ಕೇಡರ್ ಬಿಕ್ಕಟ್ಟು ಎದುರಿಸಲು ಐಎಎಸ್ಯೇತರ ಅಧಿಕಾರಿಗಳನ್ನು ಉನ್ನತ ಹುದ್ದೆಗಳಿಗೆ ತರಬೇತುಗೊಳಿಸುತ್ತಿರುವ ಕೇಂದ್ರ ಸರಕಾರ
ವರದಿ
ಹೊಸದಿಲ್ಲಿ,ಡಿ.16: ಕೇಂದ್ರ ಸರಕಾರವು ಐಎಎಸ್ ಅಲ್ಲದ ಅಧಿಕಾರಿಗಳನ್ನು ಜಂಟಿ ಕಾರ್ಯದರ್ಶಿಗಳು,ನಿರ್ದೇಶಕರು ಮತ್ತು ಉಪನಿರ್ದೇಶಕರ ಶ್ರೇಣಿಗೆ ಬಡ್ತಿ ನೀಡಲು ತರಬೇತಿ ಯೋಜನೆಯೊಂದನ್ನು ರೂಪಿಸಿದೆ. ಇದು ಕೇಂದ್ರ ಸರಕಾರದ ಅಧಿಕಾರಿಗಳಿಗೆ ತರಬೇತಿ ನೀಡಲು ಮೋದಿಯವರ ‘ಮಿಷನ್ ಕರ್ಮಯೋಗಿ’ ಯೋಜನೆಯ ಭಾಗವಾಗಿದ್ದು, ಇಲಾಖೆಗಳಾದ್ಯಂತ ಐಎಎಸ್ ಅಧಿಕಾರಿಗಳ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು theprint.in ವರದಿ ಮಾಡಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯ ಆದೇಶಗಳಂತೆ ಕಳೆದ ನಾಲ್ಕು ವಾರಗಳಲ್ಲಿ ಕೇಂದ್ರ ಸರಕಾರವು ಮಾಡಿರುವ 73 ನೇಮಕಾತಿಗಳ ಪೈಕಿ ಕೇವಲ 37 ಜನರು ಐಎಎಸ್ ಅಧಿಕಾರಿಗಳಾಗಿದ್ದಾರೆ. ಅಂದರೆ ಶೇ.55ರಷ್ಟು ಅಥವಾ ಬಹುಸಂಖ್ಯಾತ ಹುದ್ದೆಗಳಿಗೆ ಐಎಎಸ್ ಅಲ್ಲದ ಅಧಿಕಾರಿಗಳು ನೇಮಕಗೊಂಡಿದ್ದಾರೆ. ಕೇಂದ್ರ ಸರಕಾರವು ನ.17ರಿಂದ ಡಿ.14ರವರೆಗೆ 73 ನೇಮಕಾತಿಗಳನ್ನು ಮಾಡಿ 17 ಆದೇಶಗಳನ್ನು ಹೊರಡಿಸಿದೆ.
ಹೀಗೆ ನೇಮಕಗೊಂಡವರು ತರಬೇತಿಯ ಬಳಿಕ ಹಾಲಿ ರೈಲ್ವೆ,ಅಂಚೆ,ಅರಣ್ಯ,ಕಂದಾಯ ಇಲಾಖೆಗಳು ಮತ್ತು ರಕ್ಷಣಾ ಲೆಕ್ಕಪತ್ರ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಚಿವಾಲಯಗಳಾದ್ಯಂತ ಐಎಎಸ್ ಅಲ್ಲದ ಅಧಿಕಾರಿಗಳು ಸಹ ಸಾಮಾನ್ಯವಾಗಿ ಐಎಎಸ್ ಅಧಿಕಾರಿಗಳಿಗೆ ಮೀಸಲಾದ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರಕಾರವು ಇಂಡಿಯನ್ ಆರ್ಡಿನನ್ಸ್ ಫ್ಯಾಕ್ಟರಿ ಸರ್ವಿಸಸ್ ಅಧಿಕಾರಿಗಳನ್ನೂ ಉನ್ನತ ಶಿಕ್ಷಣ,ಆಯುಷ್,ಆರ್ಥಿಕ ವ್ಯವಹಾರಗಳು ಮತ್ತು ಕಾರ್ಮಿಕ ಸಚಿವಾಲಯಗಳಲ್ಲಿ ಹಾಗೂ ಭಾರತೀಯ ಅರಣ್ಯ ಸೇವೆ ಅಧಿಕಾರಿಗಳನ್ನು ಭೂ ವಿಜ್ಞಾನಗಳು ಮತ್ತು ಭಾರತೀಯ ಅಂಚೆ ಸೇವೆ ಅಧಿಕಾರಿಗಳನ್ನು ನಾಗರಿಕ ವಾಯುಯಾನ ಇಲಾಖೆಗಳಲ್ಲಿ ನಿಯೋಜಿಸಿದೆ.
ಐಎಎಸ್ ಅಲ್ಲದ ಅಧಿಕಾರಿಗಳನ್ನು ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಅಥವಾ ಉಪನಿರ್ದೇಶಕರನ್ನಾಗಿ ನೇಮಕಗೊಳಿಸಲಾಗುತ್ತಿದ್ದು,ಅವರಿಗಾಗಿ ತರಬೇತಿ ಯೋಜನೆಯನ್ನು ತರುತ್ತಿದ್ದೇವೆ. ವಿವಿಧ ಕೇಂದ್ರೀಯ ಸೇವೆಗಳ ಸುಮಾರು 40 ಅಧಿಕಾರಿಗಳ ಮೊದಲ ತಂಡಕ್ಕೆ ಚಾಲನೆ ನೀಡಲಾಗಿದ್ದು,ಭಾರತ ಸರಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ನೇಮಕಗೊಳಿಸಲಾಗಿದೆ ಎಂದು ಕೇಂದ್ರ ಸರಕಾರದ ಉದ್ಯೋಗಿಗಳಿಗೆ ತರಬೇತಿ ಕಾರ್ಯಕ್ರಮವಾಗಿರುವ ಕರ್ಮಯೋಗಿ ಭಾರತ್ನ ಸಿಇಒ ಅಭಿಷೇಕ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದರು.
ದೇಶದಲ್ಲಿ ಸಾಮರ್ಥ್ಯ ನಿರ್ಮಾಣ ಮತ್ತು ಆಡಳಿತ ಸುಧಾರಣೆಯ ಉದ್ದೇಶದೊಂದಿಗೆ 2020ರಲ್ಲಿ ಜಾರಿಗೊಂಡಿದ್ದ ಮಿಷನ್ ಕರ್ಮಯೋಗಿ ಹೊಸದಾಗಿ ನೇಮಕಗೊಂಡಿರುವವರನ್ನು ತರಬೇತುಗೊಳಿಸುವ ‘ಪ್ರಾರಂಭ್’ ಮಾಡ್ಯೂಲ್ನ ಭಾಗವೂ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರು ನ.22ರಂದು ರೋಜಗಾರ್ ಮೇಲಾದಲ್ಲಿ ‘ಪ್ರಾರಂಭ್’ಗೆ ಚಾಲನೆ ನೀಡಿದ್ದರು. ಕಾರ್ಯಕ್ರಮದಲ್ಲಿ ಮೋದಿ 70,000ಕ್ಕೂ ಅಧಿಕ ನೇಮಕಾತಿ ಪತ್ರಗಳನ್ನು ವಿತರಿಸಿದ್ದರು.
ಐಎಎಸ್ ಅಲ್ಲದ ಅಧಿಕಾರಿಗಳಿಗೆ ತರಬೇತಿ ಯೋಜನೆಯೊಂದನ್ನು ಆರಂಭಿಸಲು ಮತ್ತು ಅವರಿಗಾಗಿ ವಿಶೇಷ ಕೋರ್ಸ್ನ್ನು ಸೇರಿಸಲು ಸರಕಾರವು ಬಳಿಕ ನಿರ್ಧರಿಸಿತ್ತು ಎಂದು ಹಿರಿಯ ಡಿಒಪಿಟಿ ಅಧಿಕಾರಿಯೋರ್ವರು ತಿಳಿಸಿದರು.
ಐಎಎಸ್ ಅಧಿಕಾರಿಗಳ ಕೊರತೆಯ ವಿಷಯವನ್ನು ಸರಕಾರವು ಬಹು ಸಮಯದಿಂದ ಪ್ರಸ್ತಾಪಿಸುತ್ತಲೇ ಬಂದಿದೆ. ಅಖಿಲ ಭಾರತ ಸೇವೆಗಳ ನಿಯಮಗಳಂತೆ ಒಟ್ಟು 6,709 ಅಧಿಕಾರಿಗಳನ್ನು ಕೇಂದ್ರ ಸರಕಾರಕ್ಕೆ ನಿಯೋಜಿಸಬೇಕು. ಆದಾಗ್ಯೂ ಪ್ರಸಕ್ತ ಒಟ್ಟು ಮಂಜೂರಾದ ಅಧಿಕಾರಿಗಳ ಪೈಕಿ ಕೇವಲ ಶೇ.6 ಜನರನ್ನು ಕೇಂದ್ರಕ್ಕೆ ನಿಯೋಜಿಸಲಾಗಿದೆ.
ನಾಗರಿಕ ಸೇವೆಗಳ ಪರೀಕ್ಷೆ-2022 ಮತ್ತು 2023ರ ಮೂಲಕ ಪ್ರತಿ ವರ್ಷ ಐಎಎಸ್ ಅಧಿಕಾರಿಗಳ ನೇರ ನೇಮಕಾತಿಯನ್ನು ಶಿಫಾರಸು ಮಾಡಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಡಿಒಪಿಟಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಬುಧವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಸರಕಾರವು ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ,ಹೀಗಾಗಿ ಸಚಿವಾಲಯಗಳಲ್ಲಿ ಐಎಎಸ್ ಅಲ್ಲದ ಅಧಿಕಾರಿಗಳ ನೇಮಕದ ಹೊರತು ಅದಕ್ಕೆ ಬೇರೆ ಆಯ್ಕೆಯಿಲ್ಲ ಎಂದು ಡಿಒಪಿಟಿ ಅಧಿಕಾರಿ ತಿಳಿಸಿದರು.