ಫಿಫಾ ವಿಶ್ವಕಪ್: ಮೊರಾಕ್ಕೊ ತಂಡವನ್ನು2-0 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದ ಫ್ರಾನ್ಸ್

Update: 2022-12-15 02:17 GMT

ಹೊಸದಿಲ್ಲಿ: ಫಿಫಾ ವಿಶ್ವಕಪ್ ಫೈನಲ್ ತಲುಪುವ ಮೊರಾಕ್ಕೊ ಕನಸನ್ನು ನುಚ್ಚು ನೂರು ಮಾಡಿದ ಫ್ರಾನ್ಸ್ ಪ್ರಶಸ್ತಿಗಾಗಿ ಲಿಯೊನಾಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಜತೆ ಹೋರಾಟಕ್ಕೆ ಅರ್ಹತೆ ಪಡೆದಿದೆ.

ಅಲ್ ಬೈತ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊರಾಕ್ಕೊ ತಂಡವನ್ನು 2-0 ಅಂತರದಿಂದ ಸೋಲಿಸಿದ ಹಾಲಿ ಚಾಂಪಿಯನ್ನರು ರವಿವಾರದ ಪ್ರಶಸ್ತಿ ಸುತ್ತಿನ ಕದನಕ್ಕೆ ಸಜ್ಜಾದರು.

2002ರ ಬಳಿಕ ಫೈನಲ್ ತಲುಪಿದ ಹಾಲಿ ಚಾಂಪಿಯನ್ ಎಂಬ ಹೆಗ್ಗಳಿಕೆಗೂ ಫ್ರಾನ್ಸ್ ಪಾತ್ರವಾಯಿತು. ಫ್ರಾನ್ಸ್ ಇನ್ನೊಂದು ದಾಖಲೆಯ ಮೇಲೆ ಕಣ್ಣಿಟ್ಟಿದ್ದು, ಸತತ ಎರಡು ವಿಶ್ವಕಪ್‍ಗಳಲ್ಲಿ ಪ್ರಶಸ್ತಿ ಗೆದ್ದ ಮೂರನೇ ತಂಡ ಎನಿಸಿಕೊಳ್ಳುವ ಕನಸು ಕಾಣುತ್ತಿದೆ. ಇದಕ್ಕೂ ಮುನ್ನ ಬ್ರೆಝಿಲ್ (1962 ಮತ್ತು ಇಟೆಲಿ (1938) ಈ ಸಾಧನೆ ಮಾಡಿದ್ದವು.

ಫ್ರಾನ್ಸ್‌ನ ಫುಲ್ ಬ್ಯಾಕ್ ಆಟಗಾರ ಥಿಯೊ ಹೆರ್ನಾಂಡಿಸ್ ಅವರು ಸನಿಹದಿಂದ ಗಳಿಸಿದ ಗೋಲಿನ ಮೂಲಕ ಐದನೇ ನಿಮಿಷದಲ್ಲೇ ಮುನ್ನಡೆ ಪಡೆದ ಚಾಂಪಿಯನ್ನರು 79ನೇ ನಿಮಿಷದಲ್ಲಿ ಮತ್ತೊಂದು ಗೋಲು ಸಿಡಿಸುವ ಮೂಲಕ ಗೆಲುವಿನ ಅಂತರ ಹೆಚ್ಚಿಸಿಕೊಂಡರು. ಮೊರಾಕ್ಕೊ ಉತ್ತಮ ಪ್ರದರ್ಶನ ನೀಡಿ ಶೇಕಡ 60ಕ್ಕಿಂತ ಹೆಚ್ಚಿನ ಅವಧಿಯಲ್ಲಿ ಚೆಂಡಿನ ಸ್ವಾಧೀನ ಹೊಂದಿದ್ದರೂ, ಫ್ರಾನ್ಸ್‌ನ ಬದಲಿ ಆಟಗಾರ ರಂಡಾಲ್ ಕೊಲೊ ಮುವಾನಿ 79ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಮೊರಾಕ್ಕೊ ಉತ್ಸಾಹಕ್ಕೆ ತಣ್ಣೀರೆರಚಿದರು.

ಶನಿವಾರ ನಡೆಯುವ ಪ್ಲೇಆಫ್ ಪಂದ್ಯದಲ್ಲಿ ಮೊರಾಕ್ಕೊ ತಂಡ ಕಳೆದ ಬಾರಿಯ ರನ್ನರ್ಸ್ ಅಪ್ ಕ್ರೊವೇಶಿಯಾ ವಿರುದ್ಧ ಮೂರನೇ ಸ್ಥಾನಕ್ಕಾಗಿ ಸೆಣೆಸಲಿದೆ.

Similar News