ದತ್ತಾಂಶ ಸಂರಕ್ಷಣೆ ಮಸೂದೆಯು RTI ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ: ಮಾಹಿತಿ ಆಯುಕ್ತರ ಆತಂಕ

Update: 2022-12-14 14:35 GMT

ಹೊಸದಿಲ್ಲಿ: ಮಂಗಳವಾರ ನಡೆದ ವರ್ಚುವಲ್ ಸಭೆಯೊಂದರಲ್ಲಿ ಹಲವಾರು ಮಾಹಿತಿ ಆಯುಕ್ತರು ದತ್ತಾಂಶ ಸಂರಕ್ಷಣೆ ಮಸೂದೆಯು (Data Protection Bill) ಹೇಗೆ RTI ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಸರಕಾರವು ಈಗಾಗಲೇ ಮಸೂದೆಯ ಕುರಿತು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ.

ಪ್ರಸ್ತಾವಿತ ಮಸೂದೆಯು ಹೆಚ್ಚಿನ ಮಾಹಿತಿಗಳನ್ನು ನಿರಾಕರಿಸಲು ಅಧಿಕಾರಿಗಳಿಗೆ ಹಕ್ಕನ್ನು ನೀಡುತ್ತದೆ ಎಂದೂ ಮಾಹಿತಿ ಆಯುಕ್ತರು ಹೇಳಿದ್ದಾರೆ ಎಂದು thewire.in ವರದಿ ಮಾಡಿದೆ.

ದತ್ತಾಂಶ ಸಂರಕ್ಷಣೆ ಮಸೂದೆಯಲ್ಲಿ ಮಾಹಿತಿ ಹಕ್ಕಿಗೆ ಬೆದರಿಕೆಯು ತನಗೆ ಕಂಡು ಬರುತ್ತಿದೆ ಎಂದು ಮಾಜಿ ಕೇಂದ್ರೀಯ ಮಾಹಿತಿ ಆಯುಕ್ತ ಶೈಲೇಶ್ ಗಾಂಧಿ ಸಭೆಯಲ್ಲಿ ಹೇಳಿದ್ಧಾರೆ. ಆರ್ಟಿಐ ಕಾಯ್ದೆಯಂತೆ ನಾಗರಿಕರು ಎಲ್ಲ ಮಾಹಿತಿಗಳನ್ನು ಪಡೆಯಬಹುದು, ಆದಾಗ್ಯೂ ಕಾಯ್ದೆಯ ಕಲಂ 8(1)ರಡಿ ಕೇವಲ 10 ವಿಧಗಳ ಮಾಹಿತಿಗಳು ಬಹಿರಂಗಪಡಿಸುವುದರಿಂದ ವಿನಾಯಿತಿ ಪಡೆದಿವೆ. ಈ ವಿನಾಯಿತಿಗಳು ವಿಸ್ತರಿಸಲ್ಪಟ್ಟರೆ RTI ಕಾಯ್ದೆಯ ವ್ಯಾಪ್ತಿಯು ಕುಗ್ಗುತ್ತದೆ ಎಂದರು.

ಈ 10 ವಿನಾಯಿತಿಗಳ ಪೈಕಿ ಕಲಂ 8(1)(ಜೆ) ಹೆಚ್ಚು ಸಾಮಾನ್ಯವಾಗಿ ದುರ್ಬಳಕೆಯಾಗುತ್ತಿದೆ ಮತ್ತು ಶೇ.35ರಷ್ಟು ಮಾಹಿತಿ ನಿರಾಕರಣೆಗಳಿಗೆ ಹೊಣೆಯಾಗಿದೆ ಎಂದು ಗಾಂಧಿ ಬೆಟ್ಟು ಮಾಡಿದರು.

ಕಲಂ 8(1)(ಜೆ) ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ್ದು, ಇದಕ್ಕೆ ತಿದ್ದುಪಡಿ ತರಲು ಮಸೂದೆಯು ಉದ್ದೇಶಿಸಿದೆ. ಇದರಿಂದ ಈ ಉಪ ಕಲಂ ವ್ಯಾಪ್ತಿಯು ಹೆಚ್ಚಲಿದೆ. ವೈಯಕ್ತಿಕ ಮಾಹಿತಿ ಎಂಬ ಕಾರಣವನ್ನೊಡ್ಡಿ ಈಗಾಗಲೇ ಬಹಳಷ್ಟು ಮಾಹಿತಿಗಳನ್ನು ನಿರಾಕರಿಸಲಾಗಿದೆ. ದತ್ತಾಂಶ ಸಂರಕ್ಷಣೆ ಮಸೂದೆಯ ಅನುಷ್ಠಾನವು RTI ಕಾಯ್ದೆಯನ್ನು ‘ಮಾಹಿತಿಯನ್ನು ನೀಡದಿರುವ ಹಕ್ಕು ಕಾಯ್ದೆ’ಯನ್ನಾಗಿ ಮಾಡುತ್ತದೆ. ಮಸೂದೆಯು RTI ಕಾಯ್ದೆಯ ಮೇಲೆ ಅಧಿಕಾರವನ್ನು ಹೊಂದಿರಲಿದೆ ಎಂದು ಹೇಳಿದ ಗಾಂಧಿ, ಆರ್ಟಿಐ ಕಾಯ್ದೆಯು ಸರಕಾರದ ಬದಲು ಸಾಮಾನ್ಯ ಪ್ರಜೆಗಳನ್ನು ‘ಮಾಲಿಕರನ್ನಾಗಿ’ ಅಥವಾ ನಿಜವಾದ ಆಡಳಿತಗಾರರನ್ನಾಗಿ ಮಾಡಿರುವ ಮೊದಲ ಕಾನೂನಾಗಿರುವುದರಿಂದ ಅದನ್ನು ಮುಟ್ಟಬಾರದು ಎಂದು ಆಗ್ರಹಿಸಿದರು. ಶಾಸಕರ ನಿಧಿಗಳ ವಿವರಗಳು ಅಥವಾ ಪಿಎಂ ಕೇರ್ಸ್ ನಿಧಿಯ ಫಲಾನುಭವಿಗಳಂತಹ ಪ್ರಮುಖ ಮಾಹಿತಿಗಳನ್ನು ಹೇಗೆ ನಿರಾಕರಿಸಲಾಗಿದೆ ಎನ್ನುವುದರ ಕುರಿತೂ ಅವರು ಮಾತನಾಡಿದರು.

RTI ಕಾಯ್ದೆಗೆ ಪಾರದರ್ಶಕತೆಯ ಮೂಲಕ ಹೆಚ್ಚಿನ ಬೆಂಬಲವನ್ನು ಒದಗಿಸುವ ಬದಲು ಅದನ್ನು ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಹೇಳಿದ ಮಧ್ಯಪ್ರದೇಶದ ರಾಜ್ಯ ಮಾಹಿತಿ ಆಯುಕ್ತ ರಾಹುಲ್ ಸಿಂಗ್ ಅವರು, ಈ ಕಾಯ್ದೆಗೆ ಇಂತಹ ತಿದ್ದುಪಡಿ ತರಲು ಕಾರಣಗಳನ್ನು ಸರಕಾರವು ತೋರಿಸಬೇಕು ಮತ್ತು ಅವುಗಳನ್ನು ಸಮರ್ಥಿಸಿಕೊಳ್ಳಬೇಕು ಎಂದರು. RTI ಕಾಯ್ದೆಯಲ್ಲಿ ಅತ್ಯಂತ ಹೆಚ್ಚು ದುರುಪಯೋಗಗೊಂಡಿರುವ ಕಲಂ 8(1)(ಜೆ)ದಲ್ಲಿ ಬದಲಾವಣೆಗಳನ್ನು ಮಾಡಲು ತಿದ್ದುಪಡಿಯು ಬಯಸಿದೆ ಎಂದ ಅವರು, ತಾನು ಸೇವೆಯಲ್ಲಿದ್ದಾಗ ಮಾಹಿತಿಯನ್ನು ನಿರಾಕರಿಸಲು ಈ ನಿಬಂಧನೆಯ ಬಳಕೆಯಾಗಿದ್ದ ಹಲವಾರು ಮೇಲ್ಮನವಿಗಳ ಉದಾಹರಣೆಗಳನ್ನು ಉಲ್ಲೇಖಿಸಿದರು.

ಹಲವು ಪ್ರಕರಣಗಳಲ್ಲಿ ಕಾನೂನುಬಾಹಿರ ನಿರಾಕರಣೆಯಾಗಿದ್ದನ್ನು ಈಗ ಕಾನೂನುಬದ್ಧ ನಿರಾಕರಣೆಯನ್ನಾಗಿ ಮಾಡುವ ಆತಂಕವಿದೆ. ಈ ತಿದ್ದುಪಡಿಯಿಂದಾಗಿ ವ್ಯಕ್ತಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ನಿರಾಕರಿಸಬಹುದು ಎಂದು ಗಾಂಧಿ ನುಡಿದರು.

ದತ್ತಾಂಶ ಸಂರಕ್ಷಣೆ ಮಸೂದೆಯು ಹೇಗೆ RTI ಕಾಯ್ದೆಯ ನಿಬಂಧನೆಗಳನ್ನು ತುಳಿಯುತ್ತದೆ ಎನ್ನುವದರ ಕುರಿತು ಮಾತನಾಡಿದ ಇನ್ನೋರ್ವ ಮಾಜಿ ಕೇಂದ್ರೀಯ ಮಾಹಿತಿ ಅಯುಕ್ತ ಯಶೋವರ್ಧನ ಆಜಾದ್ ಅವರು, ‘ಗೋಪ್ಯತೆ ಮುಖ್ಯ ಎಂದು ನಾವೆಲ್ಲರೂ ನಂಬುತ್ತೇವೆ, ಆದರೆ ಮಾಹಿತಿ ಹಕ್ಕನ್ನು ವಿರೋಧಿಸಲು ಅದನ್ನು ಮುಂದೆ ಮಾಡುವುದು ದುರದೃಷ್ಟಕರವಾಗಿದೆ. ಜನರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾದ ಯಾವುದೇ ಕಾರ್ಯಕಾರಿ ಕ್ರಮ ಅಥವಾ ಕಾನೂನನ್ನು ತರುವಂತಿಲ್ಲ ಎಂದು ಸಂವಿಧಾನದ ವಿಧಿ 13 ಹೇಳುತ್ತದೆ. ಆದಾಗ್ಯೂ ಕಲಂ 8(1)(ಜೆ) ಅನ್ನು ತೆಗೆದುಹಾಕಲು ನಾವಿಂದು ಪ್ರಯತ್ನಿಸಿದರೆ ಮತ್ತು ಗೋಪ್ಯತೆಯ ಉಲ್ಲಂಘನೆಯಾಗುತ್ತದೆ ಎಂಬ ನೆಪವೊಡ್ಡಿ ಮಾಹಿತಿಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿದರೆ ಅದು ಜನರ ಮಾಹಿತಿ ಹಕ್ಕಿನ ಮೇಲೆ ನೇರ ಪರಿಣಾಮ ಬೀರುತ್ತದೆ’ ಎಂದರು.

ದತ್ತಾಂಶ ಸಂರಕ್ಷಣೆ ಮಸೂದೆಯಲ್ಲಿ ನಾಲ್ಕು ನಿಬಂಧನೆಗಳಿದ್ದು, ಅವು ಅನಗತ್ಯ ಮಾತ್ರವಲ್ಲ, RTI ಕಾಯ್ದೆಗೆ ಹೊಡೆತವನ್ನೂ ನೀಡುತ್ತವೆ ಎಂದು ಮಧ್ಯಪ್ರದೇಶದ ಮಾಜಿ ರಾಜ್ಯ ಮಾಹಿತಿ ಆಯುಕ್ತ ಆತ್ಮದೀಪ ಹೇಳಿದರು.

ಆರ್ಟಿಐ ಕಾಯ್ದೆಯ ಮೇಲೆ ದತ್ತಾಂಶ ಸಂರಕ್ಷಣೆ ಮಸೂದೆಯ ಪರಿಣಾಮವನ್ನು ಉಲ್ಲೇಖಿಸಿದ ಮಹಾರಾಷ್ಟ್ರದ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ಮಾಹಿತಿ ಆಯುಕ್ತ ರತ್ನಾಕರ ಗಾಯಕವಾಡ್ ಅವರು, ಜನರ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯುವ ನ್ಯಾಯಾಂಗ ಅಥವಾ ರಾಜಕೀಯ ಇಚ್ಛಾಶಕ್ತಿಯಿಲ್ಲ,ಇವೆಲ್ಲವೂ ಭ್ರಷ್ಟಾಚಾರವನ್ನು ಬೆಂಬಲಿಸುತ್ತವೆ. ಕಾಯ್ದೆಯಲ್ಲಿ ಪ್ರತಿಕೂಲ ಬದಲಾವಣೆಗಳಾಗದಂತೆ ನೋಡಿಕೊಳ್ಳುವಲ್ಲಿ ನಾಗರಿಕ ಸಮಾಜ ಸಂಸ್ಥೆಗಳು ಮಹತ್ವದ ಪಾತ್ರವನ್ನು ವಹಿಸಬೇಕಿದೆ ಎಂದು ಹೇಳಿದ್ದಾರೆಂದು thewire.in ವರದಿ ಮಾಡಿದೆ.

ಇದನ್ನೂ ಓದಿ: ಗ್ರಾಹಕರು ಎಂದೂ ಬಯಸಿರದ ಸರಕಾರದ ವಿಮಾ ಯೋಜನೆಗೆ ಶುಲ್ಕ ವಿಧಿಸುತ್ತಿರುವ ಬ್ಯಾಂಕುಗಳು: ವರದಿ

Similar News