ಶಿರಾಡಿ ಗ್ರಾಮದಲ್ಲಿ ಕಾಡಾನೆ: ಜನರಲ್ಲಿ ಆತಂಕ

Update: 2022-12-15 16:35 GMT

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಕಾಡಾನೆಯೊಂದು ಹಾಡಹಗಲೇ ನಾಡಿಗೆ ಬಂದು  ಜನರಲ್ಲಿ ಭೀತಿ ಮೂಡಿಸಿದ ಘಟನೆ ನಡೆದಿದೆ.

ಅಡ್ಡಹೊಳೆಯ ಪೆಟ್ರೋಲ್ ಪಂಪಿನ ಬಳಿ ಕಾಡಿನಿಂದ ಹೆದ್ದಾರಿಗೆ ಬಂದ ಈ ಕಾಡಾನೆ ಹೆದ್ದಾರಿಯನ್ನು  ದಾಟಲೆತ್ನಿಸಿದಾಗ ಹೆದ್ದಾರಿ ಅಗಲೀಕರಣ ಕಾರಣಕ್ಕೆ ಅಗೆಯಲ್ಪಟ್ಟ ಮಣ್ಣಿನಲ್ಲಿ ಹೂತು ಹೋಗಿ ಸಂಕಷ್ಠಕ್ಕೀಡಾಯಿತು. ಬಳಿಕ ಮೇಲೆದ್ದು ಸಾಗಿದ ಈ ಆನೆಯು ಅಯ್ಯಪ್ಪ ದೇವಾಲಯದ ಬಳಿಯಿಂದ  ಪೇರಮಜಲು  ರಸ್ತೆಯಲ್ಲಿ ಜನವಸತಿ ಪ್ರದೇಶದಿಂದ ಸಾಗಿ ಕಾಡು ಸೇರಿಕೊಂಡಿದೆ.

ಆನೆಯು ಸಾಗುವ ಪಥದಲ್ಲಿ ಜನರೇನಾದರೂ ಆನೆಯ ಆಕ್ರಮಣಕ್ಕೆ ತುತ್ತಾಗುವ  ಭೀತಿಯಿಂದ ಗ್ರಾಮಸ್ಥರು  ಬೊಬ್ಬೆ ಹೊಡೆದು ಆನೆಯ ಹಿಂದೆಯೇ ಓಡೋಡಿಕೊಂಡು  ನಿವಾಸಿಗರನ್ನು ಎಚ್ಚರಿಸುತ್ತಿದ್ದರು. ರಾತ್ರಿ ವೇಳೆ ಈ ಪ್ರದೇಶದಲ್ಲಿ ಗೋಚರಿಸುವ  ಕಾಡಾನೆಗಳು ಹಾಡಹಗಲೇ  ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನತೆ ಭಯಭೀತರಾದರು.  ಆದರೆ ಕಾಣಿಸಿಕೊಂಡ ಆನೆಯು ಜನರಿಗಾಗಲಿ ಕೃಷಿ ಬೆಳೆಗಾಗಲಿ ಯಾವುದೇ ಹಾನಿ ಮಾಡದೇ ಜನರ ಬೊಬ್ಬೆಯ ನಡುವೆ ಕಾಡು ಸೇರಿಕೊಂಡಿತು.

Similar News