ಉಡುಪಿ: ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ವಿರುದ್ಧ ದೂರು ದಾಖಲು

Update: 2022-12-22 17:49 GMT

ಉಡುಪಿ: ನೂರಾರು ಜನರಿಂದ ಹಣ ಹೂಡಿಕೆ ಮಾಡಿಕೊಂಡು ವಂಚಿಸಿರುವುದಾಗಿ ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಕಾರ್ಕಳ ಮೂಲದ ಪ್ರಕಾಶ್ ಕಾಮತ್ ಎನ್ನುವವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಬಿ.ವಿ ಲಕ್ಷ್ಮೀನಾರಾಯಣ ಭಟ್ ಎಂಬವರು ಅಧ್ಯಕ್ಷರಾಗಿರುವ ಉಡುಪಿ ಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ 2019ರಲ್ಲಿ ಎಫ್ಡಿ ಇಟ್ಟಿದ್ದು, ಈ ಹಣಕ್ಕೆ ಸಹಕಾರ ಸಂಘ ಪ್ರತಿ ತಿಂಗಳು ಶೇ.10ರಂತೆೆ ಬಡ್ಡಿಯನ್ನು ಪ್ರಕಾಶ್ ಅವರ ಎಸ್ಬಿ ಖಾತೆಗೆ ಹಾಕುತ್ತಿದ್ದು 3 ವರ್ಷದ ನಂತರ ರಿನಿವಲ್ ಕೂಡಾ ಮಾಡಿದ್ದರು.
ಆದರೆ ಜೂನ್ 2022ರಿಂದ ಇವರ ಖಾತೆಗೆ ಬಡ್ಡಿ ಹಣವನ್ನು ಹಾಕದಿರುವ ಬಗ್ಗೆ ವಿಚಾರಿಸಿದಾಗ ಸ್ವಲ್ಪ ದಿನದಲ್ಲೆ ಬಡ್ಡಿಯನ್ನು ನೀಡುವುದಾಗಿ ನಂಬಿಸುತ್ತಿದ್ದರು. ಆದರೆ ಈ ತನಕ ನೀಡಿರಲಿಲ್ಲ. ಡಿ.20ರಂದು ದಿನಪತ್ರಿಕೆ ಯಲ್ಲಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿಯಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಪ್ರತಿಭಟನೆ ಎಂಬುದಾಗಿ ವರದಿಯಾಗಿದ್ದನ್ನು ನೋಡಿ ಪ್ರಕಾಶ್ ಕಾಮತ್ ಅವರು ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿಗೆ ಬಂದು ನೋಡಿದಾಗ ಸೊಸೈಟಿ ಮುಚ್ಚಿತ್ತು.

ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ದೂರುದಾರರಂತೆ ಇನ್ನೂ  5 ಮಂದಿಯಲ್ಲಿ ಒಟ್ಟು 40 ಲಕ್ಷದ 59 ಸಾವಿರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಹಾಗೂ ಇತರ ನೂರಾರು ಜನರಿಂದ ಕೂಡಾ ಹೂಡಿಕೆ ಮಾಡಿಕೊಂಡು ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಬಿ.ವಿ ಲಕ್ಷ್ಮೀನಾರಾಯಣ ಭಟ್, ಮ್ಯಾನೇಜರ್ ಆಶಾ ಹಾಗೂ ಆಡಳಿತ ಮಂಡಳಿಯ ಸದಸ್ಯರು ಬಡ್ಡಿಯನ್ನು ಸರಿಯಾಗಿ ನೀಡಿಲ್ಲ ಹಾಗೂ ಸಹಕಾರ ಸಂಘವನ್ನು ಮುಚ್ಚಿಕೊಂಡು ಮೋಸ, ನಂಬಿಕೆ ದ್ರೋಹಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News