ಪುತ್ತೂರು ನಗರಸಭೆ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ: ಫಲಾನುಭವಿಗಳಿಗೆ ಸವಲತ್ತುಗಳ ಆದೇಶ ಪತ್ರ ವಿತರಣೆ
ಪುತ್ತೂರು: ಸ್ಥಿರತೆ ಮತ್ತು ನಿರಂತತೆಯ ಸರ್ಕಾರಗಳಿಂದ ಸರ್ವತೋಮುಖ ಅಭಿವೃದ್ಧಿಯನ್ನು ಕಾಣಲು ಸಾಧ್ಯ ವಿದೆ. ಈ ನಿಟ್ಟಿನಲ್ಲಿ ಗುಜರಾತ್ ಮಾದರಿಯಲ್ಲಿ ಸ್ಥಿರತೆ ಮತ್ತು ನಿರಂತತೆಯ ಸರ್ಕಾರ ನಿರ್ಮಾಣಕ್ಕಾಗಿ ಎಲ್ಲರೂ ಶಕ್ತಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ರವಿವಾರ ಪುತ್ತೂರಿನ ಪುರಭವನದಲ್ಲಿ ಕರ್ನಾಟಕ ಸರಕಾರ, ಜಿಲ್ಲಾಡಳಿತ ಹಾಗೂ ಪುತ್ತೂರು ನಗರಸಭೆ ಸಂಯುಕ್ತ ಆಶ್ರಯದಲ್ಲಿ ಅಮೃತ ನಗರೋತ್ಥಾನ ಯೋಜನೆ-4 ಅಡಿಯಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯಯಲ್ಲಿ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ವಿವಿಧ ಸವಲತ್ರತುಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಗತಿ ಮತ್ತು ಅಭಿವೃದ್ಧಿ ಎಂಬುದು ನಿರಂತರ ಪ್ರಕ್ರಿಯೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಹಲವಾರು ಯೋಜನೆ ಮೂಲಕ ಕಟ್ಟಕಡೆಯ ವ್ಯಕ್ತಿ ಸಹಿತ ವಿವಿಧ ಪ್ರದೇಶದ ಅಭಿವೃದ್ಧಿಗೆ ಯೋಜನೆಯನ್ನು ಹಾಕಿಕೊಳ್ಳುತ್ತಿದೆ. ಜತೆಗೆ ಸಾಮರಸ್ಯಕ್ಕೆ ಪೂರಕವಾದ ಯೋಜನೆ ಕರ್ನಾಟಕದಲ್ಲಿ ಆಗುತ್ತಿದೆ. ಇದು ಸಾಕಾರಗೊಳ್ಳಲು ಸರಕಾರಿ ಅಧಿಕಾರಿಗಳು ಎಲ್ಲರನ್ನು ಜತೆಗೂಡಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.
ಶಂಕುಸ್ಥಾಪನೆ ನೆರವೇರಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕೆಂದು ಕುವೆಂಪು ಅವರು ಬಯಸಿದ್ದರು. ಅದೇ ಮಾದರಿಯಲ್ಲಿ ಇದೀಗ ಪುತ್ತೂರು ನಗರಸಭೆಯು ಸರ್ವ ಜನಾಂಗದ ಅಭಿವೃದ್ಧಿಯ ತೋಟವಾಗುತ್ತಿದೆ. ಮುಂದಿನ ನಮ್ಮ ಪುತ್ತೂರು ಹೇಗಿರಬೇಕು ಎಂಬುದನ್ನು ಇಲ್ಲಿನ ಜನರು ತೀರ್ಮಾನಿಸಬೇಕಾಗಿದೆ. ಆರೋಗ್ಯಕರ ವಾತಾವರಣ ನಿರ್ಮಾಣದ ಉದ್ದೇಶದಿಂದ ಈಗಾಗಲೇ ನಗರಸಭೆಯಲ್ಲಿ 7 ಪಾರ್ಕ್‍ಗಳನ್ನು ನಿರ್ಮಿಸಲಾಗಿದೆ. ಸಾಕಷ್ಟು ರಸ್ತೆಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ ಹಾರಾಡಿ ರೈಲ್ವೇ ಸಂಪರ್ಕ ರಸ್ತೆ, ನೆಹರೂನಗರ ರೈಲ್ವೇ ಮೇಲ್ಸೇತುವೆ, ಹಾರಾಡಿ ಮಡ್ಯಲಕಟ್ಟೆ ಸಂಪರ್ಕ ರಸ್ತೆ, ಪುತ್ತೂರು ಬಸ್ಸು ನಿಲ್ದಾಣಕ್ಕೆ ಕೋಟಿ ಚೆನ್ನಯ ನಾಮಕರಣ, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕಸ ವಿಲೇವಾರಿಯಲ್ಲಿ ಗ್ಯಾಸ್ ಉತ್ಪಾಧನಾ ಘಟಕ ನಿರ್ಮಾಣ, ರೂ. 15 ಕೋಟಿ ವೆಚ್ಚದಲ್ಲಿ ನೂತನ ನಗರಸಭಾ ಕಚೇರಿ ಕಟ್ಟಡ ನಿರ್ಮಾಣ, ರೂ. 117 ಕೋಟಿ ವೆಚ್ಚದಲ್ಲಿ ಜಲಸಿರಿ ಯೋಜನೆ, ರೂ. 154 ಕೋಟಿ ವೆಚ್ಚದಲ್ಲಿ ಯುಜಿಡಿ ಯೋಜನೆ ನಡೆಯಲಿದೆ. ಮೂಲ ಸೌಕರ್ಯ ವ್ಯವಸ್ಥೆಯಲ್ಲಿ ಪುತ್ತೂರು ನಗರಸಭೆಯು ರಾಜ್ಯಕ್ಕೇ ಮಾದರಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಅವರು ಅಮೃತ ನಗರೋತ್ಥಾನ ಯೋಜನೆಯ 30 ಕೋಟಿ ಅನುದಾನದಲ್ಲಿ 16.90 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಇಂದು ಶಂಕು ಸ್ಥಾಪನೆ ನೆರವೇರಿಸಲಾಗಿದೆ. ನಾಳೆಯಿಂದಲೇ ಕಾಮಗಾರಿ ಆರಂಭಗೊಳಿಸಲಾಗುವುದು. 24.10 ಶೇ. ನಿಧಿಯಿಂದ 140 ಕೋಟಿ ರೂ. ಅನುದಾನ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳಿಗೆ ಮೀಸಲಿಸಲಾಗಿದ್ದು, ಎಸ್‍ಟಿಗೆ 56 ಲಕ್ಷ ರೂ. ಮೀಸಲಿರಿಸಲಾಗಿದೆ. 7.25 ಶೇ. ನಿಧಿಯಲ್ಲಿ 74 ಲಕ್ಷ ಮೀಸಲಿಡಲಾಗಿದ್ದು, 63.75 ಲಕ್ಷ ವಿಕಲ ಚೇತನರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ. ನಗರದಲ್ಲಿ 320 ಮನೆ ದುರಸ್ಥಿಗೆ ಪ್ರಥಮ ಬಾರಿಗೆ ಅನುದಾನ ಇಡಲಾಗಿದ್ದು, ಈ ಪೈಕಿ 65 ಹೊಸ ಮನೆ ನಿರ್ಮಾಣಕ್ಕೆ ತಲಾ 3 ಲಕ್ಷ ರೂ., ಪ್ರತೀ ವಾಡಿನ 6 ಮನೆ ಸೇರಿದಂತೆ ಒಟ್ಟು 185 ಮನೆಗಳ ದುರಸ್ಥಿಗೆ, ಎಸ್‍ಸಿ, ಎಸ್‍ಟಿ 38 ಹೊಸಮನೆಗಳಿಗೆ ಅನುದಾನ ಮೀಸಲಿಡಲಾಗಿದೆ. ನಗರದ 31 ವಾರ್ಡಿಗೂ 25 ಲಕ್ಷ ರೂ. ವಿವಿಧ ಕಾಮಗಾರಿ ಗಳಿಗೆ ಅನುದಾನ ಇಡಲಾಗಿದೆ. ಅಲ್ಲದೆ ಪ್ರತೀ ವಾರ್ಡ್‍ನಲ್ಲಿ ಪಾರ್ಕ್ ನಿರ್ಮಾಣಕ್ಕೆ, ಸ್ಮಾರ್ಟ್ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ನಗರಸಭೆ ವತಿಯಿಂದ ಸನ್ಮಾನಿಸಲಾ ಯಿತು. ಮನೆ ದುರಸ್ತಿ, ನೀರು, ಶೌಚಾಲಯ ಸೇರಿದಂತೆ ವಿವಿಧ ಫಲಾನುಭವಿಗಳಿಂದ ಬಂದ ಅರ್ಜಿಗಳನ್ನು ಪರಿಗಣಿಸಿ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು.
ವೇದಿಕೆಯಲ್ಲಿ ಪುತ್ತೂರು ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ., ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಭಿಷೇಕ್, ಕಾರ್ಯನಿರ್ವಾಹಕ ಇಂಜಿನಿಯರ್ ಪುರಂದರ ಕೋಟ್ಯಾನ್ ಉಪಸ್ಥಿತರಿದ್ದರು.
ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಸ್ವಾಗತಿಸಿದರು. ಹಿರಿಯ ಪತ್ರಕರ್ತ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.