ಭಾರತ-ಚೀನಾ ಗಡಿ ಘರ್ಘಣೆಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಒತ್ತಾಯ: ಕಾಂಗ್ರೆಸ್ ವಿರುದ್ಧ ಅಮಿತ್ ಶಾ ಕಿಡಿ

Update: 2022-12-13 16:29 GMT

ಹೊಸದಿಲ್ಲಿ,ಡಿ.13: ಪ್ರತಿಪಕ್ಷಗಳು ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವಿನ ಘರ್ಷಣೆಗಳ ಕುರಿತು ಮಂಗಳವಾರ ಚರ್ಚೆಗೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು,ನರೇಂದ್ರ ಮೋದಿ ಸರಕಾರವು ಅಧಿಕಾರದಲ್ಲಿ ಇರುವವರೆಗೂ ಯಾರೂ ಭಾರತದ ಒಂದಿಂಚೂ ಭೂಮಿಯನ್ನು ಕಬಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದೇ ವೇಳೆ, ಭಾರತೀಯ ಯೋಧರ ಶೌರ್ಯವನ್ನು ಅವರು ಪ್ರಶಂಸಿಸಿದರು.

ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾ,ವಿದೇಶಿ ದೇಣಿಗೆಗಳ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ಯಡಿ ರಾಜೀವ ಗಾಂಧಿ ಪ್ರತಿಷ್ಠಾನ (ಆರ್‌ಜಿಎಫ್)ದ ನೋಂದಣಿ ರದ್ದತಿ ಕುರಿತು ಪ್ರಶ್ನೆಗಳನ್ನು ತಪ್ಪಿಸಲು ಕಾಂಗ್ರೆಸ್ ಸಂಸತ್‌ನಲ್ಲಿ ಗಡಿ ವಿವಾದವನ್ನು ಪ್ರಸ್ತಾಪಿಸಿತ್ತು ಎಂದು ಹೇಳಿದರು. ಆರ್‌ಜಿಎಫ್ ಚೀನಿ ರಾಯಭಾರ ಕಚೇರಿಯಿಂದ 1.35 ಕೋ.ರೂ.ಗಳನ್ನು ಸ್ವೀಕರಿಸಿತ್ತು,ಇದು ಎಫ್‌ಸಿಆರ್‌ಎ ಉಲ್ಲಂಘನೆಯಾಗಿದ್ದರಿಂದ ಅದರ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಎಂದು ಶಾ ತಿಳಿಸಿದರು.

ಚೀನಾದ ಬಗ್ಗೆ ನೆಹರು ಪ್ರೀತಿಯಿಂದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸ್ಥಾನವನ್ನು ತ್ಯಾಗ ಮಾಡಲಾಗಿತ್ತು ಎಂದರು.

ದುರ್ಬಲ ರಾಜಕೀಯ ನಾಯಕತ್ವ ರಕ್ಷಣಾ ಸಚಿವಾಲಯದ ಹೇಳಿಕೆಯಲ್ಲಿ ವಿವರಗಳು ಅಪೂರ್ಣವಾಗಿರುವಂತಿದೆ. ಈ ಬಗ್ಗೆ ಸ್ಪಷ್ಟನೆ ಬೇಕು ಎಂದು ಸರಣಿ ಟ್ವೀಟ್‌ಗಳಲ್ಲಿ ಆಗ್ರಹಿಸಿರುವ ಎಐಎಂಐಎಂ ವರಿಷ್ಠ ಅಸದುದ್ದೀನ್ ಉವೈಸಿ, ಘರ್ಷಣೆಗೆ ಕಾರಣವೇನಾಗಿತ್ತು? ಗುಂಡುಗಳನ್ನು ಹಾರಿಸಲಾಗಿತ್ತೇ ಅಥವಾ ಗಲ್ವಾನ್ ಮಾದರಿಯಲ್ಲಿ ಘರ್ಷಣೆ ನಡೆದಿತ್ತೇ? ಎಷ್ಟು ಯೋಧರು ಗಾಯಗೊಂಡಿದ್ದಾರೆ ? ಅವರ ಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದ್ದಾರೆ.

ಭಾರತೀಯ ಸೇನೆಯನ್ನು ಪ್ರಶಂಸಿಸಿರುವ ಅವರು,ಮೋದಿ ಅವರಡಿ ದುರ್ಬಲ ರಾಜಕೀಯ ನಾಯಕತ್ವವು ಚೀನಾದ ಎದುರು ಈ ಮುಖಭಂಗಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಮ್ಯಾಪ್ ಮತ್ತು ಆ್ಯಪ್ ‘ದಾಳಿಯು ‘ಮ್ಯಾಪ್’ನಲ್ಲಿದ್ದರೆ ಮತ್ತು ಪ್ರತಿದಾಳಿಯು ‘ಆ್ಯಪ್’ನಲ್ಲಿದ್ದರೆ ಏನಾಗಬೇಕೋ ಅದೇ ಈಗ ಆಗುತ್ತಿದೆ. ಚೀನಾ ಈಗ ಅರುಣಾಚಲ ಪ್ರದೇಶದ ಮೇಲೆ ತನ್ನ ಕೆಟ್ಟ ಕಣ್ಣು ಹಾಕಿದೆ. ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಪ್ರಧಾನಿ ಮತ್ತೊಮ್ಮೆ ಚೀನಾಕ್ಕೆ ಕ್ಲೀನ್ ಚಿಟ್ ನೀಡುವರೇ ?’ ಎಂದು ಕಾಂಗ್ರೆಸ್ ವಕ್ತಾರ ಪವನ ಖೇರಾ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

 ಗಲ್ವಾನ್ ಘರ್ಷಣೆಗಳ ಬಳಿಕ ಚೀನಿ ನಂಟು ಹೊಂದಿದ್ದ 59 ಮೊಬೈಲ್ ಆ್ಯಪ್‌ಗಳನ್ನು ನಿರ್ಬಂಧಿಸಲು ಭಾರತದ ನಿರ್ಧಾರವನ್ನು ಪ್ರಸ್ತಾಪಿಸಿ ಖೇರಾ ಈ ಟ್ವೀಟ್ ಮಾಡಿದ್ದಾರೆ.

ಚೀನಿ ಸರಕಾರವು ಮೋದಿ ಸರಕಾರವನ್ನು ಬ್ಲಾಕ್‌ಮೇಲ್ ಮಾಡುತ್ತಿಲ್ಲವಾದರೆ ಭಾರತವು ಎಲ್ಲ ಚೀನಿ ಕಂಪನಿಗಳನ್ನು ಮುಚ್ಚಿಸಬೇಕು ಮತ್ತು ಚೀನಾದಲ್ಲಿರುವ ಭಾರತೀಯರಿಗೆ ಸ್ವದೇಶಕ್ಕೆ ಮರಳುವಂತೆ ತಿಳಿಸಬೇಕು.ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ  ಹೇಳಿದ್ದಾರೆ.

Similar News