ನಂ.1 ಶ್ರೀಮಂತ ಪಟ್ಟದಿಂದ ಎಲಾನ್‌ ಮಸ್ಕ್‌ ಅವರನ್ನು ಹಿಂದಿಕ್ಕಿದ ಬೆರ್ನಾರ್ಡ್‌ ಆರ್ನಾಲ್ಟ್‌ ಯಾರು?

Update: 2022-12-17 06:26 GMT

ಹೊಸದಿಲ್ಲಿ: ಟೆಸ್ಲಾ ಮೋಟಾರ್ಸ್‌ ಹಾಗೂ ಟ್ವಿಟರ್‌ (Twitter) ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ಅವರನ್ನು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟದಿಂದ ಎರಡನೇ ಸ್ಥಾನಕ್ಕೆ ಇಳಿಸಿ ಆ ಸ್ಥಾನವನ್ನು ಇತ್ತೀಚೆಗೆ ಗಿಟ್ಟಿಸಿಕೊಂಡ ಫ್ರೆಂಚ್‌ ಉದ್ಯಮಿ ಬೆರ್ನಾರ್ಡ್‌ ಆರ್ನಾಲ್ಟ್‌ ಅವರ ಬಗ್ಗೆ ಕೆಲವೊಂದು ಮಾಹಿತಿ ಇಲ್ಲಿದೆ.

ವಿಲಾಸಿ ಫ್ಯಾಶನ್‌ ಉದ್ಯಮ ಸಂಸ್ಥೆ ಎಲ್‌ವಿಎಂಎಚ್‌ ಮೋಯೆಲ್‌ ಹೆನ್ನೆಸ್ಸಿ ಲೂಯಿಸ್‌ ವಿಯುಟ್ಟನ್‌ ಇದರ ಒಡೆಯನಾಗಿರುವ ಬೆರ್ನಾರ್ಡ್‌ ಅವರ ಕಂಪೆನಿಯು ಲೂಯಿಸ್‌ ವಿಯುಟ್ಟನ್‌, ಮಾರ್ಕ್‌ ಜೇಕಬ್ಸ್‌, ಸೆಫೋರ  ಮತ್ತು ರಿಹಾನ್ನಾಸ್‌ ಫೆಂಟಿ ಬ್ಯೂಟಿ ಸಹಿತ 70ಕ್ಕೂ ಅಧಿಕ ಬ್ರ್ಯಾಂಡ್‌ಗಳನ್ನು ಹೊಂದಿದೆ.

ಅವರು ಫ್ರಾನ್ಸ್‌ನ ರೌಬೇಕ್ಸ್‌ ಎಂಬಲ್ಲಿನ ಕೈಗಾರಿಕೋದ್ಯಮಿಗಳ ಕುಟುಂಬದಿಂದ ಬಂದವರು. ಇಂಜಿನಿಯರಿಂಗ್‌ ಶಿಕ್ಷಣ ಪಡೆದ ಅವರು 1978 ರಲ್ಲಿ ತಮ್ಮ  ಸಂಸ್ಥೆಯ ಅಧ್ಯಕ್ಷರಾದರು. ಮುಂದೆ 1984 ರಲ್ಲಿ ಅವರು ಫೈನಾನ್ಶಿಯರ್‌ ಅಗಾಚೆ ಹೋಲ್ಡಿಂಗ್‌ ಕಂಪೆನಿಯಲ್ಲಿ ಅಮೂಲಾಗ್ರ ಬದಲಾವಣೆ ತಂದ ನಂತರ ಕಂಪೆನಿ ಲಾಭದಲ್ಲಿ ಮುನ್ನಡೆದಿತ್ತು.

ಈ ಸೋಮವಾರ ಮಸ್ಕ್‌ ಅವರ ಒಟ್ಟು ಸಂಪತ್ತಿನ ಮೌಲ್ಯ ಕುಸಿದು 181.3 ಬಿಲಿಯನ್‌ ಡಾಲರ್‌ ತಲುಪಿದಾಗ, 186.2 ಬಿಲಿಯನ್‌ ಡಾಲರ್‌ ಸಂಪತ್ತು ಹೊಂದಿದ್ದ ಬೆರ್ನಾರ್ಡ್‌ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾದರು. ಈ ಹುದ್ದೆಗೆ ಅವರು ಏರಿದ್ದು ಇದೇ ಮೊದಲ ಬಾರಿ ಆಗಿದೆ ಹಾಗೂ ಫ್ರಾನ್ಸ್‌ ಅಥವಾ ಯುರೋಪ್‌ನಲ್ಲಿ ಈ ಹುದ್ದೆ ಏರಿದ  ಮೊದಲ ವ್ಯಕ್ತಿ ಅವರಾಗಿದ್ದಾರೆ.

ಲೂಯಿಸ್‌ ವಿಯುಟ್ಟನ್‌ ಮತ್ತು ಮೋಯೆಲ್‌ ಹೆನ್ನೆಸಿ ವಿಲೀನಗೊಂಡ ಎರಡು ವಷದ ನಂತರ ಬೆರ್ನಾರ್ಡ್‌ ಅವರು 1989 ರಲ್ಲಿ ಎಲ್‌ವಿಎಂಎಚ್‌ನಲ್ಲಿ ಬಹುಪಾಲು ಪಡೆದುಕೊಂಡರು.  ಅಂದಿನಿಂದ ಅವರು ಕಂಪೆನಿಯ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

ವರ್ಷ ಕಳೆದ ಹಾಗೆ ಅವರ ಕಂಪೆನಿ ಏಳಿಗೆ ಸಾಧಿಸುತ್ತಾ ಬಂದಿದ್ದು ಫ್ಯಾಷನ್‌, ಚರ್ಮದ ಉತ್ಪನ್ನಗಳು, ಸುಗಂಧ ದ್ರವ್ಯಗಳು, ವೈನ್‌, ಸೌಂದರ್ಯವರ್ಧಕಗಳು, ಆಭರಣಗಳು, ವಾಚುಗಳು ಹೀಗೆ ವಿವಿಧ ಕ್ಷೇತ್ರಗಳಲ್ಲಿ  ಹರಡಿಕೊಂಡಿದೆ.

ಜನವರಿ 2021 ರಲ್ಲಿ ಅವರ ಉದ್ಯಮ ಸಮೂಹವು ಖ್ಯಾತ ಅಮೆರಿಕನ್‌ ಆಭರಣ ಸಂಸ್ಥೆಯಾದ ಟಿಫ್ಫಾನಿ & ಕೋ ಅನ್ನು  15.8 ಬಿಲಿಯನ್‌ ಡಾಲರ್‌ಗೆ ಖರೀದಿಸಿತ್ತು.

ಅವರ ಸಂಸ್ಥೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದೆಯಲ್ಲದೆ ಕಲೆ ಮತ್ತು ಸಂಸ್ಕೃತಿಗೂ ಪ್ರೋತ್ಸಾಹ ನೀಡುತ್ತಿದೆ.

Similar News