ಮಸ್ಕ್‌ ವೇದಿಕೆಯೇರುತ್ತಿದ್ದಂತೆ ಅಸಮಾಧಾನದ ಉದ್ಗಾರ ಎತ್ತಿದ ಜನರ ಗುಂಪು: ವಿಡಿಯೋಗಳನ್ನು ಅಳಿಸಲು ಟ್ವಿಟರ್ ಯತ್ನ!

Update: 2022-12-13 15:35 GMT

ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್‌ನ (Twitter) ನೂತನ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರೂ ನೈಜ ಜೀವನದಲ್ಲಿ ಜನರು ಅವರ ಹಾದಿಯನ್ನು ಒಪ್ಪಲು ಸಿದ್ಧವಿದ್ದಂತಿಲ್ಲ‌. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಆಯೋಜನೆಗೊಂಡಿದ್ದ ಡೇವ್ ಚಾಪೆಲ್ ಪ್ರದರ್ಶನಕ್ಕೆ ಎಲಾನ್ ಮಸ್ಕ್ ಆಹ್ವಾನಿತರಾಗಿದ್ದರು. ಮಸ್ಕ್ ವೇದಿಕೆಯನ್ನು ಏರುತ್ತಿದ್ದಂತೆ ಜನರ ಗುಂಪೊಂದು ಅವರ ವಿರುದ್ಧ ತೀವ್ರ ಅಸಹನೆಯಿಂದ ಕೇಕೆ ಹಾಕಿ ಅಸಮಾಧಾನ‌ ಹೊರಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹಾಸ್ಯ ನಟ ಡೇವ್ ಚಾಪೆಲ್, ಮಸ್ಕ್ ಇತ್ತೀಚಿನ ಸುತ್ತಿನಲ್ಲಿ ಮಾಡಿರುವ ಉದ್ಯೋಗ ಕಡಿತದಲ್ಲಿ ವಜಾಗೊಂಡಿರುವ ಟ್ವಿಟರ್ ಉದ್ಯೋಗಿಗಳು ಬಹುಶಃ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರಬಹುದು ಎಂದು ಹಾಸ್ಯ ಮಾಡಿದ್ದಾರೆ ಎಂದು indiatoday.in ವರದಿ ಮಾಡಿದೆ.

ಮಸ್ಕ್ ಅವರನ್ನು ವೇದಿಕೆಗೆ ಆಮಂತ್ರಿಸಿದ ಹಾಸ್ಯ ನಟ ಡೇವ್ ಚಾಪೆಲ್, "ಮಾನ್ಯರೆ ಮತ್ತು ಮಹಿಳೆಯರೆ, ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಾಗಿ ಕೊಂಚ ಸದ್ದು ಮಾಡಿ" ಎಂದು ಮನವಿ ಮಾಡಿದರು. ಮಸ್ಕ್ ವೇದಿಕೆ ಏರುತ್ತಿದ್ದಂತೆಯೇ ಗುಂಪೊಂದು ಅಸಮಾಧಾನದ ಉದ್ಗಾರವನ್ನೂ ತೆಗೆಯಿತು. ಈ ಕುರಿತು ಟ್ವಿಟರ್‌ನಲ್ಲಿ ವಿಡಿಯೋ ವೈರಲ್ ಆಗಿದೆ. ಆದರೆ ಆ ವಿಡಿಯೊವನ್ನು ಟ್ವಿಟರ್ ಅಳಿಸಿ ಹಾಕಲು ಯತ್ನಿಸಿದೆ ಎಂದು Gizmodo ವರದಿ ಮಾಡಿದೆ. ಹೀಗಿದ್ದೂ ಸಂಸ್ಥೆಯು ಆ ವಿಡಿಯೊದ ಕೊಂಡಿಯನ್ನು ಹಂಚಿಕೊಂಡಿದೆ. ಈ ವಿಡಿಯೊದಲ್ಲಿ ಮಸ್ಕ್ ವೇದಿಕೆಯೆಡೆಗೆ ಹೆಜ್ಜೆ ಹಾಕುತ್ತಿದ್ದಂತೆಯೇ ಅಸಮಾಧಾನದ ಉದ್ಗಾರಗಳು ಜೋರಾಗುವುದು ಕೇಳಿಸುತ್ತದೆ.

ಮಸ್ಕ್ ಮುಜುಗರಕ್ಕೊಳಗಾಗುವುದರಿಂದ ತಪ್ಪಿಸಲು, "ಯಾರೆಲ್ಲ ಅಸಮಾಧಾನದ ಉದ್ಗಾರ ತೆಗೆಯುತ್ತಿದ್ದೀರೋ ಅವರಿಗೆಲ್ಲ ಭಯಂಕರ ಆಸನ ಕಾದಿದೆ" ಎಂದು ಚಾಪೆಲ್ ಹೇಳಿದ್ದಾರೆ. ಈ ಸಮಾರಂಭದ ಸಭಾಂಗಣಕ್ಕೆ ಫೋನ್ ಕೊಂಡೊಯ್ಯಲು ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ. ಆದರೆ, ಕೆಲವು ಪ್ರೇಕ್ಷಕರು ರಹಸ್ಯವಾಗಿ ಫೋನ್‌ಗಳನ್ನು ಸಭಾಂಗಣಕ್ಕೆ ಕೊಂಡೊಯ್ದು, ಮಸ್ಕ್ ಪ್ರೇಕ್ಷಕರಿಂದ ನಿರ್ದಯವಾಗಿ ಅಪಹಾಸ್ಯಗೊಂಡ ಸನ್ನಿವೇಶವನ್ನು ಚಿತ್ರೀಕರಿಸಿದ್ದಾರೆ ಎಂದು Gizmodo ವರದಿ ಮಾಡಿದೆ.

ಇದನದನೂ ಓದಿ: ಜನನ ದರ ಸುಧಾರಣೆಗಾಗಿ ಪ್ರತಿ ಪ್ರಜೆಗೆ ರೂ. 48,000 ಹೆಚ್ಚುವರಿ ಹಣ ನೀಡಲು ಮುಂದಾದ ಜಪಾನ್

Similar News