ಅಂಬೇಡ್ಕರ್ ಒಡೆದದ್ದು ಏನನ್ನು?

Update: 2022-12-12 04:29 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ತಮಿಳುನಾಡಿನ ಜನರ ಭಾವನೆಗಳನ್ನು ಕೆರಳಿಸುತ್ತಾ ತಮಿಳುನಾಡು ಸರಕಾರವನ್ನು ಮುಜುಗರಕ್ಕೆ ಸಿಲುಕಿಸುವ ಶತಪ್ರಯತ್ನ ದಲ್ಲಿರುವ ಅಲ್ಲಿನ ರಾಜ್ಯಪಾಲ ಆರ್. ಎನ್. ರವಿ ಅವರು ಇದೀಗ ಅಂಬೇಡ್ಕರ್ ಕುರಿತಂತೆ ಅತ್ಯಂತ ಕೀಳಭಿರುಚಿಯ ಹೇಳಿಕೆಯೊಂದನ್ನು ನೀಡಿ ಸುದ್ದಿಯಲ್ಲಿದ್ದಾರೆ. ತಮಿಳು ನಾಡಿನ ರಾಜ್ಯಪಾಲರು ಮತ್ತು ಅಲ್ಲಿನ ಸರಕಾರದ ನಡುವೆ ಬೇರೆ ಬೇರೆ ಕಾರಣಗಳಿಗಾಗಿ ಸಂಘರ್ಷ ವಾತಾವರಣ ನಿರ್ಮಾಣವಾಗಿದೆ. ರಾಜ್ಯಪಾಲರನ್ನು ವಾಪಸ್ ಕರೆದುಕೊಳ್ಳಬೇಕು ಎಂದು ತಮಿಳುನಾಡು ಸರಕಾರ ರಾಷ್ಟ್ರಪತಿಯನ್ನು ಈಗಾಗಲೇ ಒತ್ತಾಯಿಸಿದೆ. ರಾಜ್ಯಪಾಲ ರವಿ ಅವರ ವಾಚಾಳಿತನ ಅವರನ್ನು ಯಾಕೆ ವಜಾಗೊಳಿಸಬೇಕು ಎನ್ನುವುದನ್ನು ಪದೇ ಪದೇ ಸಾಬೀತು ಪಡಿಸುತ್ತಿದೆ. ಈವರೆಗಿನ ಅವರ ನಡವಳಿಕೆ, ವಿವಾದಾತ್ಮಕ ಹೇಳಿಕೆಗಳು ದಕ್ಷಿಣ ಭಾರತೀಯರ ಕುರಿತ ಅವರ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದರೆ, ಈಗ ಅಂಬೇಡ್ಕರ್ ಬಗ್ಗೆ ಅವರು ಹೊಂದಿರುವ ಸಂಕುಚಿತ ಮನೋಭಾವ ಜಗಜ್ಜಾಹೀರಾಗಿದೆ. ಅಂಬೇಡ್ಕರ್ ಪುಣ್ಯತಿಥಿಯ ದಿನವಾಗಿರುವ ಡಿಸೆಂಬರ್ 6ರಂದು ಕಾರ್ಯಕ್ರಮವೊಂದರಲ್ಲಿ ರಾಜ್ಯಪಾಲ ರವಿ, ''ಬ್ರಿಟಿಷರು ಹಿಂದೂಗಳನ್ನು ಒಡೆಯಲು ಅಂಬೇಡ್ಕರ್ ಅವರನ್ನು ಬಳಸಿಕೊಂಡರು'' ಎಂದು ಹೇಳಿಕೆಯೊಂದನ್ನು ನೀಡಿದ್ದಾರೆ.

ದೇಶವನ್ನು ವಿಭಜಿಸಲು ಮತ್ತು ಇತಿಹಾಸವನ್ನು ತಿರುಚಲು ಬ್ರಿಟಿಷರು ಅಂಬೇಡ್ಕರ್ ಅವರಿಗೆ ಆರ್ಥಿಕ ನೆರವನ್ನು ನೀಡಿದ್ದರು ಎನ್ನುವ ಕುತ್ಸಿತ ಮಾತುಗಳನ್ನೂ ರವಿ ಅವರು ಈ ಸಂದರ್ಭದಲ್ಲಿ ಆಡಿದ್ದರು. ರಾಜ್ಯಪಾಲರಾಗಿ ರವಿ ಅವರು ಕೇಂದ್ರ ಸರಕಾರವನ್ನು ಪ್ರತಿನಿಧಿಸದೇ, ಆರೆಸ್ಸೆಸ್‌ನ್ನು ಪ್ರತಿನಿಧಿಸಿ ಕಾರ್ಯಾಚರಿಸುತ್ತಿರುವುದು ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಅಂಬೇಡ್ಕರ್ ಕುರಿತಂತೆ ಆರೆಸ್ಸೆಸ್ ತನ್ನ ಶಾಖೆಯೊಳಗೆ ಬೋಧಿಸುತ್ತಿರುವ ತಪ್ಪು ಮಾಹಿತಿಗಳನ್ನು ಇದೀಗ ರವಿ ಅವರು ಸಾರ್ವಜನಿಕ ವೇದಿಕೆಯಲ್ಲಿ ಆಡಿದ್ದಾರೆ. ರಾಜ್ಯಪಾಲ ರವಿ ಅವರ ಮಾತಿನ ಪ್ರಕಾರ, ಈ ದೇಶದಲ್ಲಿ 'ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ' ಇವರಷ್ಟೇ ಅಲ್ಲದೆ ಈ ವರ್ಗದಲ್ಲಿ ಬಾರದ ದಲಿತ ಸಮುದಾಯಗಳನ್ನು ವಿಭಜಿಸಿರುವುದೇ ಅಂಬೇಡ್ಕರ್ ಎಂದು ನಾವು ಭಾವಿಸಬೇಕಾಗಿದೆ. ಹಿಂದೂ ಧರ್ಮವನ್ನು ಜಾತಿಯ ಆಧಾರದಲ್ಲಿ ವಿಭಜಿಸಿದವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಂಬೇಡ್ಕರ್ ಹುಟ್ಟುವ ಮೊದಲೇ ಹಿಂದೂ ಧರ್ಮದೊಳಗಿರುವ ಈ ವಿಭಜನೆಗಳ ವಿರುದ್ಧ ಹಲವು ಕ್ರಾಂತಿಕಾರಿಗಳು ಧ್ವನಿಯೆತ್ತುತ್ತಾ ಬಂದಿದ್ದಾರೆ.

ಹಿಂದೂ ಧರ್ಮದೊಳಗಿರುವ ಈ ವಿಭಜನೆಯ ವಿರುದ್ಧ ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಬಸವಣ್ಣ ಕ್ರಾಂತಿ ಮಾಡಿದರು. ಹಿಂದೂ ಧರ್ಮದಿಂದ ಸಿಡಿದು ಪ್ರತ್ಯೇಕ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಒಂದು ವೇಳೆ, ಬಸವಣ್ಣರ ಕಾಲದಲ್ಲಿ ಬ್ರಿಟಿಷರೇನಾದರೂ ಆಗಮಿಸಿದ್ದಿದ್ದರೆ, ಬಸವಣ್ಣರನ್ನು ಬ್ರಿಟಿಷರು ಬಳಸಿಕೊಂಡು ಹಿಂದೂ ಧರ್ಮವನ್ನು ವಿಭಜಿಸಿದರು ಎಂದು ಈ ರಾಜ್ಯಪಾಲರು ಭಾಷಣ ಬಿಗಿಯುತ್ತಿದ್ದರೋ ಏನೋ. ಹಿಂದೂ ಧರ್ಮದೊಳಗಿರುವ ಈ ವಿಭಜನೆಗಳ ವಿರುದ್ಧ ಬಸವಣ್ಣ, ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಜ್ಯೋತಿ ಬಾ ಫುಲೆ, ಪೆರಿಯಾರ್ ಹೀಗೆ ಸಾಲು ಸಾಲು ನಾಯಕರು ಧ್ವನಿಯೆತ್ತಿದ್ದರು. ಅವರ ದಾರಿಯಲ್ಲಿ ಅಂಬೇಡ್ಕರ್ ಕೂಡ ನಡೆದರು. ಅಂಬೇಡ್ಕರ್ ಪ್ರವೇಶದಿಂದಾಗಿ ದೇಶದೊಳಗಿರುವ ಅಸ್ಪಶ್ಯತೆ, ಜಾತೀಯತೆಯ ವಿರುದ್ಧದ ಹೋರಾಟಕ್ಕೆ ದಲಿತ ಸಮುದಾಯದಿಂದಲೇ ಬಂದ ನಾಯಕರೊಬ್ಬರ ನೇತೃತ್ವ ದೊರಕುವಂತಾಯಿತು. ಈ ದೇಶದೊಳಗೆ ಬ್ರಿಟಿಷರು ಕಾಲಿಡುವ ಮೊದಲೇ ದಲಿತರು ಮತ್ತು ಶೂದ್ರರಿಗೆ ಸ್ವಾತಂತ್ರ ವಿರಲಿಲ್ಲ. ಅವರು ದೇವಸ್ಥಾನಗಳಿಗೆ ಪ್ರವೇಶಿಸುವಂತಿರಲಿಲ್ಲ. ಮೇಲ್‌ಜಾತಿಯ ಜನರು ಓಡಾಡುವ ದಾರಿಯಲ್ಲಿ ದಲಿತರು, ಶೂದ್ರರು ಓಡಾಡುವಂತಿರಲಿಲ್ಲ. ಮೇಲ್ ಜಾತಿಯ ಜನರು ಉಪಯೋಗಿಸುವ ಕೆರೆ, ಬಾವಿ ನೀರನ್ನು ಮುಟ್ಟು ವ ಸ್ವಾತಂತ್ರವೂ ದಲಿತರಿಗಿರಲಿಲ್ಲ. ಇಡೀ ದೇಶ ಬ್ರಿಟಿಷರನ್ನು ಓಡಿಸುವುದಕ್ಕಾಗಿ ಒಂದಾಗುತ್ತಿದ್ದಾಗ ಅಂಬೇಡ್ಕರ್ ತನ್ನದೇ ದೇಶದೊಳಗಿರುವ ಸಾರ್ವಜನಿಕ ಕೆರೆಯಿಂದ ನೀರು ಕುಡಿಯುವ ಹಕ್ಕಿಗಾಗಿ ದಲಿತರನ್ನು ಸಂಘಟಿಸುವ ಅನಿವಾರ್ಯತೆಗೆ ಸಿಲುಕಿಕೊಂಡಿದ್ದರು. ಅಂಬೇಡ್ಕರ್ ಅವರು ಮಹಾಡ್ ಕೆರೆಯ ನೀರನ್ನು ಕುಡಿಯುವುದಕ್ಕಾಗಿ ದಲಿತರನ್ನು ಸಂಘಟಿಸಿದ್ದು ಬ್ರಿಟಿಷರ ವಿರುದ್ಧವಲ್ಲ. ತಮ್ಮದೇ ನೆಲದ 'ಸನಾತನಿ'ಗಳ ವಿರುದ್ಧ.

ಮಹಾಡ್ ಕೆರೆಯ ನೀರನ್ನು ಕುಡಿಯಲು ಮುಂದಾದಾಗ ಅವರ ಮೇಲೆ ದಾಳಿ ನಡೆಸಿದ್ದು ಬ್ರಿಟಿಷರಲ್ಲ, ಸನಾತನ ಧರ್ಮೀಯರೆಂದು ಹೇಳಿಕೊಳ್ಳುವ ಭಾರತದ ಜನರೇ ಆಗಿದ್ದರು. ಈ ದೇಶದಲ್ಲಿ ಬ್ರಿಟಿಷರು ಆಗಮಿಸಿದ ಕಾರಣಕ್ಕಾಗಿ ದಲಿತರು ಮತ್ತು ಶೂದ್ರರು ಶಿಕ್ಷಣದ ಕಡೆಗೆ ಮುಖ ಮಾಡುವಂತಾಯಿತು. ತಮ್ಮದೇ ದೇಶದಲ್ಲಿ ತಮ್ಮದೇ ಜನರಿಗೆ ಆಗುತ್ತಿದ್ದ ದೌರ್ಜನ್ಯಗಳ ಬಗ್ಗೆ ಶೋಷಿತ ಸಮುದಾಯ ಜಾಗೃತಗೊಂಡಿತು. ಸಾರ್ವಜನಿಕ ಕೆರೆಯ ನೀರನ್ನೇ ಮುಟ್ಟುವ ಅಧಿಕಾರವಿಲ್ಲದ ದಲಿತರು ಮತದಾನದ ಹಕ್ಕುಗಳನ್ನು ಪಡೆಯಲು ಸಾಧ್ಯವೆ? ಇಂತಹ ಸಂದರ್ಭದಲ್ಲಿ ದಲಿತರಿಗಾಗಿ ಪ್ರತ್ಯೇಕ ಚುನಾವಣೆಯನ್ನು ಆಗ್ರಹಿಸಿದ್ದರಲ್ಲಿ ತಪ್ಪೇನಿದೆ? ಅಂಬೇಡ್ಕರ್ ಬ್ರಿಟಿಷರ ವಿರುದ್ಧ ಮಾತ್ರವಲ್ಲ, ಈ ದೇಶದ ಸನಾತನಿಗಳಿಂದಲೂ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದರು. ಎರಡೂ ಕಡೆಗಳಿಂದ ಅಂಬೇಡ್ಕರ್ ಅವರು ದಮನಕ್ಕೊಳಗಾದರು. ಬ್ರಿಟಿಷರು ಈ ದೇಶವನ್ನು ತೊರೆದಾಕ್ಷಣ ಶೇ. 2ರಷ್ಟಿರುವ ಜನರಿಗಷ್ಟೇ ಸ್ವಾತಂತ್ರ ದೊರಕುತ್ತದೆ, ಆದರೆ ಬಹುಸಂಖ್ಯಾತರು ಈ ದೇಶದ ಸನಾತನಿಗಳ ನಿಯಂತ್ರಣದಲ್ಲೇ ಬದುಕನ್ನು ಸವೆಸಬೇಕಾಗುತ್ತದೆ ಎನ್ನುವ ಪ್ರಜ್ಞೆಯ ಜೊತೆಗೆ ಅವರು ಸ್ವಾತಂತ್ರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಬ್ರಿಟಿಷರಿಂದ ಆರ್ಥಿಕ ನೆರವನ್ನು ಪಡೆದವರು ಯಾರು ಎನ್ನುವುದು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಬ್ರಿಟಿಷರಿಗೆ ಎರಡೆರಡು ಬಾರಿ ಕ್ಷಮೆಯಾಚನೆ ಪತ್ರ ಬರೆದು, ಸ್ವಾತಂತ್ರ ಹೋರಾಟದಿಂದ ಸಂಪೂರ್ಣ ದೂರ ಉಳಿದು ಬ್ರಿಟಿಷರಿಂದ ಮಾಸಿಕ ಪಿಂಚಣಿಯನ್ನು ಪಡೆಯುತ್ತಾ ಬದುಕಿದವರು ವಿನಾಯಕ ದಾಮೋದರ ಸಾವರ್ಕರ್. ಅವರು ಬರೆದ ಕ್ಷಮೆಯಾಚನೆಗೂ, ಪಡೆದ ಪಿಂಚಣಿಗೂ ಅಧಿಕೃತ ದಾಖಲೆಗಳಿವೆ. ಸ್ವಾತಂತ್ರ ಹೋರಾಟದಲ್ಲಿ ಅವರು ಭಾಗವಹಿಸಲಿಲ್ಲ ಮಾತ್ರವಲ್ಲ, ಇತರರನ್ನು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸದಂತೆ ತಡೆದರು. ಭಾರತವನ್ನು ಹಿಂದೂ ಮತ್ತು ಮುಸ್ಲಿಮ್ ಹೆಸರಿನಲ್ಲಿ ಎರಡು ದೇಶವಾಗಿ ವಿಭಜಿಸಿದ್ದು ಕೂಡ ಸಾವರ್ಕರ್. ಅಂಬೇಡ್ಕರ್ ಒಡೆದದ್ದು ನಿಜ. ಆದರೆ ಅವರು ಒಡೆದಿರುವುದು ಹಿಂದೂ ಧರ್ಮವನ್ನಲ್ಲ, ಸನಾತನಿಗಳು ಹಿಂದೂ ಧರ್ಮದ ಒಳಗೆ ಕಟ್ಟಿದ ಗೋಡೆಗಳನ್ನು ಒಡೆದರು. ಹಾಗೆ ಒಡೆದ ಕಾರಣದಿಂದಾಗಿಯೇ ಇಂದು ದಲಿತರು, ಶೂದ್ರರು ಇಷ್ಟರ ಮಟ್ಟಿಗಾದರೂ ಸಹ್ಯ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗಿದೆ. ದಲಿತರು, ಶೂದ್ರರು ಸ್ವಾಭಿಮಾನದಿಂದ ಬದುಕುತ್ತಿರುವುದನ್ನು ಕಂಡು ಕರುಬುತ್ತಿರುವವರು ಮಾತ್ರ, 'ಅಂಬೇಡ್ಕರ್ ಹಿಂದೂ ಧರ್ಮವನ್ನು ಒಡೆದರು' ಎಂಬ ಹಸಿ ಸುಳ್ಳನ್ನು ಹರಡುವುದಕ್ಕೆ ಸಾಧ್ಯ.

Similar News