ಜಾಮೀನು ದೊರೆತರೂ ಸಿದ್ದೀಕ್ ಕಪ್ಪನ್‌ ಬಿಡುಗಡೆ ವಿಳಂಬಗೊಳ್ಳುವ ಸಾಧ್ಯತೆ

Update: 2022-12-24 08:53 GMT

ಹೊಸದಿಲ್ಲಿ: ಅಕ್ಟೋಬರ್‌ 2020 ರಲ್ಲಿ ಹತ್ರಸ್‌ ಸಾಮೂಹಿಕ ಅತ್ಯಾಚಾರ ಘಟನೆ ವರದಿ ಮಾಡಲು ತೆರಳುವ ವೇಳೆ ಬಂಧಿತರಾಗಿದ್ದ ಹಾಗೂ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಖ್‌ ಕಪ್ಪನ್‌ ಅವರಿಗೆ ಡಿಸೆಂಬರ್‌ 23,ಶುಕ್ರವಾರದಂದು ಅಲಹಾಬಾದ್‌ ಹೈಕೋರ್ಟ್‌  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ನೀಡಿದೆ. ಆದರೆ ಹಲವಾರು ಕಾರಣಗಳಿಂದ ಅವರ ಬಿಡುಗಡೆ ವಿಳಂಬಗೊಳ್ಳಬಹುದೆಂದು ಹೇಳಲಾಗಿದೆ.

ಸೆಪ್ಟೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಅವರಿಗೆ ಯುಎಪಿಎ ಪ್ರಕರಣದಲ್ಲಿ ಪ್ರಕರಣದಲ್ಲಿ ಜಾಮೀನು ನೀಡಿದ್ದರೂ ಜಾರಿ ನಿರ್ದೇಶನಾಲಯ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅನ್ವಯ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಲಕ್ನೋ ಜೈಲಿನಲ್ಲಿಯೇ ಉಳಿಯುವಂತಾಗಿತ್ತು. ಶುಕ್ರವಾರ ಅಲಹಾಬಾದ್‌ ಹೈಕೋರ್ಟಿನ ಲಕ್ನೋ ಪೀಠ ಈ ಪ್ರಕರಣ ಕುರಿತು ಜಾಮೀನು ನೀಡಿದೆ.

ಯಾವುದೇ ಷರತ್ತು ವಿಧಿಸದೆಯೇ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರುಗೊಳಿಸಿದೆಯಾದರೂ ಈ ಕುರಿತು ಆದೇಶದ ಪ್ರತಿಗಾಗಿ ಕಾಯಲಾಗುತ್ತಿದೆ ಎಂದು ಕಪ್ಪನ್‌ ಪರ ವಕೀಲರು ಹೇಳಿದ್ದಾರೆ. ಅಷ್ಟೇ ಅಲ್ಲದೆ ನ್ಯಾಯಾಲಯ ಎರಡು ಶೂರಿಟಿಗಳನ್ನು ಕೇಳಿದೆ ಎಂದಿದ್ದಾರೆ.

ಕೋರ್ಟುಗಳಿಗೆ ಶುಕ್ರವಾರ ಈ ವರ್ಷದ ಕೊನೆಯ ಕೆಲಸದ ದಿನವಾಗಿರುವುದರಿಂದ ಕಪ್ಪನ್‌ ಅವರು ನ್ಯಾಯಾಲಯಗಳು ಮತ್ತೆ ತೆರೆದುಕೊಳ್ಳುವ ಜನವರಿ 2 ರ ತನಕ ಜೈಲಿನಲ್ಲಿರಬೇಕಾಗುತ್ತದೆ.

ಯುಎಪಿಎ ಪ್ರಕರಣದ ಜಾಮೀನು ಆದೇಶದಲ್ಲಿ ಸೂಚಿಸಿದಂತೆ ಶೂರಿಟಿಯ ಕಡ್ಡಾಯ ಪರಿಶೀಲನೆಯನ್ನೂ  ಸಂಬಂಧಿತ ಪ್ರಾಧಿಕಾರಗಳು ಪೂರ್ಣಗೊಳಿಸಿಲ್ಲ ಎಂದು ವಕೀಲರು ಹೇಳಿದ್ದಾರೆ. ಇಂತಹ ಕೆಲವೊಂದು ವಿಳಂಬದಿಂದಾಗಿ ಕಪ್ಪನ್‌ ಅವರ ಬಿಡುಗಡೆಯೂ ವಿಳಂಬಗೊಳ್ಳಬಹುದೆಂದು ಅವರು ಹೇಳುತ್ತಾರೆ.

Similar News