ಮೊದಲ ಟೆಸ್ಟ್: ಲಿಟನ್ ದಾಸ್ ರೊಂದಿಗಿನ ಘರ್ಷಣೆಯ ಬಳಿಕ ಸೇಡು ತೀರಿಸಿಕೊಂಡ ಸಿರಾಜ್

Update: 2022-12-16 05:53 GMT

ಢಾಕಾ, ಡಿ.16: ಭಾರತ ಹಾಗೂ ಬಾಂಗ್ಲಾದೇಶದ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನವಾದ ಗುರುವಾರ ಕೆಲವು ನಿಂದಿಸುವ (ಸ್ಲೆಜಿಂಗ್) ಘಟನೆಗಳು ನಡೆದಿವೆ. ಮುಹಮ್ಮದ್ ಸಿರಾಜ್ ಹಾಗೂ ಬಾಂಗ್ಲಾದೇಶದ ಬ್ಯಾಟರ್ ಲಿಟನ್ ದಾಸ್ ಒಳಗೊಂಡ ಘಟನೆಯು ಹೆಚ್ಚು ಗಮನ ಸೆಳೆಯಿತು.

ಬಾಂಗ್ಲಾದೇಶದ ಇನಿಂಗ್ಸ್ ನ 14ನೇ ಓವರ್ ನಲ್ಲಿ ಈ ಘಟನೆ ನಡೆದಿದೆ.

ಲಿಟನ್ ದಾಸ್ 24 ರನ್ ಗಳಿಸಿ ಆಡುತ್ತಿದ್ದರು. ಸಿರಾಜ್ 14ನೇ ಓವರ್ ನ ಮೊದಲ ಎಸೆತ ಬೌಲಿಂಗ್ ಮಾಡಿದ ನಂತರ ಲಿಟನ್ ದಾಸ್ ರತ್ತ ತೆರಳಿ ಏನೋ  ಹೇಳಿದರು. ಸಿರಾಜ್ ಅವರ ಸ್ಲೆಜಿಂಗ್ ಗೆ ಪ್ರತಿಕ್ರಿಯೆಯಾಗಿ ನನಗೆ ಏನೂ ಕೇಳಿಸಲಿಲ್ಲ ಎಂದು ಸನ್ನೆ ಮಾಡುತ್ತಾ ಭಾರತದ ವೇಗದ ಬೌಲರ್ ಸಿರಾಜ್ ಬಳಿ ಲಿಟನ್ ದಾಸ್ ಘರ್ಷಣೆಗೆ ಮುಂದಾದರು. ಆಗ ಅಂಪೈರ್ ಮಧ್ಯ ಪ್ರವೇಶಿಸಿ ಸಿರಾಜ್ ರನ್ನು ದೂರ ಕಳುಹಿಸಿದರು.

ಮುಂದಿನ ಎಸೆತದಲ್ಲೇ ಸಿರಾಜ್ ಅವರು ಲಿಟನ್ ದಾಸ್ ರನ್ನುಕ್ಲೀನ್ ಬೌಲ್ಡ್ ಮಾಡಿ ಸೇಡು ತೀರಿಸಿಕೊಂಡರು. ವಿಕೆಟ್ ಪಡೆದ ಬಳಿಕ  ಸಿರಾಜ್ ಸಂಭ್ರಮಪಟ್ಟರು. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಲಿಟನ್ ದಾಸ್ ಮಾಡಿದಂತೆ ಕಿವಿ ಹತ್ತಿರ  ಕೈ ಇಟ್ಟು ನಟಿಸಿದರು. ಸಿರಾಜ್ ಅದನ್ನು ನೋಡಿ ನಕ್ಕರು.

2ನೇ ದಿನದಾಟದಂತ್ಯಕ್ಕೆ ಭಾರತದ ಮೊದಲ  ಇನಿಂಗ್ಸ್ 404 ರನ್ ಗೆ ಉತ್ತರವಾಗಿ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು. ಸ್ಪಿನ್ನರ್ ಕುಲದೀಪ್ ಯಾದವ್ 33 ರನ್ ಗೆ 4 ವಿಕೆಟ್ ಗಳನ್ನು ಪಡೆದರೆ, ಸಿರಾಜ್ 14 ರನ್ ನೀಡಿ 3 ವಿಕೆಟ್ ಗಳನ್ನು ಉರುಳಿಸಿದರು.

  

Similar News