ಫಿಫಾ: ಫ್ರಾನ್ಸ್ ಅನ್ನು ಮಣಿಸಿದ ಅರ್ಜೆಂಟೀನಕ್ಕೆ ಮೂರನೇ ವಿಶ್ವಕಪ್

36 ವರ್ಷಗಳ ಬಳಿಕ ಅರ್ಜೆಂಟೀನ ಮತ್ತೆ ವಿಶ್ವ ಚಾಂಪಿಯನ್

Update: 2022-12-18 18:46 GMT

ದೋಹಾ, ಡಿ.18: ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಅಂತರದಿಂದ ಮಣಿಸಿದ ಅರ್ಜೆಂಟೀನ ತಂಡ 36 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡಿತು. ಪಂದ್ಯದಲ್ಲಿ ಮಿಂಚಿದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ತನ್ನ ದೀರ್ಘಕಾಲದ ವಿಶ್ವಕಪ್ ಕನಸನ್ನು ಈಡೇರಿಸಿಕೊಂಡರು.

ರವಿವಾರ ಲುಸೈಲ್ ಸ್ಟೇಡಿಯಮ್‌ನಲ್ಲಿ ರೋಚಕವಾಗಿ ಸಾಗಿದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಉಭಯ ತಂಡಗಳು 120 ನಿಮಿಷಗಳ ಆಟದಲ್ಲಿ 3-3 ರಿಂದ ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.

1986ರಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದ್ದ ಅರ್ಜೆಂಟೀನ ಈಗ 3ನೇ ಬಾರಿ ವಿಶ್ವ ಚಾಂಪಿಯನ್‌ಪಟ್ಟಕ್ಕೇರಿದೆ. ಮೆಸ್ಸಿ ತನ್ನ ಕೊನೆಯ ಪಂದ್ಯದಲ್ಲಿ ವಿಶ್ವಕಪ್‌ಗೆ ಮುತ್ತಿಟ್ಟರು. ವಿಶ್ವಕಪ್‌ನಲ್ಲಿ ಯುರೋಪ್ ತಂಡಗಳ ಪ್ರಾಬಲ್ಯ ಮುರಿದಿರುವ ಅರ್ಜೆಂಟೀನ 2002ರ ಬಳಿಕ ವಿಶ್ವಕಪ್ ಗೆದ್ದ ಮೊದಲ ದಕ್ಷಿಣ ಅಮೆರಿಕ ತಂಡ ಎನಿಸಿಕೊಂಡಿದೆ. ಅರ್ಜೆಂಟೀನ ಈ ಹಿಂದೆ 1978 ಹಾಗೂ 1986ರಲ್ಲಿ ಪ್ರಶಸ್ತಿ ಜಯಿಸಿತ್ತು. ವಿಶ್ವಕಪ್‌ನಲ್ಲಿ ಫ್ರಾನ್ಸ್ 2006ರ ಬಳಿಕ 2ನೇ ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

18 ವರ್ಷಗಳ ಸುದೀರ್ಘ ಫುಟ್ಬಾಲ್ ಜೀವನದಲ್ಲಿ ಮೆಸ್ಸಿ ವಿಶ್ವಕಪ್ ಹೊರತುಪಡಿಸಿ ಉಳಿದೆಲ್ಲ ಪ್ರಮುಖ ಪ್ರಶಸ್ತಿ ಜಯಿಸಿದ್ದಾರೆ. 37 ಕ್ಲಬ್ ಟ್ರೋಫಿಗಳು, 7 ಬ್ಯಾಲನ್‌ಡಿ’ಒರ್ ಪ್ರಶಸ್ತಿಗಳು, 6 ಯುರೋ ಗೋಲ್ಡನ್ ಬೂಟ್, ಒಂದು ಕೊಪಾ ಅಮೆರಿಕ ಚಾಂಪಿಯನ್‌ಪಟ್ಟ, ಒಂದು ಒಲಿಂಪಿಕ್ಸ್ ಚಿನ್ನದ ಪದಕ ಸೇರಿದಂತೆ ಎಲ್ಲವನ್ನು ಬಾಕಿಕೊಂಡಿರುವ ಮೆಸ್ಸಿಗೆ ಈಗ ವಿಶ್ವಕಪ್ ಕೂಡ ಒಲಿದಿದೆ.

ಫ್ರಾನ್ಸ್ ತಿರುಗೇಟು: ಫ್ರಾನ್ಸ್ ತಂಡ ಎರಡು ನಿಮಿಷದೊಳಗೆ ಎರಡು ಗೋಲು ಗಳಿಸಿ ಅರ್ಜೆಂಟೀನಕ್ಕೆ ಶಾಕ್ ನೀಡಿತು. 80 ಹಾಗೂ 82ನೇ ನಿಮಿಷದಲ್ಲಿ ಅವಳಿ ಗೋಲು ಗಳಿಸಿದ ಕಿಲಿಯನ್ ಎಂಬಾಪೆ ಪಂದ್ಯದ ದಿಕ್ಕು ತಪ್ಪಿಸಿದರು. 80ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದ ಎಂಬಾಪೆ 81ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದರು. ಉಭಯ ತಂಡಗಳು ನಿಗದಿತ 90 ನಿಮಿಷಗಳ ಪಂದ್ಯದಲ್ಲಿ 2-2 ರಿಂದ ಸಮಬಲ ಸಾಧಿಸಿದ ಕಾರಣ ಪಂದ್ಯವು ಹೆಚ್ಚುವರಿ ಸಮಯಕ್ಕೆ ವಿಸ್ತರಣೆಯಾಯಿತು.

 108ನೇ ನಿಮಿಷದಲ್ಲಿ ಗೋಲು ಗಳಿಸಿದ ಮೆಸ್ಸಿ ಅರ್ಜೆಂಟೀನಕ್ಕೆ 3-2 ಮುನ್ನಡೆ ಒದಗಿಸಿಕೊಟ್ಟರು. ಆದರೆ ಈ ಮುನ್ನಡೆ ಹೆಚ್ಚು ಹೊತ್ತು ಉಳಿಯಲಿಲ್ಲ. 118ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದ ಎಂಬಾಪೆ ಫ್ರಾನ್ಸ್ 3-3 ರಿಂದ ಸಮಬಲ ಸಾಧಿಸಲು ಕಾರಣರಾದರು. ಹೀಗಾಗಿ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ನಿರ್ಧರಿಸಲಾಯಿತು.

*ಮೊದಲಾರ್ಧದಲ್ಲಿ 2-0 ಮುನ್ನಡೆ

 ಫ್ರಾನ್ಸ್ ವಿರುದ್ಧ ಮೊದಲಾರ್ಧದ ಅಂತ್ಯಕ್ಕೆ ಅರ್ಜೆಂಟೀನ ತಂಡ 2-0 ಮುನ್ನಡೆ ಸಾಧಿಸಿತು. ನಾಯಕ ಲಿಯೊನೆಲ್ ಮೆಸ್ಸಿ 23ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಅರ್ಜೆಂಟೀನಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಮೆಸ್ಸಿ ಪ್ರಸಕ್ತ ಟೂರ್ನಿಯಲ್ಲಿ ಆರನೇ ಗೋಲು ಗಳಿಸಿದರು.

ಏಂಜೆಲ್ ಡಿ ಮಾರಿಯಾ 36ನೇ ನಿಮಿಷದಲ್ಲಿ ಆಕರ್ಷಕ ಗೋಲು ಗಳಿಸಿ ಅರ್ಜೆಂಟೀನ ತಂಡ 2-0 ಮುನ್ನಡೆ ಸಾಧಿಸುವಲ್ಲಿ ಪ್ರಮುಖ ಕಾಣಿಕೆ ನೀಡಿದರು.

 ಡಿ ಮಾರಿಯಾ ಅವರು 3 ಆವೃತ್ತಿಯ ವಿಶ್ವಕಪ್(2014,2018,2022)ನಲ್ಲಿ ಗೋಲು ಗಳಿಸಿದ ಸಾಧನೆ ಮಾಡಿದ್ದಾರೆ. ಎಲ್ಲ ಗೋಲುಗಳನ್ನು ನಾಕೌಟ್ ಸುತ್ತಿನಲ್ಲಿ ಗಳಿಸಿದ್ದಾರೆ. ಆರಂಭದಲ್ಲಿಯೇ ಪ್ರಾಬಲ್ಯ ಮೆರೆದ ಅರ್ಜೆಂಟೀನ 23ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಫ್ರಾನ್ಸ್‌ನ ಗೋಲ್‌ಕೀಪರ್ ಹ್ಯೂಗೊ ಲೊರಿಸ್‌ರನ್ನು ವಂಚಿಸಿದ ಮೆಸ್ಸಿ ಚೆಂಡನ್ನು ಗುರಿಗೆ ತಲುಪಿದರು. ಮೆಸ್ಸಿ ಖತರ್ ವಿಶ್ವಕಪ್‌ನನ ಗೋಲ್‌ಸ್ಕೋರರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.

36ನೇ ನಿಮಿಷದಲ್ಲಿ ಅಲೆಕ್ಸ್ ಮ್ಯಾಕ್ ಅಲಿಸ್ಟರ್ ನೀಡಿದ ಕ್ರಾಸ್ ನೆರವಿನಿಂದ ಏಂಜೆಲ್ ಡಿ ಮಾರಿಯಾ ಗೋಲು ಗಳಿಸಿ ಅರ್ಜೆಂಟೀನದ ಮುನ್ನಡೆ ದ್ವಿಗುಣಗೊಳಿಸಿ ಅಭಿಮಾನಿಗಳನ್ನು ಖುಷಿಗೊಳಿಸಿದರು. ಗೋಲು ಗಳಿಸಿದ ತಕ್ಷಣ ಅವರು ಭಾವೋದ್ವೇಗಕ್ಕೆ ಒಳಗಾದರು. 


*ವಿಶ್ವಕಪ್‌ನ ಎಲ್ಲ ಹಂತದಲ್ಲಿ ಗೋಲು ಗಳಿಸಿದ ಮೊದಲ ಆಟಗಾರ: ಮೆಸ್ಸಿ ವಿಶ್ವಕಪ್‌ನ ಗ್ರೂಪ್ ಹಂತ, ಪ್ರಿ-ಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಹಾಗೂ ಫೈನಲ್‌ನಲ್ಲಿ ಗೋಲು ಗಳಿಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

*ಐತಿಹಾಸಿಕ 26ನೇ ವಿಶ್ವಕಪ್ ಪಂದ್ಯ ಆಡಿದ ಮೆಸ್ಸಿ

*ದಾಖಲೆ 26ನೇ ವಿಶ್ವಕಪ್ ಪಂದ್ಯವನ್ನು ಆಡಿರುವ ಆಧುನಿಕ ಫುಟ್ಬಾಲ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಮೆಸ್ಸಿ ಜರ್ಮನಿಯ ಲೋಥರ್ ಮ್ಯಾಥ್ಯೂಸ್(25 ಪಂದ್ಯ)ದಾಖಲೆಯನ್ನು ಮುರಿದಿದ್ದಾರೆ.

*23ನೇ ನಿಮಿಷದಲ್ಲಿ ಪೆನಾಲ್ಟಿ ಸ್ಪಾಟ್‌ನಿಂದ ಗೋಲು ಗಳಿಸಿದ ಮೆಸ್ಸಿ ಅರ್ಜೆಂಟೀನದ ಗೋಲು ಖಾತೆ ತೆರೆದರು.

 *ಪ್ರಸಕ್ತ ಟೂರ್ನಿಯಲ್ಲಿ ಮೆಸ್ಸಿ 7ನೇ ಹಾಗೂ ವಿಶ್ವಕಪ್‌ನಲ್ಲಿ 13ನೇ ಗೋಲು ಗಳಿಸಿದ್ದಾರೆ.

*ವಿಶ್ವಕಪ್‌ನಲ್ಲಿ 13ನೇ ಗೋಲು ಗಳಿಸಿದ ಮೆಸ್ಸಿ ಸಾರ್ವಕಾಲಿಕ ಶ್ರೇಷ್ಠ ಗೋಲ್‌ಸ್ಕೋರರ್ ಪಟ್ಟಿಯಲ್ಲಿ ಬ್ರೆಝಿಲ್ ದಂತಕತೆ ಪೀಲೆ ದಾಖಲೆಯನ್ನು ಮುರಿದಿದ್ದಾರೆ.

Similar News