2021ರಲ್ಲಿ ಪ್ರತಿ ದಿನ ಸರಾಸರಿ 115 ದಿನಗೂಲಿ ಕಾರ್ಮಿಕರು ಆತ್ಮಹತ್ಯೆ: ಲೋಕಸಭೆಗೆ ತಿಳಿಸಿದ ಕೇಂದ್ರ ಸರಕಾರ

Update: 2022-12-21 17:44 GMT

ಹೊಸದಿಲ್ಲಿ, ಡಿ. 21: 2021ರಲ್ಲಿ ಪ್ರತಿ ದಿನ ಸರಾಸರಿ 115 ದಿನಗೂಲಿ ಕಾರ್ಮಿಕರು ಹಾಗೂ 63 ಗೃಹಿಣಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೇಂದ್ರ ಸರಕಾರ(Central Govt) ಮಂಗಳವಾರ ಸಂಸತ್ತಿಗೆ ತಿಳಿಸಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮುಹಮ್ಮದ್ ಜಾವೇದ್(Muhammad Javed) ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರದ ಸಹಾಯಕ ಸಚಿವ ನಿತ್ಯಾನಂದ ರಾಯ್(Nithyananda Roy) ಅವರು ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೊದ ದತ್ತಾಂಶವನ್ನು ಉಲ್ಲೇಖಿಸಿದರು.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೊದ ದತ್ತಾಂಶದ ಪ್ರಕಾರ 2021ರಲ್ಲಿ ಭಾರತದಲ್ಲಿ ಒಟ್ಟು 1,64,033 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 42,004 ದಿನಗೂಲಿ ನೌಕರರು ಹಾಗೂ 23,179 ಗೃಹಿಣಿಯರು. ಒಟ್ಟು 20,231 ಸ್ವ ಉದ್ಯೋಗಿಗಳು, 15,870 ವೇತನ ಪಡೆಯುತ್ತಿರುವರು, 13,714 ನಿರುದ್ಯೋಗಿಗಳು ಹಾಗೂ 13,089 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ದೇಶದಲ್ಲಿ ದಿನಗೂಲಿ ನೌಕರರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ತಡೆಯಲು ಕೇಂದ್ರ ಸರಕಾರ ತೆಗೆದುಕೊಂಡ ಕ್ರಮಗಳನು ತಿಳಿಸುವಂತೆ ಜಾವೇದ್ ಕೋರಿದರು. ಇದಕ್ಕೆ ರಾಯ್ ಅವರು, ಕೃಷಿ ಕ್ಷೇತ್ರದ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಲು ಸರಕಾರ 2008ರಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದರು.

‘‘ಜೀವನ ಹಾಗೂ ಅಂಗವೈಕಲ್ಯಕ್ಕೆ ರಕ್ಷಣೆ, ಆರೋಗ್ಯ ಹಾಗೂ ಹೆರಿಗೆ ಸೌಲಭ್ಯಗಳು, ವೃದ್ಧಾಪ್ಯದಲ್ಲಿ ರಕ್ಷಣೆ ಮತ್ತು ಕೇಂದ್ರ ಸರಕಾರ ನಿರ್ಧರಿಸಬಹುದಾದ ಯಾವುದೇ ಇತರ ಸೌಲಭ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಅಸಂಘಟಿತ ಕಾರ್ಮಿಕರಿಗೆ ಸೂಕ್ತವಾದ ಕಲ್ಯಾಣ ಯೋಜನೆಗಳನ್ನು ರೂಪಿಸಲು ಈ ಕಾಯ್ದೆ ಅವಕಾಶ ನೀಡುತ್ತದೆ’’ ಎಂದು ಸಚಿವರು ತಿಳಿಸಿದರು.

ದಿನಗೂಲಿ ಕಾರ್ಮಿಕರಿಗೆ ಸರಕಾರ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಂತಹ ಯೋಜನೆಗಳ ಅಡಿಯಲ್ಲಿ ಜೀವ ವಿಮೆ ಹಾಗೂ ಅಂಗವಿಕಲತೆ ವಿಮೆಯನ್ನು ಒದಗಿಸುತ್ತದೆ ಎಂದು ನಿತ್ಯಾನಂದ ರಾಯ್ ತಿಳಿಸಿದರು. 

Similar News