ಡಿ.26, 27: ಅವಲಕ್ಕಿಪಾರೆಯಲ್ಲಿ ಅಂತಾರಾಷ್ಟ್ರೀಯ ಆದಿಮ ಕಲೆಗಳ ಹಬ್ಬ

Update: 2022-12-22 16:38 GMT

ಉಡುಪಿ: ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಆದಿಮ ಕಲೆಯ ಹಬ್ಬ (ಇಂಟರ್‌ನೇಶನಲ್ ರಾಕ್ ಆರ್ಟ್ ಫೆಸ್ಟ್) ಡಿ.26 ಮತ್ತು 27ರಂದು ಕುಂದಾಪುರ ತಾಲೂಕಿನ ಇಡೂರು ಕುಂಞಾಡಿ ಗ್ರಾಮದ ಬಳಿಯ ಅವಲಕ್ಕಿಪಾರೆ ಪ್ರಾಗೈತಿಹಾಸಿಕ ಕ್ಷೇತ್ರದಲ್ಲಿ ನಡೆಯಲಿದೆ.

ರಾಕ್ ಆರ್ಟ್ ಫೆಸ್ಟ್‌ನ ಸಂಘಟನಾ ಕಾರ್ಯದರ್ಶಿ ಪ್ರೊ.ಟಿ.ಮುರುಗೇಶಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ನೀಡಿದರು. ಡಿ.26ರ ಸೋಮವಾರ ಬೆಳಗ್ಗೆ 11ಗಂಟೆಗೆ ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ದೇವಳದ ಅನುವಂಶಿಕ ವ್ಯವಸ್ಥಾಪಕ ವಿಶ್ವಸ್ಥ ಸದಾಶಿವ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು.

ಆಸ್ಟ್ರಿಯಾದ ಕಲಾ ಇತಿಹಾಸ ತಜ್ಞ ಡಾ.ಇರ್ವಿನ್ ನ್ಯೂಮೇಯರ್ ಸಮ್ಮೇಳನದ ಮಹಾ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದ ವ್ಯವಸ್ಥಾಪಕ ವಿಶ್ವಸ್ಥ ಡಾ.ಅತುಲ್ ಕುಮಾರ್ ಶೆಟ್ಟಿ, ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಕುಂದಾಪುರದ ನ್ಯಾಯವಾದಿ ಕೆ.ಬಾಲಕೃಷ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಪ್ರಾಗೈತಿಹಾಸದ ಕಲಾ ಪ್ರದರ್ಶನವನ್ನು ಚಿತ್ರದುರ್ಗದ ಪ್ರಾಗೈತಿಹಾಸಿಕ ಹಿರಿಯ ಸಂಶೋಧಕ ಲಕ್ಷ್ಮಣ್ ತೆಲಗಾವಿ ಉದ್ಘಾಟಿಸುವರು. ಪ್ರಾಗೈತಿಹಾಸಿಕ ಸಂಚಿಕೆಯನ್ನು ಮನುಷಾ ಅಧ್ಯಕ್ಷ ಡಾ.ಜಯರಾಮ ಶೆಟ್ಟಿಗಾರ್ ಬಿಡುಗಡೆ ಗೊಳಿಸುವರು. ಇಡೂರು ಕುಂಞಾಡಿ ಗ್ರಾಪಂ ಅಧ್ಯಕ್ಷ  ಅಮೀನ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಿರ್ವ ಎಂಎಸ್‌ಆರ್‌ಎಸ್  ಕಾಲೇಜು ಪ್ರಾಂಶುಪಾಲ ಡಾ.ನಾರಾಯಣ ಎಂ.ಪಕ್ಕಳ, ಬಳ್ಳಾರಿಯ ಡಾ.ರವಿ ಕೋರಿಶೆಟ್ಟರ್ ಉಪಸ್ಥಿತರಿರುವರು.

ಸಮಾವೇಶದಲ್ಲಿ ಡಾ.ರವಿ ಕೋರಿಶೆಟ್ಟರ್ ದಿಕ್ಸೂಚಿ ಭಾಷಣ ಮಾಡಲಿದ್ದು, ಅಲಹಾಬಾದ್ ಸೆಂಟ್ರಲ್ ವಿವಿಯ ಪ್ರೊ.ಡಾ.ಮೋಹನ್ ಆರ್. ಹಿರಿಯ ಇತಿಹಾಸ ತಜ್ಞ  ಡಾ.ಎ. ಸುಂದರ ಕುರಿತು ವಿಶೇಷ ಉಪನ್ಯಾಸ ನೀಡುವರು. ವಿವಿಧ ವಿದ್ವಾಂಸರು ಸಂಶೋಧನಾ ಪ್ರಬಂಧ ಮಂಡಿಸುವರು.

ಡಿ.27ರಂದು ಬೆಳಗ್ಗೆ 9ರಿಂದ ಕಲಾವಿದರಿಂದ ಪ್ರಾಗೈತಿಹಾಸಿಕ ಚಿತ್ರಗಳ ಪ್ರದರ್ಶನ ನಡೆಯಲಿದೆ. ಅಪರಾಹ್ನ 2ಗಂಟೆಗೆ ಸಮಾರೋಪವು ಆಸ್ಟ್ರಿಯಾದ ಕಲಾ ಇತಿಹಾಸಜ್ಞ ಡಾ.ಇರ್ವಿನ್ ನ್ಯೂಮೇಯರ್ ಉಪಸ್ಥಿತಿಯಲ್ಲಿ ನಡೆಯಲಿದೆ. ಉದ್ಯಮಿ ಮನೋಹರ್ ಎಸ್.ಶೆಟ್ಟಿ, ಶಿರ್ವದ ಪ್ರೊ. ರಘು ರಾಮ್ ಶೆಟ್ಟಿ ಯು., ಸಂತೋಷ್ ಹೆಗ್ಡೆ, ಸುನಿಲ್ ಮಿಶ್ರಾ, ಡಾ.ನವೀನ್ ಕೋಣಾಜೆ, ಜನ್ಮನೆ ಆನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು. ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ಕೆ.ಜಿ.ಮಂಜುನಾಥ್  ಅಧ್ಯಕ್ಷತೆ ವಹಿಸುವರು.

ಸುದ್ದಿಗೋಷ್ಟಿಯಲ್ಲಿ ಡಾ.ಇರ್ವಿನ್ ನ್ಯೂಮೇಯರ್, ಆಸ್ಟ್ರಿಯಾದ ಕಲಾ ಶಿಕ್ಷಕಿ ಕ್ರಿಸ್ಟೀನಾ, ವಿದ್ಯಾರ್ಥಿಗಳಾದ ದಿಶಾಂತ್, ವಿಶಾಲ್ ರೈ, ಅರುಣ್ ಉಪಸ್ಥಿತರಿದ್ದರು.

ಇಡೂರು ಕುಂಞಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅವಲಕ್ಕಿ ಪಾರೆ  ಕರಾವಳಿಯ ಬೃಹತ್ ಆದಿಮ ಕಲೆಯ ನಿವೇಶನವಾಗಿದೆ. ಇಲ್ಲಿನ 20 ಎಕರೆ ಪ್ರದೇಶದಲ್ಲಿ ಅರ್ಧ ಎಕರೆಯಲ್ಲಿರುವ ಬಂಡೆ ಮೇಲೆ ಕಲ್ಲಿನಿಂದ ಕುಟ್ಟಿ ಮಾಡಿದ ಚಿತ್ರವು ಕ್ರಿಸ್ತಪೂರ್ವ 10,000 ಕಾಲದ್ದಾಗಿದೆ. ಇದೀಗ ಇಲ್ಲೇ ಅಂತಾರಾಷ್ಟ್ರೀಯ ಆದಮಿ ಕಲೆಯ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದರು.

ಬುದ್ಧನಬೆಟ್ಟು, ಗಾವಳಿಯಲ್ಲಿ ನೂತನ ಶಿಲಾಯುಗ ಹಾಗೂ ಕದಳಿ, ಮಂದಾರ್ತಿ, ಪಳ್ಳಿ, ದಕ್ಷಿಣ ಕನ್ನಡ ಜಿಲ್ಲೆಯ ಆತೂರು ಕುಂಡಾಜೆಯಲ್ಲಿ ಬೃಹತ್ ಶಿಲಾಯುಗದ ಕಲಾ ಚಿತ್ರಗಳಿದ್ದು ಇವನ್ನು ರಕ್ಷಿಸಿ, ಇನ್ನಷ್ಟು ಅಧ್ಯಯನ ಹಾಗೂ ಸಂಶೋಧನೆ ಕೈಗೊಳ್ಳುವ  ಅಗತ್ಯವಿದೆ   ಎಂದು ಪ್ರೊ. ಮುರುಗೇಶಿ ತಿಳಿಸಿದರು.

Similar News