆ. ಶಿಕ್ಷಣದಿಂದ ವಂಚಿತರಾಗುತ್ತಿರುವ ದಮನಿತರ ಮಕ್ಕಳು ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿದ್ದ ವಿದ್ಯಾರ್ಥಿವೇತನ ರದ್ದುಗೊಳಿಸಿರುವುದು, ರಾಜಿಂದರ್ ಸಾಚಾರ್ ಅಂಥ ದೊಡ್ಡವರ ನೋಟ ಮತ್ತು ಗ್ರಹಿಕೆಯ ಫಲವಾಗಿದ್ದ ಮೌಲಾನಾ ಫೆಲೋಶಿಪ್ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಸರಕಾರ ಏನನ್ನು ಯೋಚಿಸುತ್ತಿದೆ ಎಂಬುದರ ಸೂಚನೆಯೇ ಆಗಿದೆ.

ದಲಿತ ಸಮಾವೇಶ

ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನದಂದು ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ ಬೆಂಗಳೂರಿನಲ್ಲಿ ನಡೆಯಿತು. ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಆನಂದ ತೇಲ್ತುಂಬ್ಡೆ ಸಮ್ಮುಖದಲ್ಲಿ ನಡೆದ ಸಮಾವೇಶದಲ್ಲಿ ಹತ್ತು ದಲಿತ ಸಂಘಟನೆಗಳು ಸೇರಿದ್ದವು. ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಪರ ಅಭಿಮತವು ಸಮಾವೇಶದಲ್ಲಿ ದೃಢವಾಗಿ ವ್ಯಕ್ತವಾಯಿತು. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ವಿಚಾರಕ್ಕೆ ಸಮಾವೇಶದಲ್ಲಿ ವಿರೋಧಿಸಲಾಯಿತಲ್ಲದೆ, ಅದನ್ನು ರದ್ದುಗೊಳಿಸಬೇಕು ಮತ್ತು ಸಾಮಾಜಿಕ ನ್ಯಾಯದ ನೆಲೆಯಲ್ಲಿ ಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಯಿತು. ಚಾತುರ್ವರ್ಣ ಪದ್ಧತಿಯನ್ನು ಮತ್ತು ಅಸಮಾನತೆಯನ್ನು ಎತ್ತಿಹಿಡಿಯುವ ರಾಷ್ಟ್ರೀಯ ಶಿಕ್ಷಣ ನೀತಿ ರದ್ದಾಗಬೇಕು ಎಂದೂ ಸಮಾವೇಶ ಒತ್ತಾಯಿಸಿತು. ಸಂವಿಧಾನದ ಮೇಲೆ ನಿರಂತರ ಪ್ರಹಾರ ನಡೆಯುತ್ತಿರುವ ಈ ದಿನಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದ ಉಳಿವಿಗಾಗಿ ಹೋರಾಡಬೇಕಿದೆ ಎಂದು ರಮಾಬಾಯಿ, ನ್ಯಾ. ಎಚ್.ಎಸ್. ನಾಗಮೋಹನ ದಾಸ್ ಮೊದಲಾದ ಗಣ್ಯರು ಪ್ರತಿಪಾದಿಸಿದರು.

ಉಷಾ ಹೆಗ್ಗಳಿಕೆ

ಏಶ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು ಹೊಸ ದಾಖಲೆಯನ್ನೇ ಬರೆದಿದ್ದ ಪಿ.ಟಿ.ಉಷಾ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆಯಾಗುತ್ತಿದ್ದಾರೆ. ಒಬ್ಬ ಕ್ರೀಡಾಪಟುವಿನ ಪಾಲಿಗೆ ಇದು ಬಹುದೊಡ್ಡ ಹೆಮ್ಮೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರ ಹುದ್ದೆಗೆ ಉಷಾ ಅವರನ್ನು ಹೊರತುಪಡಿಸಿ ಇನ್ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಅವರ ಅವಿರೋಧ ಆಯ್ಕೆಯಾಗುತ್ತಿರುವುದು ವಿಶೇಷ. ಈ ಆಯ್ಕೆಯೊಂದಿಗೆ ಪಿ.ಟಿ.ಉಷಾ ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಿದ್ದಾರೆ. ಹಾಗೆಯೇ, ಕ್ರೀಡಾ ಸಂಸ್ಥೆಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಮಾಜಿ ಆಟಗಾರ್ತಿಯರ ಸಾಲಿಗೂ ಉಷಾ ಸೇರಿದಂತಾಗುತ್ತದೆ.

ಉಷಾ ಅವರಿಗೆ ಈಗ 58 ವರ್ಷ. ಕಷ್ಟದ ಬಾಲ್ಯ, ಅವಮಾನದ ದಿನಗಳು ಎಲ್ಲವನ್ನೂ ಮೀರಿ ಎತ್ತರಕ್ಕೆ ಏರಿದ ಗಟ್ಟಿಗಿತ್ತಿ ಉಷಾ. ತನ್ನ ಓಟದ ಬದುಕಿನಲ್ಲಿ ನೂರಾ ಒಂದು ಪದಕಗಳನ್ನು ಗಳಿಸಿದ್ದಾರೆ. ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಮೊದಲಾದ ಗೌರವಗಳು ಅವರಿಗೆ ಸಂದಿವೆ. ಶತಮಾನದ ಕ್ರೀಡಾಪಟು ಎಂಬ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ. ಇದೇ ವರ್ಷ ಅವರನ್ನು ಕೇಂದ್ರ ಸರಕಾರ ರಾಜ್ಯಸಭಾ ಸದಸ್ಯರಾಗಿಯೂ ನಾಮನಿರ್ದೇಶನ ಮಾಡಿತ್ತು.

Similar News