ನ್ಯಾ.ಎ.ಜೆ. ಸದಾಶಿವ ಮತ್ತು ಕಾಂತರಾಜ್ ನೇತೃತ್ವದ ಆಯೋಗದ ವರದಿ ಸದನದಲ್ಲಿ ಮಂಡಿಸಲು ಆಗ್ರಹ
ಮಂಗಳೂರು: ನ್ಯಾ.ಎ.ಜೆ. ಸದಾಶಿವ ಮತ್ತು ಎಚ್. ಕಾಂತರಾಜ್ ನೇತೃತ್ವದ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಬೇಕು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಆಗ್ರಹಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಪರಿಶಿಷ್ಟ ಜಾತಿಗಳ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಕುರಿತು ಅಧ್ಯಯನ ನಡೆಸಲು 2005ರಲ್ಲಿ ನ್ಯಾ.ಎ.ಜೆ. ಸದಾಶಿವ ಆಯೋಗ ರಚನೆಯಾಗಿತ್ತು. ಅಲ್ಲದೆ 2012ರಲ್ಲಿ ಸರಕಾರಕ್ಕೆ ತನ್ನ ವರದಿಯನ್ನು ನೀಡಿತ್ತು. ಇದಾದ ಬಳಿಕ 2015ರಲ್ಲಿ ಎಚ್. ಕಾಂತರಾಜ್ ಅಧ್ಯಕ್ಷತೆಯಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಎಲ್ಲಾ ಜನ ಸಮುದಾಯಗಳ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಕುರಿತು ಸಮೀಕ್ಷೆ/ಅಧ್ಯಯನ ನಡೆಸಿ 2019ರಲ್ಲಿ ವರದಿ ನೀಡಿತ್ತು. ಈ ಎರಡೂ ವರದಿಗಳು ಪರಿಶಿಷ್ಟ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿ ಬಗ್ಗೆ ಮಹತ್ವಪೂರ್ಣ ಅಂಶಗಳನ್ನು ಕಲೆಹಾಕಿವೆ ಮತ್ತು ಶಿಫಾರಸ್ಸುಗಳನ್ನು ಮಾಡಿವೆ ಎನ್ನಲಾಗಿವೆ. ಆದರೆ ನೂರಾರು ಕೋ.ರೂ. ಜನರ ತೆರಿಗೆ ಹಣದಿಂದ ರೂಪಿತಗೊಂಡ ಈ ಎರಡೂ ವರದಿಗಳನ್ನು ರಾಜ್ಯದ ಶಾಸನ ಸಭೆಯಲ್ಲಿ ಮಂಡಿಸಿ, ಸಾರ್ವಜನಿಕ ಚರ್ಚೆ, ಸಮಾಲೋಚನೆಗೆ ಅವಕಾಶ ಕಲ್ಪಿಸಿಕೊಡಲು ಸರಕಾರಗಳು ಹಿಂದೇಟು ಹಾಕುತ್ತಿವೆ ಎಂದು ಆಪಾದಿಸಿದರು.
ರಾಜ್ಯದ ಪರಿಶಿಷ್ಟ ಜಾತಿಗಳ ವರ್ಗಿಕರಣ (ಒಳಮೀಸಲಾತಿ) ಕುರಿತು ಕಾನೂನು ಸಚಿವ ಮಾಧಸ್ವಾಮಿ ನೇತೃತ್ವದ ಪರಿಶಿಷ್ಟ ಜಾತಿಗಳ ವರ್ಗೀಕರಣ ಕುರಿತ ಸಚಿವ ಸಂಪುಟದ ಉಪಸಮಿತಿಯು ಸರಕಾರಕ್ಕೆ ಯಾವುದೇ ಶಿಫಾರಸುಗಳನ್ನು ಮಾಡುವ ಮುನ್ನ ಈ ಎರಡೂ ಆಯೋಗಗಳ ವರದಿಗಳನ್ನು ಈ ಅಧಿವೇಶನದಲ್ಲೇ ವಿಧಾನ ಸಭೆಯಲ್ಲಿ ಮಂಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಸೀತಾರಾಮ ಮುಗೇರ ಕೊಂಚಾಡಿ, ಪದ್ಮನಾಭ ನರಿಂಗಾನ, ಸುಂದರ ಮೇರ, ಅಶೋಕ್ ಕೊಂಚಾಡಿ, ಎಂ. ದೇವ್, ಶಿವಾನಂದ ಬಲ್ಲಾಳ್‌ಬಾಗ್, ಪದ್ಮನಾಭ, ಡಿ. ದಶರಥ, ಕಾಂತಪ್ಪಅಲಂಗಾರ್, ಮಣಿ ಬಪ್ಪಳಿಗೆ, ಅನಿಲ್ ಕುಮಾರ್ ಕಂಕನಾಡಿ, ಮೋಹನಾಂಗಯ್ಯ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.