ವ್ಯಕ್ತಿಯ ಅಪಹರಣ ಪ್ರಯತ್ನವನ್ನು ಚಾಣಾಕ್ಷತೆಯಿಂದ ತಡೆದ ರಿಕ್ಷಾ ಚಾಲಕ

Update: 2022-12-21 17:36 GMT

ಹೊಸದಿಲ್ಲಿ: ಆಟೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವನನ್ನು ಗುಂಪೊಂದು ಬಲವಂತವಾಗಿ ಕಾರಿಗೆ ಎಳೆದುಕೊಂಡಾಗ ಸಮಯ ಪ್ರಜ್ಞೆ ಮೆರೆದಿರುವ ಆಟೋ ಚಾಲಕ, ಆಟೋವನ್ನು ಕಾರಿಗೆ ಅಡ್ಡಲಾಗಿ ಚಲಾಯಿಸಿ ಅಪಹರಣ ಯತ್ನವನ್ನು ವಿಫಲಗೊಳಿಸಿರುವ ಘಟನೆ ಆಗ್ನೇಯ ದಿಲ್ಲಿಯ ಕಲ್ಕಾಜಿ ಪ್ರದೇಶದಿಂದ ವರದಿಯಾಗಿದೆ.

ರವಿವಾರ ಈ ಅಪಹರಣ ಪ್ರಯತ್ನ ನಡೆದಿದ್ದು, ಘಟನೆಯ ಸಂಬಂಧ ಓರ್ವ ವ್ಯಕ್ತಿ ಹಾಗೂ ಓರ್ವ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಗಳನ್ನು  ಉತ್ತರ ಪ್ರದೇಶದ ಸಾಹಿಬಾಬಾದ್ ನಿವಾಸಿ ಇಕ್ರಾಕ್ ಅಲಿ (27) ಹಾಗೂ ಸುಂದರ್ ನಗ್ರಿ ನಿವಾಸಿ ಅನುರಾಧ ಅಲಿಯಾಸ್ ಪ್ರೀತಿ ಗುಪ್ತ (19) ಎಂದು ಗುರುತಿಸಲಾಗಿದೆ.

ರವಿವಾರ ಸಂಜೆ 6.50ಕ್ಕೆ ಪೊಲೀಸರು ಸ್ಥಳಕ್ಕೆ ತೆರಳಿದಾಗ ಅಲಿ ಹಾಗೂ ಅನುರಾಧ ಇಬ್ಬರೂ ಅಪಹರಣಕ್ಕೀಡಾಗಿದ್ದ ಜಾವೇದ್‌ರೊಂದಿಗೆ ಕಾರಿನಲ್ಲಿ ಸೆರೆಯಾಗಿರುವುದು ಕಂಡು ಬಂದಿತ್ತು.

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ನನ್ನ ಇತರ ಸಹಚರರೊಂದಿಗೆ ನಾನು ಜಾವೇದ್ ಅವರನ್ನು ಹನಿಟ್ರ್ಯಾಪ್ ಮಾಡುವ ಪಿತೂರಿಯ ಭಾಗವಾಗಿದ್ದೆ ಎಂದು ಅನುರಾಧ ಬಹಿರಂಗ ಪಡಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಜಾವೇದ್ ಶ್ರೀಮಂತ ಕುಟುಂಬಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಆತನನ್ನು ಅಪಹರಿಸಿದರೆ ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡಬಹುದು ಎಂದು ನನ್ನ ಸಹಚರರು ನನಗೆ ತಿಳಿಸಿದ್ದರು ಎಂದು ತನಿಖೆಯ ವೇಳೆ ಅನುರಾಧ ಬಾಯ್ಬಿಟ್ಟಿದ್ದಾಳೆ.

ಜಾವೇದ್‌ರನ್ನು ಅಪಹರಣ ಮಾಡುವ ಮುನ್ನ ಮೂವರು ಆರೋಪಿಗಳು ಅನುರಾಧಳನ್ನು ಭೇಟಿ ಮಾಡುವಂತೆ ಎರಡು ಬಾರಿ ಅವರಿಗೆ ಸೂಚಿಸಿದ್ದರು. ಆದರೆ, ಆ ಎರಡು ಬಾರಿಯೂ ಅನುರಾಧಳನ್ನು ಭೇಟಿ ಮಾಡಲು ಜಾವೇದ್ ನಿರಾಕರಿಸಿದ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಆಗ್ನೇಯ ವಿಭಾಗ) ಸುರೇಂದ್ರ ಚೌಧರಿ ತಿಳಿಸಿದ್ದಾರೆ.

ಅನುರಾಧ ವಾಟ್ಸ್ ಆ್ಯಪ್ ಸಂಭಾಷಣೆ ಹಾಗೂ ಕರೆಗಳ ಮೂಲಕ ಜಾವೇದ್ ಸಂಪರ್ಕದಲ್ಲಿದ್ದಳು ಎಂದು ಹೇಳಲಾಗಿದೆ.

Similar News