ಧಾರ್ಮಿಕ ನಂಬಿಕೆಗಳಲ್ಲಿ ಹಸ್ತಕ್ಷೇಪ ಎಷ್ಟು ಸರಿ?

Update: 2022-12-14 04:13 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ರಾಜ್ಯದ ಕೆಲವು ದೇವಸ್ಥಾನಗಳಲ್ಲಿ ಆಚರಣೆಯಲ್ಲಿರುವ ಟಿಪ್ಪು ಕಾಲದ 'ಸಲಾಂ ಆರತಿ'ಯ ಹೆಸರನ್ನು ಬದಲಿಸಲು ಸರಕಾರ ಚಿಂತನೆ ನಡೆಸಿದೆ. 'ಸಲಾಂ ಆರತಿ' ಎನ್ನುವುದು ಗುಲಾಮತನದ ಸಂಕೇತವಾಗಿರುವುದರಿಂದ 'ಆರತಿ ನಮಸ್ಕಾರ' ಎಂದು ಪೂಜೆಗೆ ಮರು ನಾಮಕರಣ ಮಾಡಲು ಸರಕಾರ ಉದ್ದೇಶಿಸಿದೆಯಂತೆ. ಯಾವುದೋ ಒಂದು ರಸ್ತೆ ಅಥವಾ ಕಟ್ಟಡದ ಹೆಸರನ್ನು ಬದಲಿಸಿದ ರೀತಿಯಲ್ಲಿ, ಒಂದು ದೇವಸ್ಥಾನ ತಲೆತಲಾಂತರಗಳಿಂದ ನಡೆಸುತ್ತಾ ಬಂದಿರುವ ಒಂದು ಪೂಜೆಯ ಹೆಸರನ್ನು ಬದಲಿಸುವ ಅಧಿಕಾರ ಸರಕಾರಕ್ಕಿದೆಯೆ? ದೇವಸ್ಥಾನದೊಳಗಿನ ಪೂಜೆ ಪುನಸ್ಕಾರಗಳ ಹೆಸರುಗಳನ್ನು ನಿರ್ಧರಿಸುವ ಅಧಿಕಾರ ಆಯಾ ದೇವಸ್ಥಾನಗಳ ಮುಖ್ಯಸ್ಥರು, ಆಡಳಿತ ಮಂಡಳಿಗೆ, ಧರ್ಮದರ್ಶಿಗಳಿಗಿರುತ್ತದೆ. ಸರಕಾರ ಮಧ್ಯ ಪ್ರವೇಶಿಸಿ ಪೂಜೆಯ ಹೆಸರನ್ನು, ಪೂಜೆಯ ರೀತಿಗಳನ್ನು ಬದಲಿಸುವುದರಿಂದ ಆ ದೇವಸ್ಥಾನದ ಸಂಪ್ರದಾಯ, ರೀತಿ, ರಿವಾಜುಗಳಿಗೆ ಹಾನಿಯಾಗುವುದಿಲ್ಲವೆ? ಒಂದು ರೀತಿಯಲ್ಲಿ, ಸರಕಾರ ತನ್ನ ರಾಜಕೀಯ ದುರುದ್ದೇಶಗಳಿಗಾಗಿ ದೇವಸ್ಥಾನಗಳ ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ನಡೆಸುವುದು, ಭಕ್ತರ ಭಾವನೆಗಳಿಗೆ ಧಕ್ಕೆ ತಂದಂತಾಗುವುದಿಲ್ಲವೆ? ಎನ್ನುವ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ದೇವಸ್ಥಾನಗಳಲ್ಲಿ ನಡೆಯುವ 'ಸಲಾಂ ಆರತಿ' ಸರಕಾರಕ್ಕೆ ಇರಿಸು ಮರಿಸು ಉಂಟು ಮಾಡುತ್ತಿರುವ ಕಾರಣ ಎಲ್ಲರಿಗೂ ಗೊತ್ತಿದೆ. ಟಿಪ್ಪು ಸುಲ್ತಾನ್‌ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಅದು ನಡೆಸುತ್ತಿರುವ ಪ್ರಯತ್ನ ವಿಫಲವಾಗುವುದಕ್ಕೆ ಈ ಸಲಾಂ ಆರತಿಯೂ ಒಂದು ಮುಖ್ಯ ಕಾರಣ. ಬಿಜೆಪಿ ಮತ್ತು ಸಂಘಪರಿವಾರ ಬೀದಿಯಲ್ಲಿ ನಿಂತು 'ಟಿಪ್ಪು ಸುಲ್ತಾನ್ ಮತಾಂಧ, ಟಿಪ್ಪು ಸುಲ್ತಾನ್ ನೂರಾರು ಹಿಂದೂಗಳನ್ನು ಮತಾಂತರಿಸಿದ, ಕೊಂದು ಹಾಕಿದ' ಎಂದು ಗದ್ದಲ ಎಬ್ಬಿಸುವಾಗ, ಈ ದೇವಸ್ಥಾನಗಳಲ್ಲಿ ಮೊಳಗುವ ಘಂಟಾನಾದ, ಸಲಾಂ ಆರತಿ ಈ ನಾಯಕರ ಮುಖಕ್ಕೆ ಪರೋಕ್ಷ ಮಂಗಳಾರತಿಯನ್ನು ಮಾಡುತ್ತದೆ. ಶತಮಾನಗಳ ಹಿಂದೆಯೇ ಕರ್ನಾಟಕದ ಹಿರಿಮೆಯನ್ನು ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ಟಿಪ್ಪುವಿನ ಬಗ್ಗೆ ಸರಕಾರ ಹೆಮ್ಮೆ ಪಡಬೇಕಿತ್ತು. ಆದರೆ ಕರ್ನಾಟಕದ ಪರಂಪರೆ, ಇತಿಹಾಸದ ಬಗ್ಗೆ ಕೀಳರಿಮೆ ಪಡುತ್ತಾ, ಗುಜರಾತ್, ಉತ್ತರ ಪ್ರದೇಶಗಳನ್ನು ಮಾದರಿಯಾಗಿ ಸ್ವೀಕರಿಸಿದವರಿಗೆ ಟಿಪ್ಪು ದುಷ್ಟನಂತೆ ಕಾಣುವುದು ಸಹಜವೇ ಆಗಿದೆ. ಅದರ ಭಾಗವಾಗಿಯೇ ಆತನನ್ನು ಹಿಂದೂ ವಿರೋಧಿಯಾಗಿ ಪ್ರತಿಪಾದಿಸಲು ಕೆಲವು ರಾಜಕೀಯ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಹಿಂದೂ ದೇವಸ್ಥಾನಗಳಿಗೆ ಆತ ನೀಡಿದ ರಕ್ಷಣೆ, ಭದ್ರತೆಯ ಕುರಿತ ದಾಖಲೆಗಳನ್ನು ಅಳಿಸುವುದು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಮರಾಠರು ಶೃಂಗೇರಿ ಮಠದ ಮೇಲೆ ನಡೆಸಿದ ದಾಳಿ, ಟಿಪ್ಪು ಶೃಂಗೇರಿ ಮಠಕ್ಕೆ ನೀಡಿದ ಬೆಂಬಲಗಳನ್ನು ಮರೆಯಲು ಸಾಧ್ಯವೆ? ಟಿಪ್ಪು ಮತಾಂಧನೇ ಆಗಿದ್ದರೆ ಹಿಂದೂ ದೇವಸ್ಥಾನಗಳಲ್ಲಿ ಟಿಪ್ಪುಸುಲ್ತಾನನ ಹೆಸರಲ್ಲಿ 'ಸಲಾಂ ಆರತಿ' ನಡೆಯುತ್ತಿತ್ತೆ? ಒಬ್ಬ ಕಟ್ಟಾ ಮತಾಂಧ ಮುಸ್ಲಿಮ್ ಅರಸನೊಬ್ಬ ಹಿಂದೂ ಧರ್ಮದ ದೇವಸ್ಥಾನದಲ್ಲಿ ಅಲ್ಲಿನ ದೇವರಿಗೆ 'ಸಲಾಂ ಆರತಿ'ಯ ಮೂಲಕ ಪೂಜೆ ಸಲ್ಲಿಸಲು ಸಾಧ್ಯವೆ? 'ಸಲಾಂ ಆರತಿ' ಹೆಸರು ಗುಲಾಮತನದ ಸಂಕೇತವಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅದು ಗುಲಾಮತನದ ಸಂಕೇತವಲ್ಲ, ಕರ್ನಾಟಕದ ಸೌಹಾರ್ದ ಪರಂಪರೆಯ ಸಂಕೇತವಾಗಿದೆ. ದೇವಸ್ಥಾನಗಳಲ್ಲಿ ಟಿಪ್ಪು ಸುಲ್ತಾನನಿಗೆ ಪೂಜೆ ಸಲ್ಲಿಕೆಯಾಗುತ್ತಿದ್ದುದಲ್ಲ. ಸ್ವತಃ ಟಿಪ್ಪು ಸುಲ್ತಾನನೇ ಹಿಂದೂಗಳ ನಂಬಿಕೆಯಂತೆ ಅಲ್ಲಿನ ದೇವರಿಗೆ ಪೂಜೆ ಸಲ್ಲಿಸುತ್ತಿದ್ದ. ಆಯಾ ದೇವಸ್ಥಾನಗಳ ಹಿರಿಯರೇ ಅದಕ್ಕೆ 'ಸಲಾಂ ಆರತಿ' ಎಂದು ವಿಶಿಷ್ಟವಾಗಿ ನಾಮಕರಣ ಮಾಡಿದ್ದಾರೆ. ಒಂದು ವೇಳೆ ಅದು ಟಿಪ್ಪುವಿನ ಬಲವಂತಕ್ಕೆ ನಡೆದ ಸಂಪ್ರದಾಯವಾಗಿದ್ದರೆ, ಟಿಪ್ಪು ಅಳಿದ ಬೆನ್ನಿಗೇ ಆ ಆಚರಣೆ ನಿಂತು ಬಿಡುತ್ತಿತ್ತು. ಆದರೆ 'ಸಲಾಂ ಆರತಿ'ಯ ಮಹತ್ವವನ್ನು ಮನಗಂಡು ಅದೇ ಹೆಸರಿನಲ್ಲಿ ಹಿರಿಯರು ಮುಂದುವರಿಸಿಕೊಂಡು ಬಂದಿದ್ದಾರೆ. ಬಿಜೆಪಿ ಅದನ್ನು ಬದಲಿಸಿದ್ದೇ ಆದರೆ, ಅದು ಆ ದೇವಸ್ಥಾನದ ಹಿರಿಯರಿಗೆ ಮಾಡುವ ಅವಮಾನವಾಗಿದೆ.

ಕರ್ನಾಟಕಕ್ಕೆ ಇಂತಹ ಸೌಹಾರ್ದದ ಸುದೀರ್ಘ ಇತಿಹಾಸವೇ ಇದೆ. ಇಲ್ಲಿನ ಸೂಫಿ ಸಂತರು ಮತ್ತು ದತ್ತ ಪರಂಪರೆಯ ನಡುವೆ ಕರುಳಬಳ್ಳಿ ಸಂಬಂಧವಿದೆ. ಇಂದು ಆ ಪರಂಪರೆಗೆ ಹುಳಿ ಹಿಂಡುವ ಕೆಲಸವನ್ನು ಸಂಘಪರಿವಾರ ಮಾಡುತ್ತಿದೆ. ಸೂಫಿ ಸಂತರು ಮತ್ತು ದತ್ತಪರಂಪರೆಯ ಸಂಗಮ ಸ್ಥಳವಾಗಿರುವ ಬಾಬಾಬುಡಾನ್‌ಗಿರಿಗೆ ಸಂಘಪರಿವಾರ ಎಂತಹ ಸ್ಥಿತಿ ತಂದಿಟ್ಟಿದೆ ಎನ್ನುವುದನ್ನು ಕರ್ನಾಟಕ ನೋಡುತ್ತಿದೆ.ಕರ್ನಾಟಕದಲ್ಲಿ ಹಿಂದೂ ಮುಸ್ಲಿಮರನ್ನು ಬೆಸೆಯುವ ಹಲವು ಸಾಂಸ್ಕೃತಿಕ ಆಚರಣೆಗಳಿವೆ. ಉತ್ತರ ಕರ್ನಾಟಕದಲ್ಲಿ ಮೊಹರಂ ಹಬ್ಬವನ್ನು ಮುಸ್ಲಿಮರಿಗಿಂತ ಹಿಂದೂಗಳೇ ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಹಿಂದೂಗಳು ಮೊಹರಂ ಆಚರಿಸುವುದಕ್ಕೂ ಸಂಘಪರಿವಾರ ಅಲ್ಲಲ್ಲಿ ಅಡ್ಡಿ ಉಂಟು ಮಾಡಿದೆ. ಸರಕಾರಕ್ಕೆ ಮುಜುಗರ ತಂದಿರುವುದು ಸಲಾಂ ಎನ್ನುವ ಪದ ಅಲ್ಲ. ಎಲ್ಲಿಯವರಿಗೆ ಆರತಿಯ ಜೊತೆಗೆ ಸಲಾಂ ಎನ್ನುವ ಪದವಿರುತ್ತದೆಯೋ ಅಲ್ಲಿಯವರೆಗೆ ಜನಮಾನಸದಲ್ಲಿ ಟಿಪ್ಪುವಿನ ಹೆಸರು ಮತ್ತು ಆತ ಅನುಸರಿಸಿದ ಸೌಹಾರ್ದವೂ ಜೀವಂತವಿರುತ್ತದೆ. ಸರಕಾರಕ್ಕೆ ಆ ಸೌಹಾರ್ದ ಜೀವಂತವಿರುವುದು ಬೇಡವಾಗಿದೆ. ಆದರೆ ಈ ಸೌಹಾರ್ದ ಪರಂಪರೆಯನ್ನು ಅಳಿಸುವುದು ಅಷ್ಟು ಸುಲಭವಿಲ್ಲ.

ಕರಾವಳಿಯಲ್ಲಿ ಬಪ್ಪನಾಡು ಬಹು ಖ್ಯಾತಿಯನ್ನು ಪಡೆದಿರುವ ದೇವಸ್ಥಾನ. ಬೇರೆ ಬೇರೆ ರಾಜ್ಯಗಳಿಂದ ಈ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನಕ್ಕೆ 'ಬಪ್ಪ ನಾಡು' ಎನ್ನುವ ಹೆಸರು ಬರಲು ಕಾರಣ 'ಬಪ್ಪ ಬ್ಯಾರಿ' ಎನ್ನುವ ಮುಸ್ಲಿಮ್ ವ್ಯಾಪಾರಿ. ಈ ದೇವಸ್ಥಾನದ ನಿರ್ಮಾಣದಲ್ಲಿ ಈತ ಪ್ರಮುಖ ಪಾತ್ರವನ್ನು ವಹಿಸಿದ್ದಾನೆ. ಈಗ ಸರಕಾರ 'ಬಪ್ಪನಾಡು' ಎನ್ನುವ ಹೆಸರನ್ನೇ ಬದಲಿಸಲು ಮುಂದಾಗುತ್ತದೆಯೆ? ಮುಸ್ಲಿಮರನ್ನು ದ್ವೇಷಿಸುವ ಭರದಲ್ಲಿ 'ಸಲಾಂ ಆರತಿ' ಹೆಸರನ್ನು ಬದಲಿಸಿದಂತೆಯೇ ಬಪ್ಪನಾಡು ದೇವಸ್ಥಾನಕ್ಕೆ ಪರ್ಯಾಯ ಹೆಸರನ್ನು ಇಡಲಿದೆಯೆ ಎಂದು ಜನರು ಆತಂಕದಿಂದ ಕೇಳುವಂತಾಗಿದೆ. ಅಷ್ಟೇ ಏಕೆ, ಕರಾವಳಿಯ ಭೂತಾರಾಧನೆಯಲ್ಲಿ ಮುಸ್ಲಿಮ್ ದೈವಗಳೂ ಇವೆ. ಈ ಮುಸ್ಲಿಮ್ ಹೆಸರಿರುವ ದೈವಗಳನ್ನು ಹಿಂದೂಗಳು ಅಷ್ಟೇ ಭಯ ಭಕ್ತಿಯಿಂದ ನಂಬುತ್ತಾರೆ. ಈ ದೈವಗಳ ಹೆಸರನ್ನು ಬದಲಿಸಿ ಅವುಗಳಿಗೆ ಹಿಂದೂ ಹೆಸರನ್ನೂ ನಾಮಕರಣ ಮಾಡಲು ಸರಕಾರ ಮುಂದಾಗುತ್ತದೆಯೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಅಥವಾ ಈ ದೈವಗಳನ್ನೇ 'ಮರಳಿ ಮಾತೃ ಧರ್ಮಕ್ಕೆ' ಮತಾಂತರ ಮಾಡುವ ಯೋಜನೆ ಸರಕಾರದ ಬಳಿ ಇದೆಯೆ? ಕರಾವಳಿಯ ಹಲವು ದೈವಗಳು ಮಸೀದಿಗಳಿಗೆ ಭೇಟಿ ನೀಡುತ್ತವೆ. ಮುಂದಿನ ದಿನಗಳಲ್ಲಿ ಮಸೀದಿಗಳಿಗೆ ಭೇಟಿ ನೀಡದಂತೆ ಈ ದೈವಗಳಿಗೆ ಸರಕಾರ ನೋಟಿಸ್ ನೀಡುತ್ತದೆಯೆ?

ಶಬರಿ ಮಲೆ ಯಾತ್ರೆ ದಕ್ಷಿಣ ಭಾರತದ ಹಿಂದೂಗಳ ಬದುಕಿನಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಈ ಯಾತ್ರೆ ಪೂರ್ತಿಯಾಗಬೇಕಾದರೆ ಶಬರಿಮಲೆಯ ದಾರಿಯಲ್ಲಿರುವ ವಾವರ ಮಸೀದಿ ಅಥವಾ ದರ್ಗಾಕ್ಕೆ ಭಕ್ತರು ಭೇಟಿ ನೀಡಲೇ ಬೇಕಾಗುತ್ತದೆ. ಕರ್ನಾಟಕದಿಂದ ಪ್ರತಿವರ್ಷ ಸಾವಿರಾರು ಭಕ್ತರು ಶಬರಿ ಮಲೆಗೆ ಭೇಟಿ ನೀಡುವ ದಾರಿಯಲ್ಲಿ ಈ ವಾವರ ದರ್ಗಾವನ್ನು ಸಂದರ್ಶಿಸುತ್ತಾರೆ. ದೇವಸ್ಥಾನಗಳಲ್ಲಿ ಸಲಾಂ ಆರತಿ ತಪ್ಪೇ ಆಗಿದ್ದರೆ, ಈ ವಾವರ ದರ್ಗಾ ಭೇಟಿ ಬಗ್ಗೆ ಸರಕಾರದ ನಿಲುವೇನು? ತನ್ನ ರಾಜಕೀಯ ದುರುದ್ದೇಶಗಳಿಗಾಗಿ ದೇವಸ್ಥಾನದೊಳಗಿರುವ ಧಾರ್ಮಿಕ ಆಚರಣೆಗಳನ್ನೇ ತಿರುಚಲು ಮುಂದಾಗಿರುವುದು ನಿಜಕ್ಕೂ ಆಘಾತಕಾರಿ, ಅಪಾಯಕಾರಿ ನಡೆೆಯಾಗಿದೆ. ಕರ್ನಾಟಕದ ಸೌಹಾರ್ದ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಪ್ರತಿಯೊಬ್ಬರೂ ಇದನ್ನೂ ಖಂಡಿಸಬೇಕಾಗಿದೆ ಮಾತ್ರವಲ್ಲ, ತಡೆಯಬೇಕಾಗಿದೆ.

Similar News