ಗುರುಪುರ ಗ್ರಾಪಂ ಸಭಾಭವನದಲ್ಲಿ ತಹಶೀಲ್ದಾರ್ ಗ್ರಾಮವಾಸ್ತವ್ಯ

Update: 2022-12-17 14:49 GMT

ಮಂಗಳೂರು : ಸರಕಾರದ ಬಹುತೇಕ ಇಲಾಖೆಗಳು ದಿನದ ಮಟ್ಟಿಗೆ ಗ್ರಾಮವೊಂದರಲ್ಲಿ ನೆಲೆನಿಂತು ಗ್ರಾಮೀಣರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಅವರ ಕುಂದುಕೊರತೆ ಆಲಿಸಿ ಪರಿಹಾರಕ್ಕೆ ಸ್ಥಳೀಯವಾಗಿ ಮಾರ್ಗೋಪಾಯ ಹುಡುಕುವ ವಿನೂತನ ಕಾರ್ಯಕ್ರಮ ಗ್ರಾಮ ವಾಸ್ತವ್ಯವಾಗಿದೆ. ಈ ಗ್ರಾಮ ವಾಸ್ತವ್ಯದಿಂದ ಜನರ ಅಲೆದಾಟ ತಪ್ಪಿಸಲಾಗುತ್ತಿದೆ ಎಂದು ಮಂಗಳೂರು ತಹಶೀಲ್ದಾರ್ ಪ್ರಶಾಂತ್ ವಿ. ಪಾಟೀಲ್ ಹೇಳಿದರು.

ಗುರುಪುರ ಗ್ರಾಪಂ ಸಭಾಭವನದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಹೂಡಿ ಅವರು ಮಾತನಾಡಿದರು.

ಶಿಕ್ಷಣ ಇಲಾಖೆ, ಕಂದಾಯ, ಕೃಷಿ, ಮೆಸ್ಕಾಂ, ಆರೋಗ್ಯ, ಮಕ್ಕಳು ಮತ್ತು ಮಹಿಳಾ ಕಲ್ಯಾಣ, ಅರಣ್ಯ ಮತ್ತಿತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದು, ತಹಶೀಲ್ದಾರರ ಸಮಕ್ಷಮದಲ್ಲಿ ಹಲವರ ಅರ್ಜಿಗಳನ್ನು ಪರಿಶೀಲಿಸಿದರು.

ಗುರುಪುರ ಗ್ರಾಪಂ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷೆ ದಿಲ್‌ಶಾದ್, ಮಂಗಳೂರು ತಾಲೂಕು ಆರೋಗ್ಯ ಇಲಾಖೆಯ ಡಾ. ಸುಜಯ್ ಭಂಡಾರಿ, ಗಂಜಿಮಠ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.  ಗುರುಪುರ-ಕೈಕಂಬ ನಾಡ ಕಚೇರಿಯ ಉಪ ತಹಶೀಲ್ದಾರ್ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಎರಡೂವರೆ ವರ್ಷಗಳ ಹಿಂದೆ ಮಳೆಗಾಲದಲ್ಲಿ ಗುಡ್ಡೆ ಕುಸಿದು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸಲು ನಿವೇಶನ ಸಮತಟ್ಟುಗೊಳಿಸುತ್ತಿರುವ ಮೂಳೂರು ಸೈಟ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Similar News