ಹುಲಿ ಸಾವು ಪ್ರಕರಣ: ಇಬ್ಬರು ಅಧಿಕಾರಿಗಳನ್ನು ಸಿಲುಕಿಸಲು ಯತ್ನಿಸಿದ ಐಎಫ್‍ಎಸ್ ಅಧಿಕಾರಿಗೆ ಜೈಲು ಶಿಕ್ಷೆ

Update: 2022-12-18 02:14 GMT

ಭೋಪಾಲ್: ಜುರ್ಜುರಾವಾಲಿಯ ಹೆಣ್ಣು ಹುಲಿ ಸಾವಿನ ಪ್ರಕರಣದಲ್ಲಿ ಪ್ರಸ್ತುತ ಐಎಎಸ್ ಅಧಿಕಾರಿಯಾಗಿರುವ ಒಬ್ಬರು ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲು ಯತ್ನಿಸಿದ ಆರೋಪದಲ್ಲಿ ಮಧ್ಯಪ್ರದೇಶದ ಉಮರಿಯಾ ಜಿಲ್ಲಾ ನ್ಯಾಯಾಲಯ ಬಂಧವ್‍ ಗೃಹ ರಾಷ್ಟ್ರೀಯ ಉದ್ಯಾನವನದ ಮಾಜಿ ಕ್ಷೇತ್ರ ನಿರ್ದೇಶಕ ಸಿ.ಕೆ.ಪಾಟೀಲ್ ಎಂಬವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು timesofindia.com ವರದಿ ಮಾಡಿದೆ.

ಸಿ.ಕೆ.ಪಾಟೀಲ್ ಅವರು ಐಎಫ್‍ಎಸ್ ಅಧಿಕಾರಿಯಾಗಿದ್ದು, ಭೋಪಾಲ್‍ನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದಾರೆ.

ಎಸ್‍ಡಿಓ ಡಿಸಿ ಘೋರ್ಮರ್ ಮತ್ತು ರೇಂಜರ್ ರಾಜೇಶ್ ತ್ರಿಪಾಠಿ ಹಾಗೂ ರೇಗಿ ರಾವ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಂದು ಉಮಾರಿಯಾ ಜಿಲ್ಲಾ ಪಂಚಾಯ್ತಿ ಸಿಇಓ ಆಗಿದ್ದ ಅಕ್ಷಯ್ ಕುಮಾರ್ ಸಿಂಗ್ ಹಾಗೂ ಮನಪುರ ಜಿಲ್ಲೆಯ ಸಿಇಓ ಆಗಿದ್ದ ಡಾ.ಕೆ.ಕೆ.ಪಾಂಡೆ ಅವರನ್ನು ಸಿಲುಕಿಸಲು ಯತ್ನಿಸಿದ್ದರು ಎಂದು ಆಪಾದಿಸಲಾಗಿತ್ತು. ಅಕ್ಷಯ್ ಅವರು ಇದೀಗ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದಾರೆ.

ಮೂರು ಮರಿಗಳ ತಾಯಿಯಾಗಿದ್ದ ಹೆಣ್ಣು ಹುಲಿ 2010ರ ಮೇ 19ರಂದು ಬಂಧವ್‍ ಗೃಹನ ಜುರ್ಜುರಾ ಪ್ರದೇಶದಲ್ಲಿ ಮೃತಪಟ್ಟಿತ್ತು. ಅಟಾಪ್ಸಿ ವರದಿಯಿಂದ ದೊಡ್ಡ ಪ್ರಮಾಣದ ಆಂತರಿಕ ಸ್ರಾವ ಆಗಿರುವುದು ಕಂಡು ಬಂದಿತ್ತು ಹಾಗೂ ವಾಹನ ಬಡಿದು ಈ ಸಾವು ಸಂಭವಿಸಿರಬೇಕು ಎನ್ನುವುದನ್ನು ಸೂಚಿಸಿತ್ತು. ಆರಂಭದಲ್ಲಿ ಪ್ರಕರಣವನ್ನು ಮುಚ್ಚಿಹಾಕಲು ಅರಣ್ಯಾಧಿಕಾರಿಗಳು ಯತ್ನಿಸಿದ್ದರು ಆದರೆ ಆರ್‍ಟಿಐ ಕಾರ್ಯಕರ್ತರಾದ ಶೆಹ್ಲಾ ಮಸೂದ್ ಈ ಪ್ರಕರಣಕ್ಕೆ ಅಂತರರಾಷ್ಟ್ರೀಯ ವೇದಿಕೆ ಕಲ್ಪಿಸಿದ್ದರು. ಶೆಹ್ಲಾ ಮಸೂದ್ 2011ರಲ್ಲಿ ಹತ್ಯೆಯಾಗಿದ್ದಾರೆ.

ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ಹಾಗೂ ಆ ಬಳಿಕ ಎಸ್‍ಟಿಎಫ್‍ಗೆ ವರ್ಗಾಯಿಸಿತ್ತು. ತಿಂಗಳ ಕಾಲ ತನಿಖೆ ನಡೆಸಿದ ಎಸ್‍ಟಿಎಫ್, ಇಬ್ಬರು ವಲಯ ಅರಣ್ಯಾಧಿಕಾರಿಗಳ ಚಾಲಕರಾದ ಮಾನ್ ಸಿಂಗ್ ಮತ್ತು ಶ್ರೀಲಾಲ್ ಯಾದವ್, ಅಕ್ಷಯ್ ಸಿಂಗ್ ಅವರ ಚಾಲಕ ಪಂಕಜ್ ವಿಶ್ವಕರ್ಮ ಮತ್ತು ಗಾರ್ಡ್ ಧೀರೇಂದ್ರ ಚತುರ್ವೇದಿ ಹೀಗೆ ನಾಲ್ಕು ಮಂದಿಗೆ ಮಂಪರು ಪರೀಕ್ಷೆ ನಡೆಸಿತ್ತು. ಆದರೆ ಪರೀಕ್ಷೆ ಬಳಿಕದ ಅಪಾಯ ಸಾಧ್ಯತೆ ಹಿನ್ನೆಲೆಯಲ್ಲಿ ಯಾದವ್, ಈ ಪರೀಕ್ಷೆಗೆ ನಿರಾಕರಿಸಿದ್ದರು.

ಅಭಿಯೋಜಕರ ಪ್ರಕಾರ 2011-12ರಲ್ಲಿ ಬಂದವ್‍ಗೃಹ ನಿರ್ದೇಶಕರಾಗಿದ್ದ ಪಾಟೀಲ್ ಅವರು ಮಾನ್ ಸಿಂಗ್ ಮೂಲಕ ಅಕ್ಷಯ್ ಹಾಗೂ ಪಾಂಡೆಯವರನ್ನು ಸಿಲುಕಿಸಲು ಯತ್ನಿಸಿದ್ದರು. ಸಿಂಗ್ ಮೇಲೆ ಒತ್ತಡ ತಂದು, ಹಲವು ದಿನಗಳ ಕಾಲ ಅವರನ್ನು ಅಕ್ರಮವಾಗಿ ಕೂಡಿಹಾಕಿತ್ತು. ಅವರ ಪತ್ನಿ ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ, ಅಧಿಕಾರಿಗಳು ಅವರನ್ನು ರಹಸ್ಯ ಜಾಗದಲ್ಲಿ ಕೂಡಿ ಹಾಕಿರುವುದು ಗೊತ್ತಾಗಿತ್ತು. ಈ ಸಂಬಂಧ ಅವರ ಪತ್ನಿ ಜಬಲ್ಪುರ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು ಹಾಗೂ ಅವರ ಪರವಾಗಿ ತೀರ್ಪು ಬಂದಿತ್ತು.

ಸಿಂಗ್ ಹಾಗೂ ಸಿಇಓಗಳಿಗೆ ಮಂಪರು ಪರೀಕ್ಷೆ ನಡೆಸಿದರೂ ಯಾವುದೇ ಅಂಶ ಬಹಿರಂಗವಾಗಿರಲಿಲ್ಲ. ಸಿಂಗ್ ಸ್ಥಳೀಯ ಸಿವಿಲ್ ನ್ಯಾಯಾಲಯದಲ್ಲಿ ಕಿರುಕುಳ ಆರೋಪ ಹೊರಿಸಿ ದೂರು ನೀಡಿದ್ದರು. ಶುಕ್ರವಾರ ಸಿ.ಕೆ.ಪಾಟೀಲ್ ಅವರಿಗೆ ಮೂರು ವರ್ಷಗಳ ಜೈಲು ಮತ್ತು 5000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಲಾಗಿದೆ ಎಂದು timesofindia.com ವರದಿ ಮಾಡಿದೆ.

Similar News