ತಲಪಾಡಿ: ಸ್ಕೂಟರ್ ಗೆ ಢಿಕ್ಕಿ ಹೊಡೆದು ಪರಾರಿಯತ್ನ; ಆರೋಪಿ ಕಾರು ಚಾಲಕನನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

Update: 2022-12-23 17:58 GMT

ಉಳ್ಳಾಲ: ಸ್ಕೂಟರ್ ಗೆ ಢಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಕಾರನ್ನು ತಡೆದ ಸಾರ್ವಜನಿಕರು ಆರೋಪಿ ಚಾಲಕನನ್ನು ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ದೇವಿಪುರದಲ್ಲಿ ನಡೆದಿದೆ.

ಕೇರಳ ಮೂಲದ ಕಾರು ಮತ್ತು ಅದರ ಚಾಲಕನನ್ನು ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಚಾಲಕ ಮುಬಾರಿಷ್ ಶುಕ್ರವಾರ ಸಂಜೆ ಕಾರಿನಲ್ಲಿ ಮಂಗಳೂರಿಂದ ಕೇರಳದ ಕಡೆಗೆ ಅತಿ ವೇಗದಿಂದ ಧಾವಿಸುತ್ತಿದ್ದ ಎನ್ನಲಾಗಿದ್ದು, ರಾ.ಹೆ. 66 ರ ಕೋಟೆಕಾರು ಹೆದ್ದಾರಿಯಲ್ಲಿ ಸ್ಕೂಟರ್ ಗೆ ಕಾರು ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸ್ಕೂಟರ್ ಸವಾರ ಸೆಟಿದ್ ಬಾಷಾಂಗ್(30) ಗಂಭೀರ ಗಾಯಗೊಂಡು‌ ನಗರದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಸಹ ಸವಾರ ಅಲಿ ಸಾಗರ್(30) ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.

ವಿದೇಶಿಗರಾಗಿರುವ ಸ್ಕೂಟರ್ ಸವಾರ, ಸಹ ಸವಾರ ಮಂಗಳೂರು ವಿ.ವಿಯಲ್ಲಿ ವ್ಯಾಸಂಗಕ್ಕೆಂದು ಬಂದಿದ್ದು, ದೇರಳಕಟ್ಟೆಯ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು ಎಂದು ತಿಳಿದು ಬಂದಿದೆ.

Similar News