ವಾಯುಮಾಲಿನ್ಯ: ದೆಹಲಿಯನ್ನು ಮೀರಿಸಿದ ಮುಂಬೈ!

Update: 2022-12-13 02:04 GMT

ಮುಂಬೈ: ಮಹಾನಗರದ ವಾಯುಮಾಲಿನ್ಯ ಮಟ್ಟ ಇದೀಗ ರಾಷ್ಟ್ರ ರಾಜಧಾನಿಯನ್ನು ಮೀರಿಸಿದೆ ಎಂದು hindustantimes.com ವರದಿ ಮಾಡಿದೆ.

ವಾರಾರಂಭದಲ್ಲಿ ವಾಣಿಜ್ಯ ರಾಜಧಾನಿಯ ಮಂದಿ ದೆಹಲಿ ಮಂದಿಗಿಂತಲೂ ಹೆಚ್ಚು ಮಲಿನ ಗಾಳಿಯನ್ನು ಉಸಿರಾಡಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ಮುಂಬೈ ವಾಯು ಗುಣಮಟ್ಟ ಸೂಚ್ಯಂಕ ಕಳೆದ ವಾರಕ್ಕಿಂತ ಸುಧಾರಿಸಿ 225ಕ್ಕೆ ತಲುಪಿದ್ದರೂ, ಇದು ಇನ್ನೂ 'ಕಳಪೆ' ವರ್ಗದಲ್ಲಿಯೇ ಮುಂದುವರಿದಿದೆ. ದೆಹಲಿಯಲ್ಲಿ ವಾಯುಗುಣಮಟ್ಟ 152 ಎಕ್ಯೂಐ (AQI) ತಲುಪಿದ್ದು, ಇದು ಸಾಮಾನ್ಯ ವರ್ಗದಲ್ಲಿದೆ ಎಂದು ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಫೋರ್‍ಕಾಸ್ಟಿಂಗ್ ಆ್ಯಂಡ್ ರಿಸರ್ಚ್ (System of Air Quality Forecasting and Research (SAFAR) ಹೇಳಿದೆ.

SAFAR ಅಂಕಿ ಅಂಶಗಳು ಮುಂಬೈ ವಾಯು ಗುಣಮಟ್ಟವನ್ನು ತೀವ್ರ ಕಳಪೆ ಎಂದು ಪ್ರಕಟಿಸಿದರೂ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ ಅಂಶಗಳು ಇದಕ್ಕೆ ವಿರುದ್ಧವಾದ ಮಾಹಿತಿಯನ್ನು ಹೊರಹಾಕಿವೆ.

ಮುಂಬೈ ಎಕ್ಯೂಐ 168 (ಸಾಮಾನ್ಯ) ಇದ್ದರೆ ದೆಹಲಿಯ ವಾಯುಗುಣಮಟ್ಟ 218 ಎಕ್ಯೂಐ (ಕಳಪೆ) ಇದೆ ಎಂದು ಸಿಪಿಸಿಬಿ ಪ್ರಕಟಿಸಿದೆ.

ಎಸ್‍ಎಎಫ್‍ಎಆರ್ 9 ಕಡೆಗಳಲ್ಲಿ ಮಾಲಿನ್ಯ ಮಾಪನ ಮಾಡುವ ವ್ಯವಸ್ಥೆ ಇದ್ದರೆ ಸಿಪಿಸಿಬಿ 18 ಪ್ರದೇಶಗಳ ಆಧಾರದಲ್ಲಿ ಒಟ್ಟಾರೆ ಎಕ್ಯೂಐ ಲೆಕ್ಕಾಚಾರ ಮಾಡುವುದು ಈ ವ್ಯತ್ಯಾಸಕ್ಕೆ ಕಾರಣ ಎನ್ನಲಾಗಿದೆ. ದೆಹಲಿಯಲ್ಲಿ 36 ವಾಯು ಮಾಲಿನ್ಯ ನಿಗಾ ಕೇಂದ್ರಗಳಿವೆ.

ಮುಂಬೈನ ಕಳಪೆ ವಾಯುಗುಣಮಟ್ಟ ಜಿ20 ಶೇರ್ಪಾ ಅಮಿತಾಬ್ ಕಾಂತ್ ಮತ್ತು ಪಾಲಿಕೆ ಆಯುಕ್ತ ಐ.ಎಸ್.ಚಹಾಲ್ ಅವರ ನಡುವಿನ ಮಾತುಕತೆಗೂ ಕಾರಣವಾಗಿತ್ತು. ಚಹಲ್ ಅವರು ರಿಫೈನರಿಗಳನ್ನು ಮತ್ತು ಟಾಟಾ ವಿದ್ಯುತ್ ಘಟಕವನ್ನು ಪ್ರಮುಖ ಮಾಲಿನ್ಯಕಾರಕ ಘಟಕಗಳು ಎಂದು ದೂರಿದ್ದಾರೆ. ಆದರೆ ಈ ಶುದ್ಧೀಕರಣ ಘಟಕಗಳು ಹೊರಸೂಸುವ ಗಂಧಕದ ಡೈ ಆಕ್ಸೈಡ್ ನಿಗದಿತ ಮಟ್ಟದಲ್ಲಿವೆ ಎಂದು ಕಾಂತ್ ಪ್ರತಿಪಾದಿಸಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ. 

Similar News