ಭಾರತ-ಚೀನಾ ಸಂಘರ್ಷ: ಪಿಎಂ ಕೇರ್ಸ್ ಫಂಡ್ ಗೆ ಚೀನಾ ಕೊಡುಗೆ ಸೇರಿದಂತೆ ಪ್ರಧಾನಿಗೆ 7 ಪ್ರಶ್ನೆ ಕೇಳಿದ ಕಾಂಗ್ರೆಸ್

Update: 2022-12-18 05:31 GMT

ಹೊಸದಿಲ್ಲಿ: ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ಡಿಸೆಂಬರ್ 9 ರಂದು ನಡೆದ ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಗಳನ್ನು ನೀಡುವ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಹೊರಿಸಿರುವ ಕಾಂಗ್ರೆಸ್ ಶನಿವಾರ ಪ್ರಧಾನಿ ಮೋದಿಯವರ ಮುಂದೆ ಏಳು ಪ್ರಶ್ನೆಗಳನ್ನು ಮುಂದಿಟ್ಟಿದೆ.

 ಜೈಪುರದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು 'ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ' ಎಂದು ಹೇಳಿದ ನಂತರ ಕೇಂದ್ರವು ಈ ವಿಷಯದ ಬಗ್ಗೆ ಮೌನವಾಗಿದೆ.

ಕಾಂಗ್ರೆಸ್ ನ  ಸಂವಹನ ವಿಭಾಗದ  ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವಿಟರ್‌ನಲ್ಲಿ ತಮ್ಮ ಪಕ್ಷದ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ನಲ್ಲಿ "ಜವಾಬ್ ದೋ, ಪ್ರಧಾನ ಮಂತ್ರಿ (ಪ್ರಧಾನ ಮಂತ್ರಿಗಳೆ ಉತ್ತರ ನೀಡಿ)," ಎಂದು ಬರೆದಿರುವ   ಅವರು ಕಾಂಗ್ರೆಸ್ ಪಕ್ಷದ ಪ್ರಶ್ನೆಗಳನ್ನು ಲಗತ್ತಿಸಿದ್ದಾರೆ. ಕಾಂಗ್ರೆಸ್ ಕೇಳಿರುವ ಪ್ರಶ್ನೆಗಳನ್ನು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉತ್ತರಿಸುವುದು ಪ್ರಧಾನಿ ಅವರ ರಾಜಕೀಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

1.2020 ಜೂನ್ 20ರಂದು, ಪೂರ್ವ ಲಡಾಖ್‌ನಲ್ಲಿ ಭಾರತದ ಭೂಪ್ರದೇಶ ಮೇಲೆ ಚೀನಾವು ಯಾವುದೇ ಆಕ್ರಮಣ ನಡೆಸಿಲ್ಲ ಎಂದು ನೀವು ಏಕೆ ಹೇಳಿದ್ದೀರಿ?

2. ಮೇ 2020 ರ ಮೊದಲು ನಾವು ನಿಯಮಿತವಾಗಿ ಗಸ್ತು ತಿರುಗುತ್ತಿದ್ದ ಪೂರ್ವ ಲಡಾಖ್‌ನಲ್ಲಿ ಸಾವಿರಾರು ಚದರ ಕಿಲೋಮೀಟರ್‌ಗಳನ್ನು ಪ್ರವೇಶಿಸದಂತೆ ನಮ್ಮ ಸೈನ್ಯವನ್ನು ತಡೆಯಲು ನೀವು ಚೀನೀಯರಿಗೆ ಏಕೆ ಅನುಮತಿಸಿದ್ದೀರಿ?

3.ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ಅನ್ನು ಸ್ಥಾಪಿಸಲು 17 ಜುಲೈ 2013 ರಂದು ಕ್ಯಾಬಿನೆಟ್ ಅನುಮೋದಿಸಿದ ಯೋಜನೆಯನ್ನು ನೀವು ಏಕೆ ಕೈಬಿಟ್ಟಿದ್ದೀರಿ?

4. PM CARES ಫಂಡ್ ಗೆ ಕೊಡುಗೆ ನೀಡಲು ನೀವು ಚೀನಾದ ಕಂಪನಿಗಳಿಗೆ ಏಕೆ ಅವಕಾಶ ನೀಡಿದ್ದೀರಿ?

5. ಕಳೆದ ಎರಡು ವರ್ಷಗಳಲ್ಲಿ ಚೀನಾದಿಂದ ದಾಖಲೆಯ ಮಟ್ಟದಲ್ಲಿ  ಆಮದು ಮಾಡಿಕೊಳ್ಳಲು ಏಕೆ ಅನುಮತಿಸಿದ್ದೀರಿ?

6. ಗಡಿ ಪರಿಸ್ಥಿತಿ ಮತ್ತು ಚೀನಾದಿಂದ ನಾವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಬಾರದು ಎಂದು  ಪ್ರಧಾನಿ ಏಕೆ ನಿರ್ಬಂಧ ವಿಧಿಸಿದ್ದಾರೆ ಎಂಬುದನ್ನು ರಾಷ್ಟ್ರವು ತಿಳಿಯಲು ಬಯಸುತ್ತಿದೆ.

7. ನೀವು ಚೀನಾದ ಉನ್ನತ ನಾಯಕರನ್ನು ಸುಮಾರು 18 ಬಾರಿ ಭೇಟಿ ಮಾಡಿದ್ದೀರಿ. ಅಷ್ಟೇ ಅಲ್ಲ ಇತ್ತೀಚೆಗೆ ಬಾಲಿಯಲ್ಲಿ ಚೀನಾದ ಅಧ್ಯಕ್ಷ  ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ಹಸ್ತಲಾಘವ ಕೂಡ ಮಾಡಿದ್ದೀರಿ. ಇದಾದ ಕೆಲವೇ ದಿನಗಳಲ್ಲಿ ಚೀನಾ ತವಾಂಗ್‌ ನ್ನು  ಅತಿಕ್ರಮಿಸಲು ಯತ್ನಿಸುವ ಮೂಲಕ ಗಡಿಯಲ್ಲಿ ಬೆದರಿಕೆ ಒಡ್ಡುವ ತಂತ್ರ ರೂಪಿಸುತ್ತಿದೆ.  ಏಕಪಕ್ಷೀಯವಾಗಿ ಗಡಿ ಪರಿಸ್ಥಿತಿಯನ್ನು ಬದಲಾಯಿಸುವುದನ್ನು ಮುಂದುವರೆಸಿತು. ಈ ವಿಚಾರದಲ್ಲಿ  ನೀವು ದೇಶವನ್ನು ಏಕೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Similar News