ಬಡವರಿಗೆ ಕೈಗೆಟುಕದ ಆರೋಗ್ಯ ಸೇವೆ

Update: 2022-12-16 06:22 GMT

ಭಾರತದಲ್ಲಿ ಸ್ವಾತಂತ್ರ್ಯ ಬಂದ ಬಳಿಕವೂ ಅನೇಕ ವರ್ಷಗಳವರೆಗೂ ಆರೋಗ್ಯ ವ್ಯವಸ್ಥೆ ಸರಕಾರದ ಪ್ರಧಾನ ಆದ್ಯತೆಗಳ ಪಟ್ಟಿಯಲ್ಲಿ ಇರಲಿಲ್ಲ ಎಂಬುದು ಆಶ್ಚರ್ಯಕರವಾದರೂ ಸತ್ಯವಾದ ವಿಚಾರ. 80ರ ದಶಕದವರೆಗೂ ರಾಷ್ಟ್ರೀಯ ಆರೋಗ್ಯ ನೀತಿಗೆ ಭಾರತೀಯ ಸಂಸತ್ತಿನಲ್ಲಿ ಬೆಂಬಲ ಸಿಕ್ಕಿರಲಿಲ್ಲ. ಆನಂತರ ಕೂಡ ಆರೋಗ್ಯ ರಂಗಕ್ಕೆ ನಿಗದಿಯಾದ ಆರ್ಥಿಕ ಪಾಲು ಹೇಳಿಕೊಳ್ಳುವಷ್ಟೇನೂ ಸಿಗುತ್ತಿಲ್ಲ. ಸಂವಿಧಾನದ ಅಡಿಯಲ್ಲಿ ಆರೋಗ್ಯ ವ್ಯವಸ್ಥೆಯು ರಾಜ್ಯ ವಿಷಯವಾಗಿದೆ. ಆದರೆ ಹೆಚ್ಚಿನ ರಾಜ್ಯಗಳು ಭಾರತ ಸರಕಾರವು ನೀಡುವ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತವೆ. ರಾಷ್ಟ್ರೀಯ ಆರೋಗ್ಯ ನೀತಿಯ ಪ್ರಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕು.

ಎಲ್ಲಾ ನಾಗರಿಕರಿಗೆ ಆರೋಗ್ಯ ರಕ್ಷಣೆ ಸಿಗಬೇಕಾಗಿರುವುದು ಆರೋಗ್ಯವಂತ ಸಮಾಜದ ಲಕ್ಷಣ. ಎಲ್ಲರಿಗೂ ಕೈಗೆಟುಕುವ ದರ ಮತ್ತು ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆಯೇ ಎಂಬುದು ಇಂದಿಗೂ ಚರ್ಚಾಸ್ಪದವಾದ ವಿಷಯವಾಗಿಯೇ ಉಳಿದಿದೆ. ವ್ಯಕ್ತಿಯೊಬ್ಬನ ಆರ್ಥಿಕ ಸ್ಥಿತಿ-ಗತಿ, ಪ್ರಾದೇಶಿಕತೆ, ಲಿಂಗ ಅಥವಾ ಸಾಮಾಜಿಕ ಸ್ಥಿತಿ ಸೇರಿದಂತೆ ಹಲವು ಅಂಶಗಳು ಗುಣಮಟ್ಟದ ಆರೋಗ್ಯ ಸೇವೆಗಳು ದೊರೆಯುವುದನ್ನು ನಿರ್ಧರಿಸುತ್ತವೆ. ದೇಶದಾದ್ಯಂತ ಸಾರ್ವತ್ರಿಕ ಆರೋಗ್ಯ ರಕ್ಷಕ ಸೇವೆಗಳು ಒಂದೇ ರೀತಿಯಲ್ಲಿ ಸಿಗುತ್ತಿಲ್ಲ. ಶೋಷಿತರು, ಬಡವರು, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳು, ಮಹಿಳೆಯರು, ಮಕ್ಕಳು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಜನ, ಆದಿವಾಸಿಗಳು, ಬುಡಕಟ್ಟು ಜನರು ನೆಮ್ಮದಿಯ ಆರೋಗ್ಯ ಸೇವೆಗಳನ್ನು ಪಡೆಯುವಲ್ಲಿ ಇಂದಿಗೂ ವಿಫಲರಾಗಿದ್ದಾರೆ. ಮುಖ್ಯವಾಗಿ ಭಾರತದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಆರೋಗ್ಯ ವ್ಯವಸ್ಥೆಯು ಕೈಗೆಟಕುವಲ್ಲಿ ಅಜಗಜಾಂತರ ವ್ಯತ್ಯಾಸಗಳಿವೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿ ನೋಡಿದರೆ ನಗರ ಪ್ರದೇಶದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ಲಭ್ಯವಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು ವೈದ್ಯರು, ಮೂರು ಪಟ್ಟು ಹೆಚ್ಚು ದಾದಿಯರೂ ನಗರ ಪ್ರದೇಶದಲ್ಲಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ಮೂಲಗಳ ಪ್ರಕಾರ ಭಾರತದಲ್ಲಿ ಶೇ.80ರಷ್ಟು ವೈದ್ಯರು, ಶೇ.25ರಷ್ಟು ದಾದಿಯರು, ಶೇ.45ರಷ್ಟು ಹಾಸಿಗೆಗಳು ಮತ್ತು ಶೇ.75ರಷ್ಟು ತುರ್ತುಚಿಕಿತ್ಸೆ ಮತ್ತು ವಾಹನ ಸೌಲಭ್ಯಗಳ ಲಭ್ಯತೆ ಇರುವುದು ಖಾಸಗಿ ಆರೋಗ್ಯ ವ್ಯವಸ್ಥೆಯಲ್ಲಿ ಮಾತ್ರ. ಪರಿಸ್ಥಿತಿ ಹೀಗಿರುವುದರಿಂದ ಶೇ.70ರಷ್ಟು ರೋಗಿಗಳು ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದು ಖಾಸಗಿ ಆಸ್ಪತ್ರೆಗಳಲ್ಲಿಯೇ. ಆದರೆ ಭಾರತದಲ್ಲಿ ನಗರ ಜನಸಂಖ್ಯೆ ಶೇ.30ರಷ್ಟಿದ್ದರೆ ಗ್ರಾಮೀಣ ಜನಸಂಖ್ಯೆ ಶೇ.70ರಷ್ಟಿದೆ. ಆರೋಗ್ಯ ಸೇವೆಗಳನ್ನು ಎಲ್ಲರಿಗೂ ಉಚಿತವಾಗಿ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಒದಗಿಸಲು ಸರಕಾರ ಸ್ಥಾಪಿಸಿರುವ ವ್ಯವಸ್ಥೆಯನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎನ್ನಲಾಗುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಒದಗಿಸುವುದು ಅಷ್ಟು ಸುಲಭದ ವಿಷಯವಲ್ಲ ಎಂಬುದು ನಿಜ, ಆದಕ್ಕಾಗಿಯೇ ಇತ್ತೀಚೆಗೆ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಆರೋಗ್ಯ ಸೇವೆ ಒದಗಿಸಲು ಯೋಜನಾ ಆಯೋಗ ಸಲಹೆ ಮಾಡಿದೆ. ಆದರೆ ಇದುವರೆಗೂ ಈ ನಿಟ್ಟಿನಲ್ಲಿ ಯಾವುದೇ ಹೇಳಿಕೊಳ್ಳುವಷ್ಟು ಪ್ರಗತಿಯಾಗಿಲ್ಲ. ಇಂದಿಗೂ ಭಾರತದಲ್ಲಿ ಶೇ.60ಕ್ಕಿಂತ ಹೆಚ್ಚು ಗ್ರಾಮಗಳಿಗೆ ಸೂಕ್ತ ವೈದ್ಯಕೀಯ ಸೇವೆಗಳ ಲಭ್ಯತೆಯೇ ಇಲ್ಲದಂತಹ ವಾತಾವರಣವಿದೆ. ಒಂದು ಕಡೆ ನಗರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಅಣಬೆಗಳಂತೆ ಏಳುತ್ತಿವೆ. ನಗರ ಆರೋಗ್ಯ ಘಟಕಗಳು, ಹೆರಿಗೆ ಆಸ್ಪತ್ರೆಗಳು ಹೆಚ್ಚಾಗುತ್ತಾ ಹೋಗುತ್ತಿದ್ದರೆ ಗ್ರಾಮೀಣ ಪ್ರದೇಶಗಳಲ್ಲಿ ಜನರು ಸ್ವಚ್ಛ ಕುಡಿಯುವ ನೀರು, ಪೌಷ್ಟಿಕ ಆಹಾರ, ಶೌಚಾಲಯ ವ್ಯವಸ್ಥೆಯಿಲ್ಲದೆ ತೆರೆದ ಪ್ರದೇಶಗಳಲ್ಲಿ ಬಹಿರ್ದೆಸೆಗಾಗಿ ಹೋಗುವುದು ಮುಂದುವರಿದಿದೆ.

ಜನಸಂಖ್ಯೆಯ ವಿಷಯ ಒಂದರಿಂದಲೇ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಒದಗಿಸಲಾರದೆ ಹೋದರೆ ಅಥವಾ ವಿಫಲವಾದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಕ ರೋಗ ನಿರ್ಣಯ ಮತ್ತು ಚಿಕಿತ್ಸೆ ಸರಿಯಾಗಿ ದೊರೆಯುತ್ತಿಲ್ಲ. ಭಾರತದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿರುವ ಆಯುಷ್ಮಾನ್ ಭಾರತದಡಿಯ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ಒಂದು ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳ ಆಸ್ಪತ್ರೆ ವೆಚ್ಚವನ್ನು ಸರಕಾರ ಭರಿಸುತ್ತದೆ. ಇದು ಸ್ವಲ್ಪ ಮಟ್ಟಿಗಾದರೂ ಬಡವರ ಆರೋಗ್ಯ ರಕ್ಷಣೆಯಲ್ಲಿ ಸಹಕಾರಿಯಾಗಬಹುದು.

ಇಲ್ಲಿ ಪ್ರಸ್ತಾಪಿಸಲೇಬೇಕಾದ ಮುಖ್ಯವಾದ ವಿಷಯವೆಂದರೆ ಭಾರತದಲ್ಲಿ ಸ್ವಾತಂತ್ರ್ಯ ಬಂದ ಬಳಿಕವೂ ಅನೇಕ ವರ್ಷಗಳವರೆಗೂ ಆರೋಗ್ಯ ವ್ಯವಸ್ಥೆ ಸರಕಾರದ ಪ್ರಧಾನ ಆದ್ಯತೆಗಳ ಪಟ್ಟಿಯಲ್ಲಿ ಇರಲಿಲ್ಲ ಎಂಬುದು ಆಶ್ಚರ್ಯಕರವಾದರೂ ಸತ್ಯವಾದ ವಿಚಾರ. 80ರ ದಶಕದವರೆಗೂ ರಾಷ್ಟ್ರೀಯ ಆರೋಗ್ಯ ನೀತಿಗೆ ಭಾರತೀಯ ಸಂಸತ್ತಿನಲ್ಲಿ ಬೆಂಬಲ ಸಿಕ್ಕಿರಲಿಲ್ಲ. ಆನಂತರ ಕೂಡ ಆರೋಗ್ಯ ರಂಗಕ್ಕೆ ನಿಗದಿಯಾದ ಆರ್ಥಿಕ ಪಾಲು ಹೇಳಿಕೊಳ್ಳುವಷ್ಟೇನೂ ಸಿಗುತ್ತಿಲ್ಲ. ಸಂವಿಧಾನದ ಅಡಿಯಲ್ಲಿ ಆರೋಗ್ಯ ವ್ಯವಸ್ಥೆಯು ರಾಜ್ಯ ವಿಷಯವಾಗಿದೆ. ಆದರೆ ಹೆಚ್ಚಿನ ರಾಜ್ಯಗಳು ಭಾರತ ಸರಕಾರವು ನೀಡುವ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತವೆ. ರಾಷ್ಟ್ರೀಯ ಆರೋಗ್ಯ ನೀತಿಯ ಪ್ರಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕು. ಕಾಯಿಲೆಗಳು ಬರುವಾಗ ಬಡವ, ಶ್ರೀಮಂತ, ನಗರ, ಹಳ್ಳಿ ಇವ್ಯಾವುಗಳನ್ನು ನೋಡಿ ಬರುವುದಿಲ್ಲ. ಆದರೆ ದುಬಾರಿ ಔಷಧಗಳನ್ನು ಕೊಳ್ಳಲು, ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಪಡೆಯಲು ತಗಲುವ ವೆಚ್ಚವನ್ನು ಬರಿಸಲು ಆಗದೆ ಕುಟುಂಬದ ಸದಸ್ಯರನ್ನೋ, ನೆರೆಹೊರೆಯವರನ್ನೋ ಕಳೆದುಕೊಂಡ ಉದಾಹರಣೆಗಳಿಗೇನೂ ಕಡಿಮೆಯಿಲ್ಲ. ಜೀವ ರಕ್ಷಕ ಔಷಧಿಗಳನ್ನು ಕೊಳ್ಳುವಷ್ಟು ಶಕ್ತಿಯೂ ಕೂಡ ಬಡವರ್ಗದ ಜನರಲ್ಲಿ ಇಲ್ಲ. ಈ ನಿಟ್ಟಿನಲ್ಲಿ ಭಾರತ ಸರಕಾರ ಆರಂಭಿಸಿದ ಜನೌಷಧ ಕೇಂದ್ರಗಳು ಬಡವರು ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ಅನುಕೂಲಕಾರಿಯಾಗಿವೆ. ಆದರೆ ನಗರ ಪ್ರದೇಶಗಳಲ್ಲಿ ಆರಂಭಿಸಿದಷ್ಟು ಪ್ರಮಾಣದಲ್ಲಿ ಜನೌಷಧ ಕೇಂದ್ರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ತೆರೆಯಲಾಗಿಲ್ಲ. ಜನೌಷಧ ಕೇಂದ್ರಗಳು ಹೋಬಳಿ ಕೇಂದ್ರಗಳಲ್ಲೂ ಆರಂಭವಾಗಬೇಕಿದೆ. ಆಗ ಈ ವ್ಯವಸ್ಥೆಯ ಲಾಭ ದೇಶದ ಶೇ.70ರಷ್ಟು ಸಂಖ್ಯೆಯಲ್ಲಿರುವ ಗ್ರಾಮೀಣ ಪ್ರದೇಶದ ಜನರಿಗೆ ದೊರಯಲಿದೆ.

ತೀವ್ರ ಸ್ವರೂಪದ ಮತ್ತು ಹೆಚ್ಚು ವೆಚ್ಚ ಮಾಡಿ ಚಿಕಿತ್ಸೆ ಪಡೆಯಬೇಕಾದ ಕಾಯಿಲೆಗಳು ಬಂದಾಗ ಬಡವರು ಮತ್ತು ಗ್ರಾಮೀಣ ಪ್ರದೇಶದ ಜನ ತತ್ತರಿಸಿ ಹೋಗುವುದು ಸಾಮಾನ್ಯವಾದ ವಿಷಯವಾಗಿದೆ. ಇಂತಹ ಚಿಕಿತ್ಸೆಗಳಿಗೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡಲಾಗುತ್ತದೆ. ಆದರೆ ಹೆಚ್ಚಿನವರು ಇದರ ಪ್ರಯೋಜನ ಪಡೆಯುತ್ತಿಲ್ಲ ಇದಕ್ಕೆ ಈ ಕುರಿತಾದ ಮಾಹಿತಿಯ ಕೊರತೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಕೂಡ ಆಗಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಘಟಕಗಳಿಗೆ ನೇಮಕಗೊಂಡಿರುವ ಅಥವಾ ನಿಯೋಜನೆಗೊಂಡಿರುವ ಸಿಬ್ಬಂದಿ ಗೈರು ಹಾಜರಾಗುವುದು ಸಾಮಾನ್ಯ ಸಂಗತಿಯಾಗಿದೆ. ಹೆರಿಗೆ ಮತ್ತು ಇತರ ತೀವ್ರತರವಾದ ಸಂದರ್ಭಗಳಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳ ಕೊರತೆಯ ಕಾರಣದಿಂದಾಗಿ ವೈದ್ಯರು ವಿಧಿಯಿಲ್ಲದೆ ದೂರದ ತಾಲೂಕು ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆಗಳಿಗೆ ತೆರಳುವಂತೆ ಸೂಚಿಸುತ್ತಾರೆ. ಇನ್ನೂ ಕೆಲವು ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸುತ್ತಿದ್ದಾರೆ. ಇದರಿಂದಾಗಿ ಚಿಕಿತ್ಸೆ ಮತ್ತು ಪರೀಕ್ಷೆಗಳ ನೆಪದಲ್ಲಿ ಅನಗತ್ಯವಾದ ಹಲವು ಪರೀಕ್ಷೆಗಳನ್ನು ಮಾಡಿಸುವಂತೆ ಕೆಲವು ವೈದ್ಯರು ಸೂಚಿಸುತ್ತಿದ್ದಾರೆ. ಈ ಪರೀಕ್ಷೆಗಳಿಗೆ ತಗಲುವ ವೆಚ್ಚ ಅಧಿಕವಾಗಿದ್ದು ಬಡ ಜನರು ಶೋಷಣೆಗೆ ಒಳಗಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಹಲವು ಕುಟುಂಬಗಳು ತಮ್ಮ ಕುಟುಂಬ ಸದಸ್ಯರು ತೀವ್ರತರವಾದ ಕಾಯಿಲೆಗಳಿಗೆ ಒಳಗಾದಾಗ ಚಿಕಿತ್ಸೆ ಕೊಡಿಸಿ ತಮ್ಮವರನ್ನು ಉಳಿಸಿಕೊಳ್ಳಲು ತಮ್ಮಲ್ಲಿದ್ದ ಅಲ್ಪಸ್ವಲ್ಪಜಮೀನನ್ನೂ ಮಾರಾಟ ಮಾಡುತ್ತಿರುವ ಘಟನೆಗಳಿಗೇನೂ ಕಡಿಮೆಯಿಲ್ಲ.

ನಗರಗಳಲ್ಲಿ ಸೂಪರ್ ಸ್ಪೆಷಾಲಿಟಿ ಹೆಸರಿನಲ್ಲಿರುವ ಖಾಸಗಿ ಆಸ್ಪತ್ರೆಗಳು ಜನರನ್ನು ಸುಲಿಗೆ ಮಾಡುತ್ತಿವೆ. ಸಂಪೂರ್ಣ ರಕ್ತ ಪರೀಕ್ಷೆ(ಸಿಬಿಸಿ)ಗೆ ಸಾಮಾನ್ಯವಾಗಿ ನಗರ ಪ್ರದೇಶಗಳ ಖಾಸಗಿ ರಕ್ತ ಪರೀಕ್ಷಾ ಕೇಂದ್ರಗಳಲ್ಲಿ 300ರಿಂದ 350 ರೂಪಾಯಿಗಳನ್ನು ತೆಗೆದುಕೊಂಡರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 850 ರೂಪಾಯಿಗಳಿಂದ 900 ರೂಪಾಯಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಏಕರೂಪದ ದರ ನಿಗದಿ ಮಾಡುವಲ್ಲಿ ಇನ್ನೂ ಸಫಲವಾಗಿಲ್ಲ. ಒಂದೇ ಚಿಕಿತ್ಸೆಗೆ ವಿವಿಧ ರೀತಿಯ ದರವಿರುವುದನ್ನು ಕಾಣಬಹುದು. ಸ್ವತಃ ನನ್ನ ಪತ್ನಿ ಕಳೆದ ಐದು ತಿಂಗಳುಗಳಿಂದ ಅಪ್ಲಾಸ್ಟಿಕ್ ಅನಿಮಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು ಮೈಸೂರು, ಬೆಂಗಳೂರು ಮತ್ತು ನೆರೆಯ ತಮಿಳುನಾಡಿನ ವೇಲೂರಿನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಮೊದಲ ಬಾರಿಗೆ ಅಪ್ಲಾಸ್ಟಿಕ್ ಅನಿಮಿಯಾ ಎಂದು ರೋಗ ನಿರ್ಣಯ ವಾದಾಗ ವೈದ್ಯರು ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್ ಮಾಡಿಸಬೇಕೆಂದು ಸಲಹೆ ನೀಡಿದರು. ಇನ್ನೂ ಕೆಲವು ವೈದ್ಯರು ಎಟಿಜಿ ಚಿಕಿತ್ಸೆ ನೀಡಬೇಕೆಂದು ಸಲಹೆ ನೀಡಿದರು. ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್ ಒಂದೇ ಚಿಕಿತ್ಸೆಗೆ ವೇಲೂರು ಮತ್ತು ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ವಿವಿಧ ರೀತಿಯ ದರ ಹೇಳಿದರು. ವೇಲೂರಿನಲ್ಲಿ 25 ಲಕ್ಷ ರೂ. ಹೇಳಿದರೆ ಬೆಂಗಳೂರಿನಲ್ಲಿ ರೂ. 35ರಿಂದ 45 ಲಕ್ಷದವರೆಗೂ ಖರ್ಚಾಗುತ್ತದೆ ಎಂದು ತಿಳಿಸಿದರು. ಅಪ್ಲಾಸ್ಟಿಕ್ ಅನಿಮಿಯಾಗೆ ಸೈಕ್ಲೋಸ್ಪೋರಿನ್ ಮಾತ್ರೆ ಕೂಡ ಯಶಸ್ವಿ ಚಿಕಿತ್ಸೆಯಾಗಿದ್ದು ಈ ಚಿಕಿತ್ಸೆಯ ಕುರಿತು ನಾನು ಭೇಟಿ ಮಾಡಿದ ಸುಮಾರು 25 ಜನ ವೈದ್ಯರ ಪೈಕಿ ಕೇವಲ ಐದಾರು ವೈದ್ಯರು ಮಾತ್ರ ಸಹಮತ ಸೂಚಿಸಿದರು. ಉಳಿದವರೆಲ್ಲ ಲಕ್ಷಾಂತರ ರೂಪಾಯಿ ವೆಚ್ಚವಾಗುವ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್ ಮತ್ತು ಎಟಿಜಿ ಚಿಕಿತ್ಸೆ ಅನಿವಾರ್ಯ ಎಂದು ತಿಳಿಸಿದರು. ಹೆಚ್ಚಿನ ವೆಚ್ಚದ ಚಿಕಿತ್ಸೆ ಪಡೆದರೆ ಮಾತ್ರ ರೋಗ ನಿವಾರಣೆಯಾಗುತ್ತದೆ ಎಂದು ಜನರನ್ನು ಆತಂಕಕ್ಕೀಡು ಮಾಡುವ ಮೂಲಕ ಹೆಚ್ಚು ಹಣವನ್ನು ವೆಚ್ಚ ಮಾಡಿಸುವ ಪ್ರವೃತ್ತಿ ಭಾರತದಲ್ಲಿ ಮುಂದುವರಿದಿದೆ. ನಾವು ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್ ಅಥವಾ ಎಟಿಜಿ ಚಿಕಿತ್ಸೆಗೆ ಅಷ್ಟೊಂದು ಹಣವನ್ನು ಖರ್ಚು ಮಾಡಲು ಇಚ್ಛಿಸಲಿಲ್ಲ. ಹಣಕ್ಕಿಂತ ಹೆಚ್ಚಾಗಿ ಈ ಚಿಕಿತ್ಸೆಗಳಿಂದ ರೋಗಿಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳೂ ಜಾಸ್ತಿ ಇವೆ ಎಂದು ತಿಳಿಸಿದ ಬೆಂಗಳೂರಿನ ಸೈಂಟ್‌ಜಾನ್ ಆಸ್ಪತ್ರೆಯ ವೈದ್ಯರಾದ ಡಾ. ಅಬ್ದುಲ್ ಮತೀನ್‌ರವರು ಸೈಕ್ಲೋಸ್ಪೋರಿನ್ ಮಾತ್ರೆಗಳೇ ಸಾಕೆಂದು ತಿಳಿಸಿದರು. ಇದಕ್ಕೆ ನಮ್ಮ ಕುಟುಂಬದ ವೈದ್ಯರಾದ ಮೈಸೂರಿನ ಡಾ. ಪಿ.ಎನ್.ಶಿವಪ್ರಸಾದ್ ಕೂಡಾ ಸಹಮತ ಸೂಚಿಸಿದರು. ಈಗ ಈ ಕಡಿಮೆ ವೆಚ್ಚದ ಚಿಕಿತ್ಸೆಯಿಂದಲೇ ನನ್ನ ಪತ್ನಿಯ ಆರೋಗ್ಯ ಸುಧಾರಿಸುತ್ತಿದೆ. ಹೀಗಾಗಿ ಒಳ್ಳೆಯ ವೈದ್ಯರು ಮತ್ತು ಆಸ್ಪತ್ರೆಗಳೂ ಇವೆ ಆದರೆ ಇಂತಹವರ ಸಂಪರ್ಕ ಹೆಚ್ಚು ಜನರಿಗೆ ಸಿಗುತ್ತಿಲ್ಲ. ಇದು ನನ್ನ ಸ್ವಂತ ಉದಾಹರಣೆ ಅಷ್ಟೆ. ಇಂತಹ ನೂರಾರು ಉದಾಹರಣೆಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ಗಮನಿಸಬಹುದು. ಭಾರತದಲ್ಲಿ ಖಾಸಗಿ ಆರೋಗ್ಯ ಸೇವೆ ಎಂಬುದು ಇಂದು ಲಾಭದ ನಿರೀಕ್ಷೆಯನ್ನು ಇಟ್ಟುಕೊಂಡು ಆರಂಭಿಸುವ ದೊಡ್ಡ ದೊಡ್ಡ ಉದ್ದಿಮೆಗಳಾಗಿ ರೂಪಾಂತರ ಹೊಂದಿವೆ. ಹೆಚ್ಚಿನ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾದ ಮಾರುಕಟ್ಟೆ ವಿಭಾಗವೇ ಇದೆ. ಭಾರತ ಇಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಪ್ರವಾಸೋದ್ಯಮದಲ್ಲಿ ವೇಗವಾದ ಪ್ರಗತಿಯನ್ನು ದಾಖಲಿಸುತ್ತಿದೆ. ಭಾರತದಲ್ಲಿ ಚಿಕಿತ್ಸೆ ಪಡೆಯಲು ವಿಶ್ವದ ವಿವಿಧ ದೇಶಗಳ ಜನರು ಬರುತ್ತಿದ್ದಾರೆ. ಹೇಳಬೇಕೆಂದರೆ ಭಾರತ ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಮತ್ತೊಂದೆಡೆ ದೇಶದೊಳಗೆ ಸರಿಯಾದ ಆರೋಗ್ಯ ವ್ಯವಸ್ಥೆ ಕೈಗೆಟುಕದೆ ಅಮೂಲ್ಯ ಜೀವಗಳು ಕಳೆದು ಹೋಗುತ್ತಿವೆ. ಇದು ಅತ್ಯಂತ ನೋವಿನ ವಿಷಯವೇ ಸರಿ. ಒಂದೆಡೆ ಭಾರತದಲ್ಲಿ ಆರ್ಥಿಕ ವ್ಯವಸ್ಥೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಲಾಗುತ್ತಿದೆ ಮತ್ತೊಂದೆಡೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸಾಧಿಸಿರುವ ಸಾಧನೆ ಅಷ್ಟೊಂದು ತೃಪ್ತಿದಾಯಕವಾಗಿಲ್ಲ. ಭಾರತದಲ್ಲಿ ಉತ್ತಮ ಗುಣಮಟ್ಟದ ಔಷಧಗಳ ಕೊರತೆ ಇದೆ. ಅಗಾಧ ಪ್ರಮಾಣದಲ್ಲಿ ನಕಲಿ ಔಷಧ ಉತ್ಪಾದನಾ ಜಾಲ ಬೆಳೆಯುತ್ತಿದೆ. ಇಂತಹದೇ ನಕಲಿ ಹಾವಳಿ ವೈದ್ಯಕೀಯ ಉಪಕರಣಗಳು ಮತ್ತು ಸಾಧನಗಳಲ್ಲೂ ನಿರಂತರವಾಗಿ ನಡೆಯುತ್ತಿದೆ. ಇಂತಹ ನಕಲಿ ಔಷಧ ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆ ಮತ್ತು ವಿತರಣೆಯನ್ನು ತಡೆಗಟ್ಟಲು ಹಲವು ಕಾನೂನುಗಳನ್ನು ಸರಕಾರಗಳು ರಚಿಸಿದ್ದರೂ ಅವುಗಳು ಹಲ್ಲು ಕಿತ್ತ ಹಾವುಗಳಂತಾಗಿವೆ.

Similar News