ವಿಶ್ವಕಪ್ ಫೈನಲ್: ಮೊದಲಾರ್ಧದಲ್ಲಿ ಅರ್ಜೆಂಟೀನಕ್ಕೆ 2-0 ಮುನ್ನಡೆ

ಐತಿಹಾಸಿಕ 26ನೇ ವಿಶ್ವಕಪ್ ಪಂದ್ಯ ಆಡಿದ ಮೆಸ್ಸಿ

Update: 2022-12-18 16:00 GMT

ದೋಹಾ, ಡಿ.18: ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ನ ಮೊದಲಾರ್ಧದ ಅಂತ್ಯಕ್ಕೆ ಅರ್ಜೆಂಟೀನ ತಂಡ ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ 2-0 ಮುನ್ನಡೆ ಸಾಧಿಸಿದೆ.

ಲುಸೈಲ್ ಸ್ಟೇಡಿಯಮ್‌ನಲ್ಲಿ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ನಾಯಕ ಲಿಯೊನೆಲ್ ಮೆಸ್ಸಿ 23ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಅರ್ಜೆಂಟೀನಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಏಂಜೆಲ್ ಡಿ ಮಾರಿಯಾ 36ನೇ ನಿಮಿಷದಲ್ಲಿ ಆಕರ್ಷಕ ಗೋಲು ಗಳಿಸಿ ಅರ್ಜೆಂಟೀನದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

ಡಿ ಮಾರಿಯಾ ಅವರು 3 ಆವೃತ್ತಿಯ ವಿಶ್ವಕಪ್(2014,2018,2022)ನಲ್ಲಿ ಗೋಲು ಗಳಿಸಿದ ಸಾಧನೆ ಮಾಡಿದ್ದಾರೆ. ಎಲ್ಲ ಗೋಲುಗಳನ್ನು ನಾಕೌಟ್ ಸುತ್ತಿನಲ್ಲಿ ಗಳಿಸಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪೈಕಿ ಒಬ್ಬರಾಗಿರುವ ಮೆಸ್ಸಿ 26ನೇ ಬಾರಿ ವಿಶ್ವಕಪ್ ಪಂದ್ಯವನ್ನು ಆಡುವ ಮೂಲಕ ಜರ್ಮನಿಯ ಐಕಾನ್ ಲೋಥರ್ ಮ್ಯಾಥ್ಯೂಸ್(25 ಪಂದ್ಯ) ಅವರ ಸಾರ್ವಕಾಲಿಕ ದಾಖಲೆಯೊಂದನ್ನು ಮುರಿದರು. ಫ್ರಾನ್ಸ್ ವಿರುದ್ಧ ರವಿವಾರ ವಿಶ್ವಕಪ್ ಫೈನಲ್ ಪಂದ್ಯ ಆಡುವ ಮೂಲಕ ಮೆಸ್ಸಿ ಈ ಸಾಧನೆ ಮಾಡಿದರು.

ಮೆಸ್ಸಿ ಕ್ರೊಯೇಶಿಯ ವಿರುದ್ಧ ಸೆಮಿ ಫೈನಲ್‌ನಲ್ಲಿ ಜಯ ಸಾಧಿಸಿದ ಬಳಿಕ ಫಿಫಾ ವಿಶ್ವಕಪ್ ಇತಿಹಾಸದಲ್ಲಿ 25ನೇ ಪಂದ್ಯವನ್ನು ಆಡುವ ಮೂಲಕ ಮ್ಯಾಥ್ಯೂಸ್ ದಾಖಲೆಯನ್ನು ಸರಿಗಟ್ಟಿದ್ದರು. 1998ರಿಂದ ಮ್ಯಾಥ್ಯೂಸ್ ದಾಖಲೆಯನ್ನು ಯಾರೂ ಮುರಿದಿರಲಿಲ್ಲ. ಇದೀಗ ಅರ್ಜೆಂಟೀನದ ಮಾಂತ್ರಿಕ ಕೊನೆಗೂ ಆ ದಾಖಲೆ ಮುರಿದಿದ್ದಾರೆ.
 

Similar News