×
Ad

ಮಂಗಳೂರು: ಡಿ.17ರಂದು ತರಗತಿ ಬಹಿಷ್ಕರಿಸಿ ಎನ್‌ಎಸ್‌ಯುಐ ಪ್ರತಿಭಟನೆ

Update: 2022-12-15 20:09 IST

ಮಂಗಳೂರು, ಡಿ.15: ವಿದ್ಯಾರ್ಥಿಗಳಿಗೆ ಸಿಗಬೇಕಾದ ವಿದ್ಯಾರ್ಥಿ ವೇತನಗಳನ್ನು ಸ್ಥಗಿತಗೊಳಿಸಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಎನ್‌ಎಸ್‌ಯುಐ ರಾಜ್ಯ ಮಟ್ಟದಲ್ಲಿ ಕಾಲೇಜು ಬಂದ್‌ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಡಿ.17ರಂದು ಮಂಗಳೂರಿನ ಎಂ.ಜಿ. ರಸ್ತೆಯಲ್ಲಿ ಪ್ರತಿಭಟನೆ ಆಯೋಜಿಸಿದೆ.

ಮಂಗಳೂರು ವಿವಿ ಒಂದು ವರ್ಷದಿಂದ ಫಲಿತಾಂಶ ಪ್ರಕಟಿಸಿಲ್ಲ. ಇದರಿಂದ ಉನ್ನತ ವ್ಯಾಸಾಂಗಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಗೊಂದಲ ಬಗೆ ಹರಿಯುವ ಮುನ್ನವೇ ಎನ್‌ಇಪಿ ಜಾರಿಗೊಳಿಸಲಾಗುತ್ತಿದೆ. ಉಡುಪಿ - ಮಂಗಳೂರು ಖಾಸಗಿ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಯಾಣ ದರ ಕಡಿಮೆ ಮಾಡಬೇಕು ಮೊದಲಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಲೇಜು ಬಂದ್‌ಗೆ ಕರೆ ನೀಡಲಾಗಿದೆ ಎಂದು ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಗುರುವಾರ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು. ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು. ಸಮರ್ಪಕವಾಗಿ ‘ಅರಿವು ಸಾಲ’ ಕಲ್ಪಿಸಬೇಕು. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಥಗಿತ ಗೊಂಡಿದೆ. ಅಂಗನವಾಡಿಗಳಿಗೆ ಮೊಟ್ಟೆ ಬದಲು ಚಿಕ್ಕಿ ಮತ್ತು ಬಾಳೆಹಣ್ಣು ವಿತರಿಸಲಾಗುತ್ತಿದೆ ಈ ಎಲ್ಲ ಅವ್ಯವಸ್ಥೆ ಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರವನ್ನು ಎಚ್ಚರಿಸಲಾಗುವುದು. ಎಸ್‌ಎಫ್‌ಐ, ವಿದ್ಯಾರ್ಥಿ ಜನತಾದಳ, ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಬೆಂಬಲ ಸೂಚಿಸಿವೆ ಎಂದವರು ಹೇಳಿದರು.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದ್ದು, ರಸ್ತೆ ತಡೆ ನಡೆಸಿ, ಶಿಕ್ಷಣ ಸಚಿವ ಪ್ರತಿಕೃತಿ ದಹನ ಮಾಡಲಾಗುವುದು. ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರ ತಕ್ಷಣ ಎಚ್ಚೆತ್ತು ಈ ಹಿಂದೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದವರು ಆಗ್ರಹಿಸಿದರು.

ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್, ಪದಾಧಿಕಾರಿಗಳಾದ ಸಿರಾಜ್ ಕುದ್ರು, ಸೋಹನ್ ಸಿರಿ, ನಜೀಬ್, ಸಾಹಿಲ್, ಸಫ್ವಾನ್, ಶ್ರುಜನ್, ಅಫ್ತಾಬ್ ಮೊದಲಾದವರಿದ್ದರು.

Similar News