×
Ad

ಟ್ವಿಟರ್ ಸಿಇಒ ಹುದ್ದೆಯಿಂದ ನಿರ್ಗಮಿಸಲಿರುವ ಎಲಾನ್ ಮಸ್ಕ್ ಹೇಳಿದ್ದೇನು?

Update: 2022-12-21 12:28 IST

ಸ್ಯಾನ್ ಫ್ರಾನ್ಸಿಸ್ಕೊ: ಬದಲಿ ಆಯ್ಕೆ ದೊರೆತ ನಂತರ ತಾನು ಟ್ವಿಟರ್ (Twitter) ಸಿಇಒ ಹುದ್ದೆಯಿಂದ ಕೆಳಗಿಳಿಯುವುದಾಗಿ ಟ್ವಿಟರ್ ಮಾಲಕ ಎಲಾನ್ ಮಸ್ಕ್ (Elon Musk) ಪ್ರಕಟಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಸ್ಕ್, "ಆ ಹುದ್ದೆಯನ್ನು ನಿರ್ವಹಿಸಲು ಸಾಧ್ಯವಿರುವ ಮೂರ್ಖನೊಬ್ಬ ದೊರೆತ ಕೂಡಲೇ ನಾನು ಸಿಇಒ ಹುದ್ದೆಗೆ ರಾಜೀನಾಮೆ ನೀಡಿ, ಸಾಫ್ಟ್‌ವೇರ್ ಮತ್ತು ಸರ್ವರ್ ತಂಡವನ್ನು ಮಾತ್ರ ಮುನ್ನಡೆಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ರವಿವಾರ ಸಂಜೆ ತಾನು ಟ್ವಿಟರ್ ಮುಖ್ಯಸ್ಥನಾಗಿ ಮುಂದುವರಿಯಬೇಕೊ ಬೇಡವೊ ಎಂಬುದರ ಕುರಿತು ಎಲಾನ್ ಮಸ್ಕ್ ಟ್ವಿಟರ್ ಬಳಕೆದಾರರಿಂದ ಮತ ಅಭಿಯಾನ ನಡೆಸಿದ್ದರು. ಅದರಲ್ಲಿ ಬಹುತೇಕರು ಮಸ್ಕ್ ಟ್ವಿಟರ್ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದ್ದರು. ಅದಾದ ನಂತರ ಇದೇ ಮೊದಲ ಬಾರಿಗೆ ಟ್ವಿಟರ್ ಮುಖ್ಯಸ್ಥ ಹುದ್ದೆಯಿಂದ ನಿರ್ಗಮಿಸುವ ನಿರ್ಧಾರವನ್ನು ಮಸ್ಕ್ ಪ್ರಕಟಿಸಿದ್ದಾರೆ.

ಕಳೆದ ಕೆಲವು ವಾರಗಳಿಂದ ವಾಲ್ ಸ್ಟ್ರೀಟ್ ಬೀದಿಗಳಲ್ಲಿ ಮಸ್ಕ್ ಟ್ವಿಟರ್ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಕೂಗು ಜೋರಾಗಿದೆ. ಇದರೊಂದಿಗೆ ಟೆಸ್ಲಾ ಇಂಕ್ ಕಂಪನಿಯ ಪಾಲುದಾರರೂ ಕೂಡಾ ಸಾಮಾಜಿಕ ಮಾಧ್ಯಮ ಟ್ವಿಟರ್ ಬಗೆಗಿನ ಅವರ ಆಸಕ್ತಿಯನ್ನು ಪ್ರಶ್ನಿಸಿದ್ದರು. ಉತ್ಪನ್ನ ವಿನ್ಯಾಸ ಹಾಗೂ ಎಂಜಿನಿಯರಿಂಗ್ ವಿಭಾಗದ ಕೇಂದ್ರ ಬಿಂದುವಾಗಿರುವ ಅವರೇನಾದರೂ ವಿದ್ಯುತ್ ಚಾಲಿತ ವಾಹನಗಳ ವ್ಯವಹಾರವನ್ನು ಸಮರ್ಪಕವಾಗಿ ಚುರುಕುಗೊಳಿಸುವುದರಿಂದ ವಿಮುಖರಾಗುತ್ತಿದ್ದಾರೆಯೇ ಎಂದೂ ಪ್ರಶ್ನಿಸಿದ್ದರು.

ಇದೀಗ ಮಸ್ಕ್ ನನಗೆ ಸಾಕಷ್ಟು ಜವಾಬ್ದಾರಿಗಳಿದ್ದು, ಟ್ವಿಟರ್ ಸಿಇಒ ಹುದ್ದೆಗೆ ಇತರರನ್ನು ಹುಡುಕುತ್ತೇನೆ ಎಂದು ಹೇಳಿದ್ದಾರೆ. ನನ್ನ ಉತ್ತರಾಧಿಕಾರಿ ಯಾರೂ ಇಲ್ಲದಿದ್ದರೂ ವಾಸ್ತವವಾಗಿ ಟ್ವಿಟರ್ ಅನ್ನು ಜೀವಂತವಾಗಿ ಇಡುವ ಕೆಲಸ ಮಾಡಲು ಯಾರೂ ಸಿದ್ಧರಿಲ್ಲ ಎಂದು ಹೇಳಿಕೊಂಡಿದ್ದಾರೆ.

Similar News