ಬಡತನದ ನಡುವೆ ಕ್ರಿಕೆಟ್ ಕ್ಷೇತ್ರದಲ್ಲಿ ಮಿಂಚಿ ಭಾರತದ ಅಂಡರ್ 19 T-20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಫಲಕ್ ನಾಝ್
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ಇಲ್ಲಿನ 18 ವರ್ಷದ ಫಲಕ್ ನಾಝ್ 19 ವರ್ಷ ಕೆಳಗಿನ ಭಾರತೀಯ ಮಹಿಳೆಯರ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಬಡತನ ಸಾಧನೆಗೆ ಅಡ್ಡಿಯಾಗದು ಎಂಬುದನ್ನು ಸಾಬೀತು ಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಜನವರಿ 2023 ರಲ್ಲಿ ನಡೆಯುವ ಪ್ರಥಮ ಅಂಡರ್-19 ಮಹಿಳೆಯರ ಟಿ20 ವಿಶ್ವ ಕಪ್ ಪಂದ್ಯಾವಳಿಯಲ್ಲಿ ಫಲಕ್ ಅವರನ್ನೊಳಗೊಂಡ ಭಾರತೀಯ ತಂಡ ಭಾಗವಹಿಸಲಿದೆ.
ಉತ್ತರ ಪ್ರದೇಶ ಜೂನಿಯರ್ ಕ್ರಿಕೆಟ್ ತಂಡದಲ್ಲಿ ಫಲಕ್ ತೋರಿದ ಅತ್ಯಪೂರ್ವ ಸಾಧನೆ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಒದಗಿಸಿದೆ. ಹನ್ನೆರಡನೇ ತರಗತಿ ವಿದ್ಯಾರ್ಥಿನಿಯಾಗಿರುವ ಫಲಕ್ ತಮ್ಮ ಯಶಸ್ಸಿನ ಶ್ರೇಯ ತಮ್ಮ ಕುಟುಂಬ ಹಾಗೂ ಕೋಚ್ ಅಜಯ್ ಯಾದವ್ ಅವರಿಗೆ ಸಲ್ಲಬೇಕು ಎಂದು ಹೇಳುತ್ತಾರೆ.
ಆರಂಭದಲ್ಲಿ ಕೇವಲ ಖುಷಿಗಾಗಿ ಕ್ರಿಕೆಟ್ ಆಡಲು ಆರಂಭಿಸಿದ ಫಲಕ್ ಅವರಿಗೆ ಕ್ರಮೇಣ ಕ್ರಿಕೆಟ್ ಅಂದರೆ ಪಂಚಪ್ರಾಣ ಎನ್ನುವಷ್ಟರ ಮಟ್ಟಿಗೆ ನಿಕಟವಾಯಿತಲ್ಲದೆ ಕ್ರಿಕೆಟ್ ವೃತ್ತಿಯನ್ನು ಆಯ್ಕೆ ಮಾಡಬೇಕೆಂಬ ಮಹದಾಸೆ ಆವರಲ್ಲಿ ಮೂಡಿತ್ತು. ಹನ್ನೆರಡು ವರ್ಷದವಳಾಗಿರುವಂದಿನಿಂದ ಕ್ರಿಕೆಟ್ ಆಡುತ್ತಿರುವ ಫಲಕ್‌ಗೆ ಯಾವುದೇ ಕ್ರೀಡಾ ಅಕಾಡೆಮಿಗೆ ಅಲ್ಲಿನ ದುಬಾರಿ ಶುಲ್ಕ ತೆತ್ತು ಪ್ರವೇಶ ಪಡೆಯುವುದು ಅಸಾಧ್ಯವಾಗಿತ್ತು. ಆದರೆ 2015 ರಲ್ಲಿ ಆಕೆಯ ಪ್ರತಿಭೆ ಗುರುತಿಸಿದ ಕ್ರಿಕೆಟ್ ಕೋಚ್ ಅಜಯ್ ಯಾದವ್ ಆಕೆಗೆ ಉಚಿತವಾಗಿ ತಮ್ಮ ಅಕಾಡೆಮಿಯಲ್ಲಿ ತರಬೇತಿ ನೀಡಲು ಮುಂದೆ ಬಂದಿದ್ದರು ಎಂದು twocircles.net ವರದಿ ಮಾಡಿದೆ.
ವೇಗದ ಬೌಲರ್ ಆಗಬೇಕೆಂಬುದು ಆಕೆಯ ಕನಸಾಗಿದೆ. ಕೋಚ್ ಸಲಹೆಯಂತೆ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಪರಿಣತಿ ಸಾಧಿಸಿ ಆಲ್-ರೌಂಡರ್ ಆಗಿದ್ದಾರೆ ಫಲಕ್. ಆಕೆ 2016 ರಲ್ಲಿ ಉತ್ತರ ಪ್ರದೇಶ ಜೂನಿಯರ್ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ಅಲ್ಲಿ ಆಕೆಯ ನಿರ್ವಹಣೆ ಆಕೆಗೆ ಈಗ ಭಾರತೀಯ ಅಂಡರ್-19 ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿದೆ.
ದೇಶವನ್ನು ಟಿ-20 ವಿಶ್ವ ಕಪ್‌ನಲ್ಲಿ ಪ್ರತಿನಿಧಿಸಲು ಹೆಮ್ಮೆಯಾಗುತ್ತಿದೆ, ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರುವ ವಿಶ್ವಾಸವಿದೆ ಎಂದು ಫಲಕ್ ಹೇಳಿದ್ದಾರೆ.
ಸವಾಲುಗಳನ್ನು ಮೆಟ್ಟಿ ನಿಂತ ದಿಟ್ಟೆ
ಫಲಕ್ ಅವರ ತಂದೆ ನಾಸಿರ್ ಅಹ್ಮದ್ ಖಾಸಗಿ ಶಾಲೆಯೊಂದರಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರೆ, ಅವರ ಏಳು ಮಂದಿಯ ಕುಟುಂಬಕ್ಕೆ ಆರ್ಥಿಕ ಬೆನ್ನೆಲುಬಾಗಲು ಫಲಕ್ ಸೋದರ ಶಿಕ್ಷಣ ಮೊಟಕುಗೊಳಿಸಿ ಸೈಕಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಯಾಗರಾಜ್‌ನ ಯಮುನಾ ನದಿ ತಟದಲ್ಲಿರುವ ಕಟಘರ್ ಪ್ರದೇಶದಲ್ಲಿ ಒಂದು ಕೊಠಡಿಯ ಟಿನ್ ಶೀಟ್ ಛಾವಣಿ ಹೊಂದಿರುವ ಮನೆಯಲ್ಲಿ ಫಲಕ್ ಕುಟುಂಬ ವಾಸಿಸುತ್ತಿದೆ.
ಈದೀಗ ಫಲಕ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವುದರಿಂದ ಆಕೆಯ ಕುಟುಂಬ ಸಂತಸಪಟ್ಟಿದೆ. ಬಡತನದ ನಡುವೆ ಉತ್ತಮ ಸಾಧನೆಗೈದ ಮಗಳ ಭವಿಷ್ಯ ಉಜ್ವಲವಾಗುವುದೆಂಬ ಆಶಾವಾದ ಆಕೆಯ ತಂದೆಗಿದೆ.