ಉತ್ತರ ಪ್ರದೇಶ: ಮದುವೆ ಕಾರ್ಯಕ್ರಮದಲ್ಲಿ ಆಹಾರ ಮುಟ್ಟಿದನೆಂದು ಆರೋಪಿಸಿ ದಲಿತ ಯುವಕನಿಗೆ ನಿಂದಿಸಿ, ಹಲ್ಲೆ

Update: 2022-12-12 08:40 GMT

ಲಕ್ನೊ: ಮದುವೆ ಕಾರ್ಯಕ್ರಮದಲ್ಲಿ ಭೋಜನವನ್ನು ಮುಟ್ಟಿದನೆಂದು ಆರೋಪಿಸಿ 18 ವರ್ಷದ ದಲಿತ ಯುವಕನನ್ನು ಅವಾಚ್ಯವಾಗಿ ನಿಂದಿಸಿ, ಅಮಾನುಷ ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ಉತ್ತರ ಪ್ರದೇಶದ ಗೊಂಡಾದ ವಾಜೀರ್‌ಗಂಜ್ ಗ್ರಾಮದಿಂದ ವರದಿಯಾಗಿದೆ.

ಪ್ರಕರಣದ ಕುರಿತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ದೂರು ದಾಖಲಿಸಿರುವ ನೌಬಸ್ತಾ ಗ್ರಾಮದ ನಿವಾಸಿ ಹಾಗೂ ಹಲ್ಲೆಗೊಳಗಾದ ಯುವಕನ ಸಹೋದರ ರೇಣು ಪ್ರಕಾರ, "ನನ್ನ 18 ವರ್ಷದ ಕಿರಿಯ ಸಹೋದರ ಲಲ್ಲಾ ಶುಕ್ರವಾರ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಮದುವೆಗೆ ಹಾಜರಾಗಲು ತೆರಳಿದ್ದ. ಅಲ್ಲಿನ ಸಂದೀಪ್ ಪಾಂಡೆ ಎಂಬವರ ನಿವಾಸದಲ್ಲಿ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಲಲ್ಲಾ ತನಗಾಗಿ ಒಂದು ಭೋಜನದ ತಟ್ಟೆಯನ್ನು ಎತ್ತಿಕೊಂಡ ಕೂಡಲೇ ಸಂದೀಪ್ ಹಾಗೂ ಆತನ ಸಹೋದರರು ನನ್ನ ಸಹೋದರನನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಲಲ್ಲಾ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಪ್ಪಿಸಲು ಯತ್ನಿಸಿದ ಹಿರಿಯ ಸಹೋದರ ಸತ್ಯಪಾಲನ ಮೇಲೂ ಹಲ್ಲೆ ನಡೆಸಿರುವ ಆರೋಪಿಗಳು, ಅವರ ಬೈಕ್‌ಗೆ ಹಾನಿ ಮಾಡಿದ್ಧಾರೆ ಎಂದು ಆರೋಪಿಸಿದ್ದಾರೆ.

"ಸಂದೀಪ್ ಹಾಗೂ ಆತನ ಸಹೋದರರ ವರ್ತನೆ ಕುರಿತು ಶನಿವಾರ ಗ್ರಾಮ ಪ್ರಧಾನರು ಹಾಗೂ ಹಿರಿಯರನ್ನು ಸಂಪರ್ಕಿಸಿ, ಪ್ರಕರಣವನ್ನು ದಾಖಲಿಸಲಾಗಿದೆ. ಈ ವಿಷಯ ತಿಳಿದ ಆರೋಪಿಯು ನಮ್ಮ ಮನೆಗೆ ನುಗ್ಗಿ ಲಲ್ಲಾನ ಮತ್ತೆ ಹಲ್ಲೆ ನಡೆಸಿದ ಮತ್ತು ಮನೆಯ ಸಾಮಾನುಗಳನ್ನು ಧ್ವಂಸಗೊಳಿಸಿದ" ಎಂದು ರೇಣು ಹೇಳಿರುವುದಾಗಿ timesofindia ವರದಿ ಮಾಡಿದೆ.

ಆರೋಪಿಗಳಾದ ಸಂದೀಪ್ ಪಾಂಡೆ, ಅಮ್ರೇಶ್ ಪಾಂಡೆ ವಿರುದ್ಧ ಒರಟು ಮತ್ತು ಅಜಾಗರೂಕ ನಡೆಯಿಂದ ಜೀವ ಹಾನಿಗೆ ಯತ್ನ ಅಥವಾ ಇತರರ ವೈಯಕ್ತಿಕ ಭದ್ರತೆಗೆ ಧಕ್ಕೆ, ಅಪರಾಧದ ಉದ್ದೇಶ ಮತ್ತು ಗಲಭೆ ಪ್ರಕರಣಗಳಡಿಯಲ್ಲಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ ಎಂದು ಗೊಂಡಾದ ಸಹಾಯಕ ಪೊಲೀಸ್ ಅಧೀಕ್ಷಕ ಶಿವರಾಜ್ ತಿಳಿಸಿದ್ದಾರೆ.

ಉಳಿದ ಆರೋಪಿಗಳಾದ ಅಜಿತ್ ಪಾಂಡೆ, ವಿಮಲ್ ಪಾಂಡೆ ಮತ್ತು ಅಶೋಕ್ ಪಾಂಡೆ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ತನಿಖೆ ಕೈಗೊಂಡಿದ್ದು, ಪ್ರತಿಯೊಬ್ಬರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Similar News