ಬಂಗಾಳ ಹಿಂಸಾಚಾರ ಪ್ರಕರಣದ ಆರೋಪಿ ಸಿಬಿಐ ಕಸ್ಟಡಿಯಲ್ಲಿ ಮೃತ್ಯು

Update: 2022-12-13 02:45 GMT

ಕೊಲ್ಕತ್ತಾ: ಹತ್ತು ಮಂದಿಯನ್ನು ಬಲಿ ತೆಗೆದುಕೊಂಡ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೊಗುಟಿ ಗ್ರಾಮದಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಸೋಮವಾರ ಸಿಬಿಐ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ndtv.com ವರದಿ ಮಾಡಿದೆ.

ಮಹಿಳೆಯರು ಮತ್ತು ಮಕ್ಕಳನ್ನು ಜೀವಂತವಾಗಿ ಸುಟ್ಟು ಹಾಕಿದ ಹತ್ಯಾಕಾಂಡದ ಸಂಬಂಧ ಆರೋಪಿ ಲಲೋನ್ ಶೇಖ್ (Lalon Sheikh) ಎಂಬಾತನನ್ನು ಜಾರ್ಖಂಡ್‍ನ ಪಕೂರ್‍ನಲ್ಲಿರುವ ಅಡಗುದಾಣದಿಂದ ಘಟನೆ ನಡೆದ ಎಂಟು ತಿಂಗಳ ಬಳಿಕ ಬಂಧಿಸಲಾಗಿತ್ತು.

ಲಲೋನ್ ಶೇಖ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಮ್‍ಪುರಾತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಸಿಬಿಐ ಕಚೇರಿಗೆ ಧಾವಿಸಿದ್ದಾರೆ. ಉದ್ರಿಕ್ತ ಕುಟುಂಬ ಸದಸ್ಯರು ಬೊಗುಟಿಯಲ್ಲಿ ರಸ್ತೆ ತಡೆ ನಡೆಸಿ ಸಿಬಿಐ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಸೋಮವಾರ ಕಸ್ಟಡಿಯಲ್ಲಿದ್ದ ವೇಳೆ ಶೇಖ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಿಬಿಐ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ತನಿಖೆಯನ್ನು ಕೊಲ್ಕತ್ತಾ ಹೈಕೋರ್ಟ್ ಸಿಬಿಐಗೆ ವರ್ಗಾಯಿಸಿದ ಹಿನ್ನೆಲೆಯಲ್ಲಿ ಬಂಧನದ ಬಳಿಕ ಲಲೋನ್ ಶೇಖ್‍ನನ್ನು ಸಿಬಿಐ ತಾತ್ಕಾಲಿಕ ಕ್ಯಾಂಪ್‍ನಲ್ಲಿ ಬಂಧನದಲ್ಲಿ ಇಟ್ಟಿತ್ತು.

ಲಲೋನ್ ಆತ್ಮಹತ್ಯೆ ಬಗ್ಗೆ ಸಂಜೆ 4.40 ರಿಂದ 5.00 ಗಂಟೆಯ ವೇಳೆಗೆ ಸಿಬಿಐ ಅಧಿಕಾರಿಗಳಿಂದ ಸ್ಥಳೀಯ ಠಾಣೆಗೆ ಮಾಹಿತಿ ಬಂದಿದೆ. ಆ ಬಳಿಕ ನನಗೆ ಮಾಹಿತಿ ಲಭ್ಯವಾಗಿದ್ದು, ಈ ಅಸಹಜ ಸಾವಿನ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಬಿರ್ಬೂಮ್ ಎಸ್ಪಿ ನಾಗೇಂದ್ರ ತ್ರಿಪಾಠಿ ಸುದ್ದಿಗಾರರಿಗೆ ತಿಳಿಸಿದರು. ಈ ಬಗ್ಗೆ ndtv.com ವರದಿ ಮಾಡಿದೆ.

Similar News