ದೇಶದಲ್ಲಿ ಸಾಂಸ್ಕೃತಿಕ ಚಳವಳಿಯ ಅಗತ್ಯವಿದೆ: ಮುಖ್ಯಮಂತ್ರಿ ಬೊಮ್ಮಾಯಿ

​ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ

Update: 2022-12-25 18:17 GMT

ಮಂಗಳೂರು: ಜಗತ್ತಿನ ಎಲ್ಲೆಡೆಯೂ ಧರ್ಮದ ಹೆಸರಿನಲ್ಲಿ ಹಿಂಸಾಚಾರ ನಡೆಯುತ್ತಿದೆ. ಇದನ್ನು ತಡೆಗಟ್ಟುವ ಶಕ್ತಿ ಭಾರತಕ್ಕೆ ಮಾತ್ರವಿದೆ. ಹಾಗಾಗಿ ಹಿಂಸೆಯ ಮನಪರಿವರ್ತನೆಗೆ ಸಾಂಸ್ಕೃತಿಕ ಚಳವಳಿಯು ರೂಪುಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮೂಡುಬಿದಿರೆಯ ಆಳ್ವಾಸ್‌ನ ವಿದ್ಯಾಗಿರಿ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್-ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಮೌಲ್ಯ, ಆದರ್ಶಗಳನ್ನು ತುಂಬಿ, ಹಿರಿಯರಿಗೆ ಗೌರವಾದರ ಹಾಗೂ ಕಿರಿಯರಿಗೆ ಪ್ರೀತಿಯನ್ನು ತೋರುವ ಗುಣ ಧರ್ಮವನ್ನು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತಿಳಿಹೇಳಲಾಗುತ್ತದೆ. ಇದರ ಶಿಬಿರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಚರಿತ್ರೆ ನಿರ್ಮಿಸುವ ಮತ್ತು ಶಿಸ್ತು ರೂಪಿಸುವ ಅವಕಾಶ ಸಿಗಲಿದೆ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ರಾಷ್ಟ್ರ ನಿರ್ಮಾಣದ ಸಂಕಲ್ಪ: ಜಾಂಬೂರಿಯು ಸಾಂಸ್ಕೃತಿಕ ಹಾಗೂ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಕಾರ್ಯಕ್ರಮವಾಗಿದೆ. ರಾಷ್ಟ್ರವು ಶಕ್ತಿಯುತವಾಗಿ, ಸುಸಂಸ್ಕೃತವಾಗಿ, ಜಾಗತಿಕವಾಗಿ ಗಟ್ಟಿಗೊಂಡಿದೆ ಎಂಬುದು ಈ ಕಾರ್ಯಕ್ರಮದಿಂದ ತಿಳಿಯಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿಯ ರಾಷ್ಟ್ರನಿರ್ಮಾಣದ ಕರೆಯನ್ನು ಸಾಕಾರಗೊಳಿಸುವ ಸಂಕಲ್ಪವನ್ನು ಇಲ್ಲಿ ಮಾಡಲಾಗಿದೆ. ಭಾರತೀಯತೆ ಎಂದರೆ ಮಾನವೀಯತೆಯಾಗಿದೆ. ಇಂತಹ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ 100 ವರ್ಷದ ಸಾಧನೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಶದಲ್ಲಿ ಆಚಾರರಿದ್ದಾರೆ. ಆದರೆ ಆಚರಣೆಯಾಗುತ್ತಿಲ್ಲ. ಸ್ವಾಮಿ ವಿವೇಕಾನಂದರು, ಶಂಕರಾಚಾರ್ಯರಿರುವ ದೇಶದಲ್ಲಿ ದೊಡ್ಡ ತತ್ವಭಂಡಾರವಿದೆ ಎಂದರು.

ಸಚ್ಚಾರಿತ್ರ್ಯ ಹಾಗೂ ಮೌಲ್ಯಗಳನ್ನು ಅಳವಡಿಸುವ ಆಳ್ವಾಸ್ ಸಂಸ್ಥೆ: ಪಾಶ್ಚಿಮಾತ್ಯದ ದಾಳಿಯಿಂದ ಸಾಂಸ್ಕೃತಿಕ ಗೊಂದಲವು ಯುವ ಪೀಳಿಗೆಗೆ ಉಂಟಾಗಿದೆ. ನಮ್ಮಲ್ಲೇನಿದೆ ಎಂಬುದು ನಾಗರಿಕತೆಯಾಗಿದೆ. ನಾವೇನಾಗಿದ್ದೇವೆ ಎಂಬುದು ಸಂಸ್ಕೃತಿಯಾಗಿದೆ. ಪರೋಪಕಾರ, ದಯೆ, ಧರ್ಮ, ಸತ್ಯಮಾರ್ಗಗಳಲ್ಲಿ ಮುಂದುವರೆಯುತ್ತಿದ್ದೇವೆ ಎಂಬುದು ನಮಗೆ ತಿಳಿದಿರಬೇಕು. ನಮ್ಮ ಸಂಸ್ಕೃತಿಗೆ ಆಳವಾದ ಬೇರುಗಳನ್ನು ಸ್ಥಾಪಿಸುವ ಕೆಲಸವನ್ನು ಆಳ್ವಾಸ್ ಸಂಸ್ಥೆ ಮಾಡುತ್ತಿದೆ. ಈ ದೇಶದಲ್ಲಿ ವಿವಿಧ ಜಾತಿ ಭಾಷೆಗಳಿದ್ದರೂ, ನಮ್ಮನ್ನೆಲ್ಲ ಒಗ್ಗೂಡಿಸಿರುವುದು ಭಕ್ತಿಯ ಚಳವಳಿಯಾಗಿದೆ. ರಾಮಾಯಣ, ಶಂಕರಾಚಾರ್ಯರು, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್‌ರವರೆಗೆ ಅನೇಕ ಭಕ್ತಿ ಚಳವಳಿಗಳು ನಡೆದಿವೆ ಎಂದರು.

ಸ್ಕೌಟ್ ಗೈಡ್ಸ್‌ನ ರಾಷ್ಟ್ರೀಯ ಅಧ್ಯಕ್ಷ, ಹಾಗೂ ರಾಜ್ಯಸಭಾ ಸದಸ್ಯ ಅನಿಲ್ ಜೈನ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ, ಶಾಸಕರಾದ ಉಮನಾಥ್ ಕೋಟ್ಯಾನ್, ಸಿ.ಟಿ.ರವಿ, ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ದ.ಕ.ಜಿಪಂ ಸಿಇಒ ಡಾ. ಕುಮಾರ್, ದ.ಕ.ಜಿಲ್ಲಾ ಎಸ್ಪಿ ಋಷಿಕೇಷ್ ಭಗವಾನ್ ಸೋಣಾವಣೆ, ಶ್ರೀಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತ ಡಾ. ಮೋಹನ್ ಆಳ್ವಾ ಸ್ವಾಗತಿಸಿದರು.

Similar News