1971ರ ಯುದ್ಧದಲ್ಲಿ ಭಾರತದ ವಿಜಯಕ್ಕೆ 51ನೇ ವರ್ಷ

ಸೇನೆಯಿಂದ ‘ವಿಜಯ್ ದಿವಸ್’ ಆಚರಣೆ

Update: 2022-12-16 18:27 GMT

ಹೊಸದಿಲ್ಲಿ, ಡಿ. 16:  ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾದ 1971ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ 51ನೇ ವರ್ಷವನ್ನು ಭಾರತೀಯ ಸೇನೆ ಗುರುವಾರ ‘ವಿಜಯ ದಿವಸ್’ ಆಗಿ ಆಚರಿಸಿತು. 

ಸೇನೆಯ ಪೂರ್ವ ಕಮಾಂಡ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ಪ್ರತಿನಿಧಿಗಳು ಪಾಲ್ಗೊಂಡರು. 

ಆರ್‌ಸಿಟಿಸಿಯಲ್ಲಿ ಸೇನಾ ಶಸ್ತ್ರಾಸ್ತ್ರ ಪ್ರದರ್ಶನ ನಡೆಯುತ್ತಿದ್ದಂತೆ ಕೋಲ್ಕತ್ತಾದ ಆಕಾಶವು ಯುದ್ಧ ವಿಮಾನಗಳು ಹಾಗೂ ಸಮರ ಹೆಲಿಕಾಪ್ಟರ್‌ಗಳ ಸದ್ದಿನಿಂದ ತುಂಬಿ ಹೋಯಿತು. ಈ ಕಾರ್ಯಕ್ರಮಕ್ಕೆ ಹಿರಿಯ ಸೇನಾಧಿಕಾರಿಗಳು, ನಾಗರಿಕ ಅಧಿಕಾರಿಗಳು ಮುಕ್ತಿ ಜೋಧಾಸ್ ಸೇರಿದಂತೆ ಬಾಂಗ್ಲಾದೇಶದ ಪ್ರತಿನಿಧಿಗಳು ಹಾಗೂ ಕೋಲ್ಕತಾದ ಸಾರ್ವಜನಿಕರು ಸಾಕ್ಷಿಯಾದರು ಎಂದು ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ಅಧಿಕೃತ ಟ್ವಿಟರ್ ಖಾತೆ ಟ್ವೀಟ್ ಮಾಡಿದೆ.  

ಭಾರತೀಯ ವಾಯು ಪಡೆ ಕೂಡ ಬಾಂಗ್ಲಾದೇಶ ವಿಮೋಚನೆಯ ಯುದ್ಧದ ಗೆಲುವನ್ನು 51ನೇ ವರ್ಷ ಆಚರಿಸುವ ಮೂಲಕ ನೆನಪಿಸಿಕೊಂಡಿತು. ಅಲ್ಲದೆ ಪಾಕಿಸ್ತಾನ ಸೇನೆಯ ಶರಣಾಗತಿಯ ಪತ್ರಕ್ಕೆ ಸಹಿ ಹಾಕುವ ಫೋಟೊವನ್ನು ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿತು.  
ಭಾರತದಲ್ಲಿರುವ ಇಸ್ರೇಲ್ ರಾಯಬಾರಿ ನೋರ್ ಗಿಲೋನ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಹಾಗೂ ಕೊಡುಗೆ ಸಲ್ಲಿಸಿದ ಭಾರತೀಯ ಶಶ್ತ್ರಾಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಿದರು. 

ಈ ಯುದ್ಧದಲ್ಲಿ ಭಾರತ ಸಶಸ್ತ್ರ ಪಡೆಯ ವಿಜಯವನ್ನು ರಾಜಕೀಯ ವಲಯದಲ್ಲಿ ಕೂಡ ಆಚರಿಸಲಾಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಯುದ್ಧದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ನೀಡಿದ ಕೊಡುಗೆಯನ್ನು ನೆನಪಿಸಿಕೊಂಡರು. 
ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಪಾಕಿಸ್ತಾನದ ಸೇನಾ ಪಡೆಯ ವಿರುದ್ಧ ಭಾರತದ ಸೇನಾ ಪಡೆ ಜಯ ಗಳಿಸಿದ ಸಂದರ್ಭದ ವೀಡಿಯೊವನ್ನು ಹಂಚಿಕೊಂಡಿದೆ. ವಿಜಯ ದಿವಸದಂದು ಭಾರತೀಯ ಸಶಸ್ತ್ರ ಪಡೆಯ ಬಲಿದಾನ ಹಾಗೂ ಅದಮ್ಯ ಧೈರ್ಯಕ್ಕೆ ವಂದನೆ ಎಂದು ಅದು ಹೇಳಿದೆ. 

Similar News