ಸುರತ್ಕಲ್ ಮಾರುಕಟ್ಟೆ ಕಟ್ಟಡದ ಕಾಮಗಾರಿ ತ್ವರಿತ ಪೂರ್ಣಗೊಳಿಸಲು ಕ್ರಮ: ಸಚಿವ ಬೈರತಿ ಬಸವರಾಜು

Update: 2022-12-23 17:47 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 23: ‘ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸುರತ್ಕಲ್ ಮಾರುಕಟ್ಟೆ ಕಟ್ಟಡ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತಕ್ಕೆ ಸರಕಾರದಿಂದ ಅನುಮೋದನೆ ನೀಡಿ, ಟೆಂಡರ್ ಕರೆದು ಎಲ್ಲ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಡಾ.ಭರತ್ ಶೆಟ್ಟಿ ವೈ.ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಉದ್ದೇಶಿತ ಮಾರುಕಟ್ಟೆ ನಿರ್ಮಾಣಕ್ಕೆ ಅಗತ್ಯವಿರುವ 3.56 ಎಕರೆ ಭೂಮಿ ಪೈಕಿ ಪ್ರಸ್ತುತ 3.26 ಎಕರೆ ಭೂಮಿ ಮಾತ್ರವಿದ್ದು, ಕಂದಾಯ ಇಲಾಖೆಗೆ ಸೇರಿದ ನಾಡ ಕಚೇರಿ ಕಟ್ಟಡವನ್ನು ಸ್ಥಳಾಂತರ ಮಾಡಿ ಮಾರುಕಟ್ಟೆ ನಿರ್ಮಾಣಕ್ಕೆ ಆಸ್ಥೆ ವಹಿಸಲಾಗುವುದು ಎಂದರು.

2022ರ ಮಾರ್ಚ್ 29ರ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ಬಾಕಿ ಉಳಿದಿರುವ ಕಾಮಗಾರಿಗೆ ಚಾಲ್ತಿ ದರಪಟ್ಟಿಯಂತೆ ನೂತನವಾಗಿ ಟೆಂಡರ್ ಆಹ್ವಾನಿಸಿ ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಸವರಾಜು ಮಾಹಿತಿ ನೀಡಿದರು.

Similar News