ಕುಂದಾಪುರಕ್ಕೆ ಆರ್‌ಟಿಓ ಕಚೇರಿ ಇಲ್ಲ: ಬೈಂದೂರು ಶಾಸಕರಿಗೆ ಉತ್ತರಿಸಿದ ಸಾರಿಗೆ ಸಚಿವ

Update: 2022-12-24 13:23 GMT

ಕುಂದಾಪುರ: ರಾಜ್ಯದಲ್ಲಿ ಸಾರಿಗೆ ಇಲಾಖೆಯಲ್ಲಿ ಇನ್ನು ಮುಂದೆ ಹೊಸದಾಗಿ ಪ್ರಾದೇಶಿಕ ಸಾರಿಗೆ ಕಚೇರಿಗಳನ್ನು ಆರಂಭಿಸುವುದಿಲ್ಲ ಎಂದು ರಾಜ್ಯದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದಿರುವ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರಶೆಟ್ಟಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಇಲಾಖೆಯಲ್ಲಿ 30ಕ್ಕೂ ಹೆಚ್ಚು ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲಾಗುತ್ತಿದೆ. ಜತೆಗೆ ಗ್ರಾಮ ಒನ್ ಮತ್ತು ಜನಸೇವಕ ಯೋಜನೆಗಳಿಂದಲೂ ಸಾರಿಗೆ ಇಲಾಖೆಯ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸಲಾಗುತ್ತಿದೆ. ಹೀಗಾಗಿ ಯಾವುದೇ ಹೊಸ ಆರ್‌ಟಿಓ ಕಚೇರಿಗಳನ್ನು ಆರಂಭಿಸುವ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದು ಹೇಳಿದರು.

ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಸ್ತಾಪನೆ ಮಾಡಿದ ಶಾಸಕರು, ಉಡುಪಿ ಜಿಲ್ಲೆಯಲ್ಲಿ ಒಂದೇ ಪ್ರಾದೇಶಿಕ ಸಾರಿಗೆ ಕಚೇರಿ ಇರುವುದರಿಂದ ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನರಿಗೆ ಸಾಕಷ್ಟು ವೆಚ್ಚ ಹಾಗೂ ಸಮಯ ಹರಣವಾಗುತ್ತಿದೆ. ಹೀಗಾಗಿ ಕುಂದಾಪುರದಲ್ಲಿ ಸಾರಿಗೆ ಇಲಾಖೆಯ ಕಚೇರಿ ಆರಂಭಿಸುವಂತೆ ಮನವಿ ಮಾಡಿದ್ದರು.

ಆರ್‌ಟಿಓ ಕಚೇರಿಗಾಗಿ ಹೋರಾಟ: ಕಂದಾಯ ಉಪ ವಿಭಾಗ, ಅರಣ್ಯ ಉಪ ವಿಭಾಗ, ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸೇರಿದಂತೆ ಸರಕಾರದ ಪ್ರಮುಖ ಕಚೇರಿಗಳನ್ನು ಹೊಂದಿರುವ ಹಾಗೂ ಜಿಲ್ಲೆಯ ಪ್ರಮುಖ ಸಾರಿಗೆ ವ್ಯವಹಾರಿಕಾ ಕೇಂದ್ರವಾಗಿರುವ ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಉಪ ಕಚೇರಿಯನ್ನು ಆರಂಭಿಸುವಂತೆ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ.
ದಿ.ಎ.ಜಿ.ಕೊಡ್ಗಿ, ಡಾ.ವಿ.ಎಸ್.ಆಚಾರ್ಯ, ಮಾಜಿ ವಿಧಾನಪರಿಷತ್ ಸಭಾಪತಿ ಕೆ.ಪ್ರತಾಪ್ಚಂದ್ರ ಶೆಟ್ಟಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವರಾದ ಕೆ.ಜಯಪ್ರಕಾಶ ಹೆಗ್ಡೆ, ವಿನಯಕುಮಾರ ಸೊರಕೆ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಮಾಜಿ ವಿಧಾನಪರಿಷತ್ ಸದಸ್ಯ ವಿನ್ನಿಫ್ರೆಡ್ ಫೆರ್ನಾಂಡಿಸ್ ಮುಂತಾದವರು ಇದಕ್ಕಾಗಿ ಹಕ್ಕೊತ್ತಾಯವನ್ನು ಮಾಡಿದ್ದರು.
ಜಿಲ್ಲಾ ಲಾರಿ ಮಾಲಕರ ಸಂಘಟನೆಯ ರಾಜೇಶ್ ಕಾವೇರಿ, ಕಲಾಕ್ಷೇತ್ರದ ಬಿ.ಕಿಶೋರಕುಮಾರ ಸೇರಿದಂತೆ ಈ ಭಾಗದ ಅನೇಕರು ವೈಯಕ್ತಿಕ ನೆಲೆಯಲ್ಲಿ ಹಾಗೂ ಸಂಘ-ಸಂಸ್ಥೆಗಳ ಮೂಲಕವೂ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುವ ಪ್ರಯತ್ನವನ್ನು ಮಾಡಿದ್ದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿ ಮಂಜೂರಾತಿ ಆದೇಶವಾಗುವಾಗಲೇ ಕುಂದಾಪುರಕ್ಕೂ ಮಂಜೂರಾತಿ ಆದೇಶವಾಗುತ್ತದೆ ಎನ್ನುವ ನಿರೀಕ್ಷೆಗಳು ಹುಸಿಯಾಗಿದ್ದವು.
ಕುಂದಾಪುರಕ್ಕೆ ಈ ಹಿಂದೆ ಭೇಟಿ ನೀಡಿದ್ದ ಅನೇಕ ಸಾರಿಗೆ ಸಚಿವರು ಆರ್‌ಟಿಓ ಕಚೇರಿ ಸ್ಥಾಪಿಸುವ ಭರವಸೆ ನೀಡಿದ್ದರು.ಬುಧವಾರ ವಿಧಾನಸಭೆಯ ಅಧಿವೇಶನದಲ್ಲಿ ಸಾರಿಗೆ ಸಚಿವರು ನೀಡಿರುವ ಉತ್ತರದಿಂದ, ಸದ್ಯದಲ್ಲಿಯೇ ಕುಂದಾಪುರದಲ್ಲಿ ಆರ್‌ಟಿಓ ಕಚೇರಿ ಆಗುವ ಸಾರ್ವಜನಿಕರ ನಿರೀಕ್ಷೆ, ಭರವಸೆಗಳಿಗೆ ತಣ್ಣೀರು ಎರಚಿದಂತಾಗಿದೆ.

Similar News