ಚೀನಾದಲ್ಲಿ ಪ್ರಕರಣಗಳ ಏರಿಕೆಗೆ ಕಾರಣವಾದ ಕೋವಿಡ್ ರೂಪಾಂತರಿ ಮೊದಲು ಭಾರತದಲ್ಲಿ ಪತ್ತೆಯಾಗಿತ್ತು: ವರದಿ

Update: 2022-12-22 15:52 GMT

ಹೊಸದಿಲ್ಲಿ, ಡಿ. 22: ಚೀನಾದಲ್ಲಿ ಇತ್ತೀಚೆಗೆ ಕೋವಿಡ್(Covid) ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎನ್ನಲಾದ ಕೋವಿಡ್ ನ ಒಮಿಕ್ರಾನ್ ರೂಪಾಂತರಿಯ ಬಿಎಫ್.7 (BF.7)ಉಪ ವಂಶಾವಳಿ ಭಾರತದಲ್ಲಿ ಮೊದಲ ಬಾರಿಗೆ ಜುಲೈಯಲ್ಲಿ ಪತ್ತೆಯಾಗಿತ್ತು ಎಂದು ‘ದಿ ಹಿಂದು’ ಪತ್ರಿಕೆ ಬುಧವಾರ ವರದಿ ಮಾಡಿದೆ.

ಚೀನಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗುತ್ತಿರುವ ಕುರಿತು ಕಳವಳದ ನಡುವೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ(Mansukh Mandavia) ಅವರು ಭಾರತದಲ್ಲಿ ಪರಿಸ್ಥಿತಿಯ ಕುರಿತು ಚರ್ಚಿಸಲು ಬುಧವಾರ ಅಧಿಕೃತ ಸಭೆ ಆಯೋಜಿಸಿದ್ದರು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಅನಾಮಿಕ ಅಧಿಕಾರಿಗಳು, ಜುಲೈಯಿಂದ ಬಿಎಫ್.7 ಉಪ ವಂಶಾವಳಿಯ ನಾಲ್ಕು ಪ್ರಕರಣಗಳು ಜೆನೋಮ್ ಸೀಕ್ವೆನ್ಸಿಂಗ್(Genome sequencing) ಮೂಲಕ ಗುಜರಾತ್ ಹಾಗೂ ಒಡಿಶಾದಲ್ಲಿ ಗುರುತಿಸಲಾಗಿತ್ತು ಎಂದು ‘ದಿ ಹಿಂದು’ಗೆ ತಿಳಿಸಿದ್ದಾರೆ.

ಅಕ್ಟೋಬರ್ ಹಾಗೂ ನವೆಂಬರ್ ನಡುವೆ ಈ ರಾಜ್ಯಗಳಲ್ಲಿ ಬಿಎಫ್.7 ಹಾಗೂ ಬಿಎಫ್.12 ಉಪ ವಂಶಾವಳಿಯ ಎರಡು ಪ್ರಕರಣಗಳು ವರದಿಯಾಗಿವೆ ಎಂದು ಗುಜರಾತ್ ಆರೋಗ್ಯ ಇಲಾಖೆಯ ಅಧಿಕಾರಿಗಳು ಎನ್ಡಿಟಿವಿಗೆ ತಿಳಿಸಿದ್ದಾರೆ. ಆದರೆ, ಒಡಿಶಾ ಹಾಗೂ ಗುಜರಾತ್ನ ಈ ನಾಲ್ಕು ಪ್ರಕರಣಗಳು ಎರಡು ರಾಜ್ಯಗಳಲ್ಲಿ ರೋಗದ ತೀವ್ರತೆ ಅಥವಾ ಸೋಂಕಿನ ಹೆಚ್ಚಳಕ್ಕೆ ಕಾರಣವಾಗಿಲ್ಲ ಎಂದು ಅಧಿಕಾರಿಗಳು ‘ದಿ ಹಿಂದು’ಗೆ ಮಾಹಿತಿ ನೀಡಿದ್ದಾರೆ.

ಚೀನಾದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವು ಅದರ ‘ಶೂನ್ಯ ಕೋವಿಡ್’ ನೀತಿಯ ಸಡಿಲಿಕೆಯೇ ಕಾರಣ ಎಂದು ಅವರು ಅಂದಾಜಿಸಿದ್ದಾರೆ.

Similar News