ಅನರ್ಹ ಸಂಸ್ಥೆಗೆ ಮೊರ್ಬಿ ಸೇತುವೆ ದುರಸ್ತಿ ಕಾಮಗಾರಿಯ ಹೊರಗುತ್ತಿಗೆ ವಹಿಸಲಾಗಿತ್ತು: ಗುಜರಾತ್‌ ಹೈಕೋರ್ಟ್‌

Update: 2022-12-13 10:22 GMT

ಅಹ್ಮದಾಬಾದ್: ಮೊರ್ಬಿ (Morbi) ಪಟ್ಟಣದ ಸ್ಥಳೀಯಾಡಳಿತ ಮತ್ತು ಖಾಸಗಿ ಗುತ್ತಿಗೆದಾರ ಸಂಸ್ಥೆ ಅಜಂತಾ, ಮೊರ್ಬಿ ಸೇತುವೆಯ ದುರಸ್ತಿ ಕಾಮಗಾರಿಯ ಹೊರಗುತ್ತಿಗೆಯನ್ನು ಅನರ್ಹ ಸಂಸ್ಥೆಗೆ ವಹಿಸಿದ್ದವು ಎಂದು ಮೊರ್ಬಿ ಸೇತುವೆ ದುರಸ್ತಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ವರದಿಯನ್ನು ಉಲ್ಲೇಖಿಸಿ ಗುಜರಾತ್‌ ಹೈಕೋರ್ಟ್‌ (Gujarat HC) ಸೋಮವಾರ ಹೇಳಿದೆ.

ಸೇತುವೆಯ ಮುಖ್ಯ ಕೇಬಲ್‌ಗೆ ಬಳಸಲಾಗಿದ್ದ 48 ಸ್ಟೀಲ್‌ ಸ್ಟ್ರ್ಯಾಂಡ್‌ಗಳ ಪೈಕಿ 22 ತುಕ್ಕು ಹಿಡಿದಿದ್ದವು ಎಂದು ಎಸ್‌ಐಟಿ ವರದಿಯಿಂದ ತಿಳಿದು ಬರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಮತ್ತು ನ್ಯಾಯಮೂರ್ತಿ ಆಶುತೋಷ್‌ ಜೆ ಶಾಸ್ತ್ರಿ ಅವರ ಪೀಠ ಹೇಳಿದೆ.

"ಸೇತುವೆಯನ್ನು ಜನಸಂಚಾರಕ್ಕೆ ಮುಕ್ತಗೊಳಿಸುವ ಮೊದಲು ಲೋಡ್‌ ಪರೀಕ್ಷೆಯನ್ನು ನಡೆಸಲಾಗಿಲ್ಲ, ಸೇತುವೆಯಲ್ಲಿನ ಜನಸಂಚಾರವನ್ನು ನಿಯಂತ್ರಿಸಲಾಗಿರಲಿಲ್ಲ ಹಾಗೂ  ಸೇತುವೆಯಲ್ಲಿ ಹಲವು ವಿನ್ಯಾಸದ ದೋಷಗಳು ಕಂಡು ಬಂದಿವೆ ಹಾಗೂ ಇವು ಸೇತುವೆಯ ಕುಸಿತಕ್ಕೆ ಕಾರಣವಾಗಿವೆ," ಎಂದು ನ್ಯಾಯಾಲಯ ಹೇಳಿದೆ.

ಅಕ್ಟೋಬರ್‌ 30 ರಂದು ನಡೆದ ಸೇತುವೆ ದುರಂತದಲ್ಲಿ 141  ಜನರು ಮೃತಪಟ್ಟ ನಂತರ ನ್ಯಾಯಾಲಯವು ರಿಜಿಸ್ಟ್ರಾರ್‌ ಅವರಿಗೆ ಸಲ್ಲಿಸಲು ಸೂಚಿಸಿದ್ದ ಸಾರ್ವಜಿನಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮೇಲಿನ ಅಂಶಗಳನ್ನು ಹೇಳಲಾಗಿದೆ.

ಎಲ್ಲಾ ಸಾರ್ವಜನಿಕ ಸೇತುವೆಗಳನ್ನು ನಿಯಮಿತವಾಗಿ ತಪಾಸಣೆಗೆ ಒಳಪಡಿಸುವಂತೆ ವಿಶೇಷ ತನಿಖಾ ತಂಡ ನೀಡಿರುವ ಶಿಫಾರಸುಗಳ ಜಾರಿಗೆ ಸರ್ಕಾರ ಯಾವ ಕ್ರಮಕೈಗೊಳ್ಳಲಿದೆ ಹಾಗೂ  ರಾಜ್ಯದಲ್ಲಿ ಜನರು ಬಳಸುವ ಇಂತಹ ಸೇತುವೆಗಳ ಸಂಖ್ಯೆಯನ್ನು ಮುಂದಿನ ವಿಚಾರಣೆ ನಡೆಯುವ ಜನವರಿ 16 ರಂದು ತಿಳಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.

Similar News