ಕ್ಯಾಪಿಟಲ್ ಹಿಲ್ಸ್ ದಂಗೆಗೆ ತನ್ನನ್ನು ಹೊಣೆಗಾರನಾಗಿ ಮಾಡಿದ ಸಂಸದೀಯ ಸಮಿತಿಯ ವರದಿ ವಿರುದ್ಧ ಟ್ರಂಪ್ ವಾಗ್ದಾಳಿ

Update: 2022-12-24 18:17 GMT

ವಾಷಿಂಗ್ಟನ್, ಡಿ.24: ಜನವರಿ 6ರಂದು ನಡೆದ ಕ್ಯಾಪಿಟಲ್ ಹಿಲ್ಸ್ ದಂಗೆ ಪ್ರಕರಣದಲ್ಲಿ ತನ್ನನ್ನು ಹೊಣೆಗಾರನೆಂದು ಹೆಸರಿಸಿದ ಅಮೆರಿಕ ಸಂಸದೀಯ ಸಮಿತಿಯ ವರದಿಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ತನ್ನ ವಿಶಿಷ್ಟ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ತನ್ನ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುಥ್ ಸೋಷಿಯಲ್’(Truth Social)ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಅವರು ‘ ನಮ್ಮ ಕ್ಯಾಪಿಟಲ್ ಹಿಲ್ಸ್ ನಲ್ಲಿ ನಾನು ಯಾವುದೇ ರೀತಿಯ ಹಿಂಸಾಚಾರಕ್ಕೆ ಉದ್ದೇಶಿಸಿದ್ದೆ ಅಥವಾ ಬಯಸಿದ್ದೆ ಎಂಬುದಕ್ಕೆ ಆಯ್ಕೆ ಮಾಡದ ಸಮಿತಿಯು ಒಂದೇ ಒಂದು ಚೂರು ಪುರಾವೆಯನ್ನೂ ಒದಗಿಸಿಲ್ಲ’ ಎಂದು ಹೇಳಿದ್ದಾರೆ.

“ಆರೋಪ ಆಧಾರ ರಹಿತ ಮತ್ತು ಮಹಾನ್ ಸುಳ್ಳು ಆಗಿರುವುದರಿಂದ ಪುರಾವೆ ಇರಲು ಸಾಧ್ಯವೇ ಇಲ್ಲ. ಜನವರಿ 6ರ ಘಟನೆಗಳು ದಂಗೆಯಾಗಿರಲಿಲ್ಲ. ಅದು ದುರಂತವಾಗಿ ನಿಯಂತ್ರಣ ಕಳೆದುಕೊಂಡ ಪ್ರತಿಭಟನೆಯಾಗಿತ್ತು” ಎಂದು ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ. ತನ್ನ ಸರಕಾರ ಪ್ರತಿಭಟನಾಕಾರರನ್ನು ನಿಯಂತ್ರಿಸಲು 20,000 ನ್ಯಾಷನಲ್ ಗಾರ್ಡ್ಸ್ ಪಡೆಯನ್ನು ನಿಯೋಜಿಸಲು ಆಗ್ರಹಿಸಿತ್ತು ಎಂದು ಟ್ರಂಪ್ ಹಲವು ಬಾರಿ ಹೇಳಿದ್ದರು. ಆದರೆ ಈ ಪ್ರತಿಪಾದನೆಯನ್ನು ಸಂಸದೀಯ ಸಮಿತಿ ನಿರಾಕರಿಸಿದೆ.

ವರದಿಯನ್ನು ಪ್ರಕಟಿಸಿದ ಸಮಿತಿಯು ಟ್ರಂಪ್ ಗೆ ಮತ್ತೆ ಅಧಿಕಾರ ವಹಿಸಲು ಅವಕಾಶ ನೀಡಬಾರದು ಎಂದು ಕರೆ ನೀಡಿದೆ. ಅಧ್ಯಕ್ಷೀಯ ಚುನಾವಣೆಯನ್ನು ಅನೂರ್ಜಿತಗೊಳಿಸಲು ಟ್ರಂಪ್ ಮತ್ತವರ ಸಂಗಡಿಗರು ನಡೆಸಿದ ಕನಿಷ್ಟ 20 ಕೃತ್ಯಗಳನ್ನು ವರದಿ ಉಲ್ಲೇಖಿಸಿದೆ. ಈ ಪುರಾವೆಗಳು ನೇರ ತೀರ್ಮಾನಕ್ಕೆ ದಾರಿ ಮಾಡಿಕೊಟ್ಟಿವೆ. ಅದೇನೆಂದರೆ, ಜನವರಿ 6ರ ಘಟನೆಯ ಹಿಂದೆ ಇದ್ದ ಪ್ರಮುಖ ಏಕೈಕ ವ್ಯಕ್ತಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅವರನ್ನು ಇತರ ಹಲವರು ಅನುಸರಿಸಿದರು.

ಟ್ರಂಪ್ ಇಲ್ಲದೆ ಜನವರಿ 6ರ ಯಾವುದೇ ಘಟನೆ ನಡೆದಿಲ್ಲ. ಅವರು ತಮ್ಮ ಬೆಂಬಲಿಗರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿಲ್ಲ ಎಂದು 800 ಪುಟಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Similar News