ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಮೇಲೆ ಮಸಿ ಎರಚಿದ ಘಟನೆ: ಭದ್ರತಾ ವೈಫಲ್ಯಕ್ಕೆ 10 ಪೊಲೀಸರ ಅಮಾನತು

Update: 2022-12-11 08:34 GMT

ಪುಣೆ: ಮಹಾರಾಷ್ಟ್ರದ ಹಿರಿಯ ಸಚಿವ ಚಂದ್ರಕಾಂತ್ ಪಾಟೀಲ್ ಅವರ ಮೇಲೆ ಮಸಿ ಎರಚಿದ ಘಟನೆಗೆ ಸಂಬಂಧಿಸಿದಂತೆ ಪಿಂಪ್ರಿ- ಚಿಂಚ್‌ವಾಡ್ ಪೊಲೀಸರು ಮೂವರು ಅಧಿಕಾರಿಗಳು ಹಾಗೂ  ಇತರ ಏಳು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ ಕುರಿತು ಸಚಿವ ಪಾಟೀಲ್ ಅವರ ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ ಶನಿವಾರ ಪಿಂಪ್ರಿ ನಗರದಲ್ಲಿ ಈ ಘಟನೆ ನಡೆದಿದೆ.

"ಘಟನೆಗೆ ಸಂಬಂಧಿಸಿದಂತೆ ನಾವು ಏಳು ಪೊಲೀಸ್ ಸಿಬ್ಬಂದಿ ಮತ್ತು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ. ಅವರೆಲ್ಲರೂ ಸಚಿವರ ಭೇಟಿಯ ಸಮಯದಲ್ಲಿ ಅವರ ಭದ್ರತೆಯ ಭಾಗವಾಗಿದ್ದರು" ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಕಮಿಷನರ್ ಅಂಕುಶ್ ಶಿಂಧೆ ತಿಳಿಸಿದ್ದಾರೆ.

ಪಾಟೀಲ್ ಶನಿವಾರ ಸಂಜೆ ಪಿಂಪ್ರಿಯಲ್ಲಿರುವ ಪದಾಧಿಕಾರಿಯೊಬ್ಬರ ಮನೆಯಿಂದ ಹೊರಬರುತ್ತಿದ್ದಾಗ ಮೂವರು ವ್ಯಕ್ತಿಗಳು ಅವರ ಮೇಲೆ ಶಾಯಿ ಎಸೆದಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಔರಂಗಾಬಾದ್ ಜಿಲ್ಲೆಯಲ್ಲಿ ಹೇಳಿಕೆ ನೀಡಿದ ಒಂದು ದಿನದ ನಂತರ ಹಿರಿಯ ಬಿಜೆಪಿ ನಾಯಕನ ಮೇಲೆ   ಮಸಿ ದಾಳಿ ನಡೆದಿದೆ.

Similar News