×
Ad

ಡೀಮ್ಡ್ ಫಾರೆಸ್ಟ್ ಸಮಸ್ಯೆ ಸುಪ್ರೀಂ ಕೋರ್ಟ್ ಆದೇಶದಿಂದ ಮಾತ್ರ ಪರಿಹಾರ: ರಮಾನಾಥ ರೈ

"ರಾಜಕೀಯ ವ್ಯಕ್ತಿಗಳ ಹೇಳಿಕೆಯಂತೆ ಸರಳವಲ್ಲ"

Update: 2022-12-12 12:22 IST

ಮಂಗಳೂರು, ಡಿ.12: ರಾಜ್ಯದಲ್ಲಿ ಸುಮಾರು ಆರು ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್‌ನಿಂದ ಮುಕ್ತಗೊಳಿಸುವುದಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರು ನೀಡಿರುವ ಹೇಳಿಕೆಗಳು ಕೇವಲ ರಾಜಕೀಯ ಮಾತ್ರ. ಆ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ಆದೇಶವಾಗಬೇಕಾಗಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಡೀಮ್ಡ್ ಫಾರೆಸ್ಟ್ ಸಮಸ್ಯೆ ಕುರಿತಂತೆ ಮಾತನಾಡಿದ ಅವರು, ರಾಜಕೀಯ ವ್ಯಕ್ತಿಗಳು ಭಾಷಣ ಮಾಡಿ ಹೇಳಿಕೆ ನೀಡಿದಷ್ಟು ಅದು ಸರಳವಾಗಿಲ್ಲ ಎಂದರು.

ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಡೀಮ್ಡ್ ಫಾರೆಸ್ಟ್ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ರಾಜ್ಯ ಸರಕಾರ ಕಂದಾಯ ಇಲಾಖೆಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ವರದಿ ತಯಾರಿಸಲಾಗಿತ್ತು. ಸುಮಾರು 10 ಲಕ್ಷ ಹೆಕ್ಟೇರ್‌ನಲ್ಲಿ ಸುಮಾರು 6 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್‌ನಿಂದ ಕೈಬಿಡೇಕೆಂದು ವರದಿ ನೀಡಲಾಗಿತ್ತು. ಆದರೆ ಸರ್ವೆ ನಂಬರ್ ವಿಭಾಗವನ್ನು ಸರಿಯಾಗಿ ಗುರುತಿಸಿಲ್ಲ ಎಂದು ಅದನ್ನು ತಿರಸ್ಕರಿಸಲಾಗಿತ್ತು. ಈ ಬಗ್ಗೆ ಅರಣ್ಯ ಸಚಿವನಾಗಿದ್ದ ವೇಳೆ ಈ ವಿಷ ಕೈಗೆತ್ತಿಕೊಂಡು ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ಮಾಡಲು ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು ಎಂದರು.

ನಾಲ್ಕು ವರ್ಷದಲ್ಲಿ ಭೌತಿಕ ಸರ್ವೆ ನಡೆಸಿ 6 ಲಕ್ಷ ಹೆಕ್ಟೇರ್ ಹೊರಗೆ ಬಿಡಬೇಕೆಂದು ವರದಿ ತಯಾರಿಸಲಾಗಿತ್ತು. ಅದನ್ನು ಆಧಾರವಾಗಿಟ್ಟುಕೊಂಡು ಇದೀಗ ಮುಖ್ಯಮಂತ್ರಿ ಹಾಗೂ ಇತರ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ವರದಿ ಸುಪ್ರೀಂ ಕೋರ್ಟ್‌ನಿಂದ ಆದೇಶವಾಗಿ ಬರಬೇಕಾಗಿದೆ. ಅದಕ್ಕಾಗಿ  ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯದ ಒಪ್ಪಿಗೆ ಪಡೆದು ಅದನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸಿ ಆದೇಶ ಆಗುವಂತೆ ಕ್ರಮ ವಹಿಸಬೇಕಾಗಿದೆ. ಅದು ಬಿಟ್ಟು ಜನರನ್ನು ರಾಜಕಾರಣಿಗಳು ಜನರನ್ನು ದಾರಿತಪ್ಪಿಸುವ ಹೇಳಿಕೆಯನ್ನು ನೀಡಬಾರದು. ಸರಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ವಿವರಣೆಯ ಜತೆಗೆ ಸರಕಾರಕ್ಕೆ ಸಲಹೆಯನ್ನೂ ನೀಡಿದರು.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ಐಎಎಸ್ ಅಧಿಕಾರಿಗಳಾದ ವಂದಿತಾ ಶಮಾ, ವಿಜಯ ಭಾಸ್ಕರ್ ಹಾಗೂ ರವಿಕುಮಾರ್ ಅವರಿಗೆ ಈ ಬಗ್ಗೆ ಸಾಕಷ್ಟು ಮಾಹಿತಿ ಇದ್ದು, ಅವರು ಈ ನಿಟ್ಟಿನಲ್ಲಿ ನಾಲ್ಕು ವರ್ಷಗಳ ಕಾಲ ಶ್ರಮ ವಹಿಸಿದ್ದಾರೆ. ಡಬಲ್ ಇಂಜಿನ್ ಸರಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕಾಗಿದೆ. ಕೇವಲ ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವುದು ಬೇಡ. ಈ ಬಗ್ಗೆ ಜನರಿಗೂ ವಸ್ತುಸ್ಥಿತಿ ಮನವರಿಕೆ ಆಗಬೇಕಾಗಿದೆ ಎಂದು ಸಚಿವ ರಮಾನಾಥ ರೈ ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಗಾಗಿ ಪಕ್ಷದಲ್ಲಿ ವಿವಿಧ ಕ್ಷೇತ್ರಗಳಿಗೆ ಸಾಕಷ್ಟು ಆಕಾಂಕ್ಷಿಗಳಿಂದ ಟಿಕೆಟ್‌ಗಾಗಿ ಅರ್ಜಿಗಳು ಬಂದಿವೆ ಎಂದ ಮೇಲೆ ಪಕ್ಷದ ಮೇಲೆ ನಂಬಿಕೆ ಇದೆ. ಪಕ್ಷ ಜಯಗಳಿಸಲಿದೆ ಎಂಬ ಹಿನ್ನೆಲೆಯಲ್ಲಿ ಇಷ್ಟೊಂದು ಅರ್ಜಿಗಳು ಬಂದಿವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ರಮಾನಾಥ ರೈ ಪ್ರತಿಕ್ರಿಯಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಪ್ರತಿಭಾ ಕುಳಾಯಿ, ನವೀನ್ ಡಿಸೋಜಾ, ಅಪ್ಪಿ, ಸಲೀಂ, ಮುಸ್ತಫಾ, ಫಯಾಝ್, ಶಬೀರ್, ಕಿಶೋರ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Similar News