ಚೀನಾ ಗಡಿ ಕುರಿತು ಚರ್ಚೆಗೆ ಅವಕಾಶ ನಿರಾಕರಣೆ: ವಿಪಕ್ಷಗಳಿಂದ ದಿನದ ಮಟ್ಟಿಗೆ ರಾಜ್ಯಸಭಾ ಕಲಾಪಗಳ ಬಹಿಷ್ಕಾರ

Update: 2022-12-22 15:00 GMT

ಹೊಸದಿಲ್ಲಿ,ಡಿ.22: ಗುರುವಾರ ಸದನದಲ್ಲಿ ಚೀನಾ(China) ಗಡಿ ಸಮಸ್ಯೆಯ ಕುರಿತು ಚರ್ಚೆಗೆ ಅವಕಾಶ ನಿರಾಕರಿಸಲ್ಪಟ್ಟ ಬಳಿಕ ಕಾಂಗ್ರೆಸ್(Congress) ನೇತೃತ್ವದಲ್ಲಿ ಸಮಗ್ರ ಪ್ರತಿಪಕ್ಷಗಳು ದಿನದ ಮಟ್ಟಿಗೆ ರಾಜ್ಯಸಭಾ ಕಲಾಪಗಳನ್ನು ಬಹಿಷ್ಕರಿಸಿದವು.

ಪ್ರತಿಪಕ್ಷ ಸದಸ್ಯರು ಅಧಿವೇಶನದಲ್ಲಿ ಈ ಹಿಂದೆ ಸದನ ನಾಯಕ ಪಿಯೂಷ ಗೋಯಲ್(Piyush Goyal) ಅವರು ಬಿಹಾರ ಕುರಿತು ನೀಡಿದ್ದ ಹೇಳಿಕೆಗಳಿಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದರು.

ಬೆಳಿಗ್ಗೆ ಶೂನ್ಯವೇಳೆಯಲ್ಲಿ ಪ್ರತಿಭಟನೆಗೆ ಮುಂದಾದ ಪ್ರತಿಪಕ್ಷಗಳ ಸದಸ್ಯರು ಸದನದ ಅಂಗಳಕ್ಕೆ ನುಗ್ಗಿ ಚೀನಾದೊಂದಿಗಿನ ಗಡಿ ಸಂಘರ್ಷದ ಕುರಿತು ಚರ್ಚೆಗೆ ಆಗ್ರಹಿಸಿದರು. ಗೋಯಲ್ ಅವರ ಹೇಳಿಕೆ ಬಿಹಾರಕ್ಕೆ ಮತ್ತು ಅದರ ಕೋಟ್ಯಂತರ ಜನರಿಗೆ ಮಾಡಿರುವ ಅವಮಾನವಾಗಿದೆ ಎಂದು ಆಕ್ರೋಶವನ್ನೂ ಅವರು ವ್ಯಕ್ತಪಡಿಸಿದರು.

ತಮ್ಮ ಆಸನಗಳಿಗೆ ಮರಳುವಂತೆ ಸಭಾಪತಿ ಜಗದೀಪ ಧನಕರ್ ಅವರು ಪ್ರತಿಭಟನಾನಿರತ ಸದಸ್ಯರನ್ನು ಪದೇಪದೇ ಕೋರಿಕೊಂಡರಾದರೂ ಪಟ್ಟು ಬಿಡದ ಸಂಸದರು ಘೋಷಣೆಗಳನ್ನು ಕೂಗುವುದನ್ನು ಮುಂದುವರಿಸಿದ್ದರು. ‘ಮೊದಲ ದಿನದಿಂದಲೇ ಚೀನಾದೊಂದಿಗೆ ಗಡಿ ಸಂಘರ್ಷದ ಕುರಿತು ಚರ್ಚೆಗೆ ನಾವು ಒತ್ತಾಯಿಸುತ್ತಲೇ ಇದ್ದೇವೆ,ಆದರೆ ಸರಕಾರವು ಅವಕಾಶವನ್ನು ನಿರಾಕರಿಸುವ ತನ್ನ ಮೊಂಡುತನವನ್ನು ಬಿಡುತ್ತಿಲ್ಲ. ಇಂದು ಇಡೀ ದಿನ ಸದನ ಕಲಾಪಗಳನ್ನು ಬಹಿಷ್ಕರಿಸಲು ಎಲ್ಲ ಪ್ರತಿಪಕ್ಷಗಳು ನಿರ್ಧರಿಸಿದವು ’ ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ(KC Venugopal) ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಚೀನಾ ಕುರಿತು ಚರ್ಚೆಗೆ ತಮ್ಮ ಬೇಡಿಕೆಗೆ ಒತ್ತು ನೀಡಲು ಮತ್ತು ಬಿಹಾರ ಕುರಿತು ಹೇಳಿಕೆಗಾಗಿ ಸದನ ನಾಯಕರಿಂದ ಕ್ಷಮೆ ಯಾಚನೆಗೆ ಆಗ್ರಹಿಸಿ ಇತರ ಪ್ರತಿಪಕ್ಷ ಸದಸ್ಯರು ಕಲಾಪಗಳನ್ನು ಬಹಿಷ್ಕರಿಸುವುದರಲ್ಲಿ ಕಾಂಗ್ರೆಸ್ನೊಂದಿಗೆ ಕೈಜೋಡಿಸಿದರು.

ಮಂಗಳವಾರ ಆರ್ಜೆಡಿ ಸಂಸದ ಮನೋಜ ಝಾ ಅವರು ಹೆಚ್ಚುವರಿ ವೆಚ್ಚಕ್ಕಾಗಿ ಸಂಸತ್ತಿನ ಅನುಮತಿ ಕೋರಲು ಧನವಿನಿಯೋಗ ಮಸೂದೆಯ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದಾಗ ಗೋಯಲ್ ಬಿಹಾರವನ್ನು ಟೀಕಿಸಿದ್ದರು.

ಸರಕಾರವು ಬಡವರಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಸಮಾನ ಗಮನವನ್ನು ನೀಡಬೇಕು ಎಂದು ಝಾ ಹೇಳಿದಾಗ ಅದಕ್ಕೆ ಪ್ರತಿಕ್ರಿಯಿಸಿದ್ದ ಗೋಯಲ್,‘ಇವರಿಗೆ ಸಾಧ್ಯವಾದರೆ ಇಡೀ ದೇಶವನ್ನೇ ಬಿಹಾರವನ್ನಾಗಿ ಮಾಡುತ್ತಾರೆ ’ ಎಂದು ಕುಟುಕಿದ್ದರು.

Similar News