ರೊನಾಲ್ಡೊ ಸಾರ್ವಕಾಲಿಕ ಶ್ರೇಷ್ಠ ಆಟಗಾರ: ಪೋರ್ಚುಗಲ್ ತಾರೆಯನ್ನು ಕೊಂಡಾಡಿದ ವಿರಾಟ್ ಕೊಹ್ಲಿ

Update: 2022-12-12 11:17 GMT

ಹೊಸ ದಿಲ್ಲಿ: ಮೊರೊಕ್ಕೊ ತಂಡದ ಎದುರು ಸೋಲುಂಡು ಫೀಫಾ ವಿಶ್ವಕಪ್ 2022ರಿಂದ ಪೋರ್ಚುಗಲ್ ತಂಡ ಹೊರಬಿದ್ದಿರುವ ಬೆನ್ನಿಗೇ ಆ ತಂಡದ ಸಾರ್ವಕಾಲಿಕ ವಿಶ್ವ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ. ಪೋರ್ಚುಗಲ್ ತಂಡಕ್ಕೆ ತಾನು ಮತ್ತೆ ಆಡುತ್ತೇನೋ ಇಲ್ಲವೊ ಎಂಬುದನ್ನು ಖಚಿತಪಡಿಸದ ರೊನಾಲ್ಡೊ, ಆ ಕುರಿತ ಊಹಾಪೋಹಗಳಿಗೆ ಬಾಗಿಲನ್ನು ಮುಕ್ತವಾಗಿರಿಸಿದ್ದಾರೆ. ಈ ನಡುವೆ ರೊನಾಲ್ಡೊರ ದೊಡ್ಡ ಅಭಿಮಾನಿಯಾದ ಕ್ರಿಕಟಿಗ ವಿರಾಟ್ ಕೊಹ್ಲಿ (Virat Kohli), ರೊನಾಲ್ಡೊ ಬಗ್ಗೆ ಹೃದಯದುಂಬಿ ಮಾತನಾಡಿದ್ದು, ಐದು ಬಾರಿಯ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತರಾದ ಅವರಿಗೆ ಸುಂದರವಾದ ಪೋಸ್ಟ್ ಮೂಲಕ ಗೌರವ ಸೂಚಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ನೀವು ಫುಟ್‌ಬಾಲ್‌ ಹಾಗೂ ವಿಶ್ವಾದ್ಯಂತ ಇರುವ ಕ್ರೀಡಾಭಿಮಾನಿಗಳಿಗೆ ನೀಡಿರುವ ಕೊಡುಗೆ ಎದುರು ಯಾವುದೇ ಪಂದ್ಯಾವಳಿ ಅಥವಾ ಪ್ರಶಸ್ತಿ ನಿಮ್ಮಿಂದ ಏನನ್ನೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನೀವು ಜನರ ಮೇಲೆ ಮಾಡಿರುವ ಮೋಡಿಯನ್ನು ಯಾವ ಪ್ರಶಸ್ತಿಗಳಿಂದಲೂ ವಿವರಿಸಲು ಸಾಧ್ಯವಿಲ್ಲ. ನಾನೂ ಸೇರಿದಂತೆ ವಿಶ್ವಾದ್ಯಂತ ಇರುವ ಹಲವಾರು ಮಂದಿ ನಿಮ್ಮ ಆಟವನ್ನು ವೀಕ್ಷಿಸುವಾಗ ದೇವರ ಕೊಡುಗೆ ಎಂದೇ ಭಾವಿಸಿದ್ದೇವೆ" ಎಂದು ಬರೆದುಕೊಂಡಿದ್ದಾರೆ.

"ಪ್ರತಿ ಬಾರಿಯೂ ಹೃದಯಪೂರ್ವಕವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಯಾವುದೇ ವ್ಯಕ್ತಿಗೆ ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ನೈಜ ಸ್ಫೂರ್ತಿಗಳು ವರವೇ ಆಗಿವೆ. ನೀವು ನನ್ನ ಪಾಲಿಗೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ" ಎಂದು ಕೊಂಡಾಡಿದ್ದಾರೆ.

ಖತರ್ ವಿಶ್ವಕಪ್‌ನಿಂದ ಪೋರ್ಚುಗಲ್ ತಂಡ ಹೊರಬಿದ್ದಿರುವುದರಿಂದ ನನ್ನ ಕನಸು ಅಂತ್ಯಗೊಂಡಿದೆ ಎಂದು ರವಿವಾರ ಕ್ರಿಸ್ಟಿಯಾನೊ ರೊನಾಲ್ಡೊ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

"ಪೋರ್ಚುಗಲ್ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವುದು ನನ್ನ ವೃತ್ತಿ ಜೀವನದಲ್ಲಿನ ಬಹುದೊಡ್ಡ ಮತ್ತು ಮಹತ್ವಾಕಾಂಕ್ಷಿ ಕನಸಾಗಿತ್ತು. ಅದೃಷ್ಟವಶಾತ್, ಪೋರ್ಚುಗಲ್ ಒಳಗೊಂಡಂತೆ ಹಲವಾರು ತಂಡಗಳಿಗೆ ನಾನು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿದ್ದೇನೆ" ಎಂದು ಹೇಳಿದ್ದಾರೆ.

ಪೊರ್ಚುಗಲ್ ತಂಡ ಭಾಗಿಯಾಗಿದ್ದ ಅಂತಿಮ ಎರಡು ಪಂದ್ಯಗಳಾದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್ ಎದುರು ಹಾಗೂ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರೊಕ್ಕೊ ಎದುರು ರೊನಾಲ್ಡೊ 11ರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಅವರು ತಮ್ಮ ಹಣೆಬರಹವನ್ನು ಸಮಯದ ನಿರ್ಧಾರಕ್ಕೆ ಬಿಟ್ಟಿದ್ದು, ಉತ್ತಮ ಸಮಾಲೋಚಕರನ್ನು ಪಡೆಯುವ ಆಶಾವಾದದಲ್ಲಿದ್ದಾರೆ.

Similar News